Site icon Vistara News

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Viral video

ಪುಣೆ: ಹಸಿರು ಸಮವಸ್ತ್ರದ ಮೂಲಕ ವಿವಾದಕ್ಕೀಡಾಗಿದ್ದ ಜೊಮ್ಯಾಟೊ(Zomato) ಇದೀಗ ಮತ್ತೆ ಸುದ್ದಿಯಲ್ಲಿದೆ. ಜೊಮ್ಯಾಟೊದಿಂದ ಆರ್ಡರ್‌ ಮಾಡಲಾಗಿದ್ದ ಪನೀರ್‌ ಬಿರಿಯಾನಿ(Paneer Biriyani)ಯಲ್ಲಿ ಚಿಕನ್‌ ಪೀಸ್‌ ಸಿಕ್ಕಿದ್ದು, ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ ಎಂದು ಗ್ರಾಹಕರೊಬ್ಬರು ಆರೋಪಿಸಿರುವ ಘಟನೆ ವರದಿಯಾಗಿದೆ. ಪುಣೆ ಮೂಲದ ಪಂಕಜ್‌ ಶುಕ್ಲಾ ಎಂಬ ವ್ಯಕ್ತಿ ಎಕ್ಸ್‌ನಲ್ಲಿ ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಶುಕ್ಲಾ ಆರೋಪ ಏನು?

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

ಇದಾದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ನನಗೆ ಪೂರ್ತಿ ಹಣ ರೀಫಂಡ್‌ ಆಗಿದೆಯಾದರೂ ಇದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ನಾನು ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿರುವ ಕಾರಣ ಇದು ಪಾಪ ಕೃತ್ಯ ಆದಂತಾಗಿದೆ. ಜೊಮ್ಯಾಟೊದ ಎಡವಟ್ಟಿನಿಂದಾಗಿ ನನ್ನ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ಗೆ ತಕ್ಷಣ ರಿಯಾಕ್ಟ್‌ ಮಾಡಿರುವ ಜೊಮ್ಯಾಟೊ, ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಿಮ್ಮ ಆರ್ಡರ್ನ ಡಿಟೇಲ್ಸ್‌ ಕಳುಹಿಸಿ. ನಾವು ಚೆಕ್‌ ಮಾಡುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ:Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ಇನ್ನು ಪಂಕಜ್‌ ಶುಕ್ಲಾ ಟ್ವೀಟ್‌ಗೆ ಅನೇಕ ನೆಟ್ಟಿಗರು ಪರ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಶುದ್ಧ ಸಸ್ಯಹಾರಿ ಆಗಿರುವ ನೀವು ಏಕೆ ಮಾಂಸಾಹಾರ ಹೊಟೇಲ್‌ನಿಂದ ಆರ್ಡರ್‌ ಮಾಡಿದ್ದೀರಿ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೂ ಕೆಲವರು ಶುದ್ಧ ಸಸ್ಯಹಾರಿ ಹೊಟೇಲ್‌ಗಳಿಂದಲೇ ಆರ್ಡರ್‌ ಮಾಡಿ. ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

Exit mobile version