Site icon Vistara News

Viral Video: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ಆಹಾರ ಪೊಟ್ಟಣದ ಮೇಲೆ ಜಿರಳೆ ನರ್ತನ!

indigo

indigo

ನವದೆಹಲಿ: ಇಂಡಿಗೊ ವಿಮಾನದ (IndiGo plane) ಆಹಾರ ಸಂಗ್ರಹದ ಜಾಗದಲ್ಲಿ ಜಿರಳೆಗಳು ಓಡಾಡುತ್ತಿರುವ ವಿಡಿಯೊವನ್ನು ಪತ್ರಕರ್ತ ತರುಣ್‌ ಶುಕ್ಲಾ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದು, ವೈರಲ್‌ ಆಗಿದೆ (Viral Video). ವಿಮಾನಯಾನ ಸಂಸ್ಥೆಯಲ್ಲಿನ ನೈರ್ಮಲ್ಯ, ಆಹಾರ ಸುರಕ್ಷತೆ ಬಗ್ಗೆ ಇದು ಪ್ರಶ್ನೆ ಹುಟ್ಟು ಹಾಕಿದೆ. ಅನೇಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಕೂಡಲೆ ಸಮಸ್ಯೆಗೆ ಸ್ಪಂದಿಸಿದ ಇಂಡಿಗೊ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡಿದೆ.

ವಿಡಿಯೊದಲ್ಲೇನಿದೆ?

“ವಿಮಾನದ ಆಹಾರ ತಯಾರಿ ಪ್ರದೇಶದಲ್ಲಿ ಜಿರಳೆಗಳು ಕಂಡು ಬಂದಿರುವುದು ನಿಜವಾಗಿಯೂ ಭಯಾನಕ ದೃಶ್ಯʼʼ ಎಂದು ಬರೆದುಕೊಂಡಿರುವ ತರುಣ್‌ ಶುಕ್ಲಾ ಜಿರಳೆಗಳು ಓಡಾಡುತ್ತಿರುವ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಜತೆಗೆ ಅವರು ಇಂಡಿಗೊದ ಪ್ರತಿಕ್ರಿಯೆಯನ್ನೂ ಹಂಚಿಕೊಂಡಿದ್ದಾರೆ. ಸಂಬಂಧಪಟ್ಟವರು ಕೂಡಲೇ ಪ್ರತಿಕ್ರಿಯಿಸಿ ಈ ಸಮಸ್ಯೆ ನಿವಾರಣೆಯತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ ಮತ್ತು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತರುಣ್‌ ಶುಕ್ಲಾ ಹೇಳಿದ್ದಾರೆ.

ʼʼನಮ್ಮ ಸಿಬ್ಬಂದಿ ತಕ್ಷಣ ಅಗತ್ಯ ಕ್ರಮ ಕೈಗೊಂಡರು. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ತಕ್ಷಣ ಇಡೀ ವಿಮಾನವನ್ನು ಸ್ವಚ್ಛಗೊಳಿಸಿದ್ದೇವೆ. ಇಂಡಿಗೊದಲ್ಲಿ ಸುರಕ್ಷಿತ, ತೊಂದರೆ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕಾರ್ಯ ಪ್ರವೃತ್ತರಾಗಿದ್ದೇವೆ ಮತ್ತು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಇನ್ನು ಮುಂದೆ ನಾವು ಸ್ವಚ್ಛತೆ ಮತ್ತು ನೈರ್ಮಲ್ಯದ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತೇವೆ” ಎಂದು ಇಂಡಿಗೊ ತಿಳಿಸಿದೆ.

ನೆಟ್ಟಿಗರು ಏನಂದ್ರು?

ತರುಣ್‌ ಶುಕ್ಲಾ ವಿಡಿಯೊವನ್ನು ಪೋಸ್ಟ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಅನೇಕರು ಕಮೆಂಟ್‌ ಮೂಲಕ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ತಮಗಾದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. “ಇಂಡಿಗೊ ಅಂತಾರಾಷ್ಟ್ರೀಯ ವಿಮಾನದಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಯಾವಾಗಲೂ ತಡವಾಗಿ ಚಲಿಸುತ್ತದೆ. ಅಲ್ಲದೆ ಪಾನೀಯಗಳನ್ನೂ ನೀಡುವುದಿಲ್ಲ. ನಾನು ಇಂಡಿಗೊ ಅಂತಾರಾಷ್ಟ್ರೀಯ ವಿಮಾನದಲ್ಲಿ ಮತ್ತೆ ಸಂಚರಿಸುವುದಿಲ್ಲ” ಎಂದು ಒಬ್ಬರು ಹೇಳಿದ್ದಾರೆ.

ಇನ್ನೊಬ್ಬರು ಇಂಡಿಗೊ ಸಂಸ್ಥೆಯ ಬೆಂಬಲಕ್ಕೆ ಧಾವಿಸಿದ್ದಾರೆ. ಇಂಡಿಯೊ ಯಾವತ್ತೂ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುತ್ತದೆ ಎಂದಿದ್ದಾರೆ. ʼʼಇಂಡಿಗೊದಲ್ಲಿ ನಾನು ಇಷ್ಟಪಡುವುದು ಇದನ್ನೇ. ನಿಯಂತ್ರಣಕ್ಕೆ ಮೀರಿದ ಸಮಸ್ಯೆಗಳು ಯಾರಿಗಾದರೂ ಎದುರಾಗಬಹುದು. ಅದನ್ನು ಯಾವ ರೀತಿ ಎದುರಿಸುತ್ತಾರೆ ಎನ್ನುವುದು ಮುಖ್ಯ. ಇಂಡಿಗೊ ತನ್ನ ಸೇವೆಯಲ್ಲಿ ಏನಾದರೂ ಸಮಸ್ಯೆ ಎದುರಾದರೆ ಯಾವಾಗಲೂ ಅದನ್ನು ತ್ವರಿತವಾಗಿ ಪರಿಹರಿಸಲು ಮುಂದಾಗುತ್ತದೆ” ಎಂದು ಅವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral News: ವ್ಯಕ್ತಿಯ ಮೂಗಿನ ಹೊಳ್ಳೆಗಳಲ್ಲಿ 68 ಬೆಂಕಿ ಕಡ್ಡಿ! ಇದು ಕೂಡ ವಿಶ್ವ ದಾಖಲೆ

ಹಿಂದೆಯೂ ಆಗಿತ್ತು

ಇಂಡಿಗೊ ಇಂತಹ ನೈರ್ಮಲ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇಂಡಿಗೊ ವಿಮಾನದಲ್ಲಿ ಊಟ ಮಾಡುವಾಗ ಜಿರಳೆ ತಮ್ಮ ಮೇಜಿನ ಮೇಲೆ ತೆವಳುತ್ತಿರುವ ವಿಡಿಯೊವನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದರು. ಮಾತ್ರವಲ್ಲ 2022ರ ಅಕ್ಟೋಬರ್‌ನಲ್ಲಿ ಪಾಟ್ನಾದಿಂದ ದೆಹಲಿಗೆ ಹೋಗುವ ವಿಮಾನದಲ್ಲಿ ಮತ್ತೊಬ್ಬ ಪ್ರಯಾಣಿಕರಿಗೂ ಜಿರಳೆ ಕಂಡು ಬಂದಿತ್ತು. ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರಿಗೆ ವಿತರಿಸಿದ ಸ್ಯಾಂಡ್‌ವಿಚ್‌ನಲ್ಲಿ ಹುಳ ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version