ನವದೆಹಲಿ: ದಿಲ್ಲಿ ಮೆಟ್ರೋ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತದೆ. ನಿಮಗೆ ಮನೋರಂಜನೆ ಬೇಕೆ? ಹಾಗಾದರೆ ದಿಲ್ಲಿ ಮೆಟ್ರೋದೊಳಗೆ ಒಂದು ಸುತ್ತು ಬನ್ನಿ ಎನ್ನುವ ಮಾತು ಈಗ ಜನ ಜನಿತವಾಗಿದೆ. ಕೆಲವು ದಿನಗಳ ಹಿಂದೆ ಜೋಡಿಯೊಂದರ ರೊಮ್ಯಾನ್ಸ್ ಮೂಲಕ ಸುದ್ದಿಯಾಗಿದ್ದ ದಿಲ್ಲಿ ಮೆಟ್ರೋ ಇದೀಗ ಫೈಟ್ ಸೀನ್‌ಗೆ ಸಾಕ್ಷಿಯಾಗಿದೆ. ಸದ್ಯ ಈ ವಡಿಯೊ ವೈರಲ್ ಆಗಿದೆ (Viral Video).
ವಿಡಿಯೊದಲ್ಲೇನಿದೆ?
ಇಬ್ಬರು ಯುವಕರು ಜವಗಳವಾಡುತ್ತಿರುವುದು ಕಂಡುಬಂದಿದೆ. ಬೋಗಿಯೊಳಗೆ ವಿಪರೀತ ಜನ ಸಂದಣಿ ಇದ್ದರೂ ಅವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಡಬ್ಲ್ಯುಡಬ್ಲ್ಯುಇಯ ವೃತ್ತಿಪರ ಹೋರಾಟಗಾರರಂತೆ ಇಬ್ಬರ ನಡುವೆ ತೀವ್ರ ಜಗಳ ಕಂಡು ಬಂತು. ಸಹಪ್ರಯಾಣಿಕರು ಏನು ನಡೆಯುತ್ತಿದೆ ಎಂದು ತಿಳಿಯದೆ ಶಾಕ್‌ನಿಂದ ಈ ಫೈಟ್ ಸೀನ್ ಅನ್ನು ನೋಡುತ್ತ ನಿಂತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ಇಬ್ಬರ ಜಗಳದ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಅಲ್ಲಿದ್ದವರಿಗೆ ಬಿಟ್ಟಿ ಮನೋರಂಜನೆ ಸಿಕ್ಕಿದ್ದಂತೂ ನಿಜ. ಉತ್ತಮ ಬಾಕ್ಸಿಂಗ್ ಪಂದ್ಯ ನೋಡಿದ ಅನುಭವ ಆಗಿದ್ದರಲ್ಲಿ ಅಚ್ಚರಿ ಇಲ್ಲ.
Boxing-Match kinda kalesh b/w Two man inside Delhi metro over seat issues
— Ghar Ke Kalesh (@gharkekalesh) December 16, 2023
pic.twitter.com/x6o4DScrN7
ನೆಟ್ಟಿಗರು ಏನಂದ್ರು?
ಸಹಜವಾಗಿಯೇ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಇವರ ಹೊಡೆತಗಳು ತುಂಬಾ ವೃತ್ತಿಪರವಾಗಿವೆ. ಇದು ಮೊಹಮ್ಮದ್ ಅಲಿ ವರ್ಸಸ್ ಜಾರ್ಜ್ ಚುವಾಲೊ ಮಟ್ಟದ ಬಾಕ್ಸಿಂಗ್ ಪಂದ್ಯದಂತೆ ಭಾಸವಾಯಿತುʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸಲಹೆ ನೀಡಿ, “ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೆ ದೇಶಕ್ಕಾಗಿ ಚಿನ್ನದ ಪದಕ ಗಳಿಸಬಹುದು” ಎಂದು ಹೇಳಿದ್ದಾರೆ. ʼʼಈ ಪಂದ್ಯ ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ. ಪ್ರೇಕ್ಷಕರಿಂದ ಯಾರೂ ಹಣವನ್ನು ಸಂಗ್ರಹಿಸಲಿಲ್ಲ, ಉಚಿತ ಮನರಂಜನೆ” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಶೂಟಿಂಗ್ ನಡಿತಾ ಇದೆʼʼ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ʼʼರೆಫರಿ ಇಲ್ಲದ ಪಂದ್ಯʼʼ ಎಂದು ಮಗದೊಬ್ಬರು ಹೇಳಿದ್ದಾರೆ. ʼʼಗ್ಲೌಸ್ ಇಲ್ಲ ಬಾಕ್ಸಿಂಗ್ ಪಂದ್ಯʼʼ ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರೆ ಮನೋರಂಜನೆ ಕೊರತೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಮರ್ಷಿಯಲ್ ಸಿನಿಮಾದಲ್ಲಿ ಕಂಡುಬರುವ ರೊಮ್ಯಾನ್ಸ್, ಫೈಟ್, ಡ್ಯಾನ್ಸ್ ಎಲ್ಲವೂ ಇಲ್ಲಿ ಕಂಡು ಬರುತ್ತದೆ ಎನ್ನುತ್ತಾರೆ ನೆಟ್ಟಿಗರು.
ಹಿಂದೆಯೂ ವೈರಲ್ ಆಗಿತ್ತು
ಕೆಲವು ದಿನಗಳ ಹಿಂದೆ ದಿಲ್ಲಿ ಮೆಟ್ರೋದ ಒಳಗೆ ವ್ಯಕ್ತಿಯೊಬ್ಬ ವೃದ್ಧನನ್ನು ಥಳಿಸುತ್ತಿರುವುದನ್ನು ದೃಶ್ಯ ವೈರಲ್ ಆಗಿತ್ತು. ಹಲ್ಲೆಯ ಹಿಂದಿನ ನಿಖರ ಕಾರಣ ತಿಳಿದು ಬಂದಿರಲಿಲ್ಲ. ತಕ್ಷಣ ಮಧ್ಯಪ್ರವೇಶಿಸಿದ ಸಹ ಪ್ರಯಾಣಿಕರು ಆ ಹಿರಿಯ ವ್ಯಕ್ತಿಯನ್ನು ವ್ಯಕ್ತಿಯ ದಾಳಿಯಿಂದ ಕಾಪಾಡಿದ್ದರು. ಅದಕ್ಕೂ ಕೆಲವು ವಾರಗಳ ಮೊದಲು ಪ್ರಯಾಣಿಕರ ಮಧ್ಯೆಯೇ ಯುವ ಜೋಡಿಯೊಂದು ತಂಪು ಪಾನಿಯ ಮತ್ತು ನೂಡಲ್ಸ್ ಅನ್ನು ಪರಸ್ಪರ ಬಾಯಿಯಲ್ಲೇ ಹಂಚಿಕೊಂಡಿದ್ದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದಿಲ್ಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಪ್ರಯಾಣಿಕರಿಗೆ ತೊಂದರೆಯಾಗುವ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಹೊರ ತಂದಿದ್ದರೂ ಪದೇ ಪದೆ ಇಂತಹ ಘಟನೆ ನಡೆಯುತ್ತಲೇ ಇರುತ್ತದೆ.
ಇದನ್ನೂ ಓದಿ: Viral Video: ಇದೇನಾ ಸಂಸ್ಕೃತಿ? ದಿಲ್ಲಿ ಮೆಟ್ರೋದಲ್ಲಿ ಅನುಚಿತ ವರ್ತನೆ ತೋರಿದ ಜೋಡಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್