Site icon Vistara News

Viral Video: ಸ್ಕೂಟರ್‌ ನಿಲ್ಲಿಸಿ ಡ್ರಾಪ್‌ ಕೇಳಿದ ಶ್ವಾನ; ಬುದ್ಧಿವಂತಿಕೆಗೆ ಶರಣು ಎಂದ ನೆಟ್ಟಿಗರು

dog

dog

ಮುಂಬೈ: ಶ್ವಾನ ಮತ್ತು ಮಾನವನ ನಡುವಿನ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಮಾನವನ ಉತ್ತಮ ಸ್ನೇಹಿತ ಎಂದೇ ಶ್ವಾನವನ್ನು ಪರಿಗಣಿಸಲಾಗುತ್ತದೆ. ವಿಶ್ವಾಸಕ್ಕೆ ಇನ್ನೊಂದು ಹೆಸರೇ ಶ್ವಾನ. ಅದಕ್ಕೆ ತಕ್ಕಂತೆ ಶ್ವಾನ ಕೂಡ ಮಾನವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕೆಲವರು ನಾಯಿಯನ್ನು ತಮ್ಮ ವಾಹನದಲ್ಲೂ ಕರೆದೊಯ್ಯುತ್ತಾರೆ. ದ್ವಿಚಕ್ರವಿರಲಿ, ನಾಲ್ಕು ಚಕ್ರದ ವಾಹನವಿರಲಿ ಶ್ವಾನ ಆರಾಮವಾಗಿ ಪ್ರಯಾಣಿಸುತ್ತವೆ. ಸದ್ಯ ನಾಯಿಯೊಂದು ರಸ್ತೆ ಬದಿ ನಿಂತು ಡ್ರಾಪ್‌ ಕೇಳಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊ ವೈರಲ್‌ (Viral Video) ಆಗಿದೆ. ಈ ದೃಶ್ಯ ನೋಡಿದರೆ ನಿಮ್ಮ ಮುಖದಲ್ಲಿಯೂ ನಗು ಮೂಡುವುದು ಖಚಿತ.

ರಸ್ತೆ ಬದಿಯಲ್ಲಿ ಕಂಡು ಬರುವ ಕೆಲವೊಂದು ಬೀದಿ ನಾಯಿಗಳು ವಾಹನ ಸವಾರರಲ್ಲಿ ಭೀತಿ ಹುಟ್ಟಿಸುವುದು ಸುಳ್ಳಲ್ಲ. ಕೆಲವೊಮ್ಮೆ ಇದ್ದಕ್ಕಿದ್ದಂತೆ ರಸ್ತೆಗೆ ಜಿಗಿಯುವ ಅವು ವಾಹನ ಸವಾರರಲ್ಲಿ ಗೊಂದಲ ಮೂಡಿಸಿ ಅಪಘಾತಕ್ಕೂ ಕಾರಣವಾಗುತ್ತವೆ. ಇನ್ನು ಕೆಲವೊಮ್ಮೆ ವಾಹನಗಳ ಹಿಂದೆ ಅಟ್ಟಿಸಿಕೊಂಡು ಬರುತ್ತವೆ. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಈ ನಾಯಿ ಗಮನ ಸೆಳೆಯುತ್ತದೆ. ಮನುಷ್ಯರಂತೆ ಸ್ಕೂಟರ್‌ ಸವಾರನ ಬಳಿ ಡ್ರಾಪ್‌ ಕೇಳುವ ದೃಶ್ಯ ಎಂತಹವರನ್ನೂ ಮೋಡಿ ಮಾಡುತ್ತದೆ.

ವಿಡಿಯೊದಲ್ಲೇನಿದೆ?

ಸುರಿಯುವ ಮಳೆಯಲ್ಲಿ ರಸ್ತೆ ಬದಿ ನಾಯಿಯೊಂದು ನಿಂತಿರುತ್ತದೆ. ಆಗ ವ್ಯಕ್ತಿಯೊಬ್ಬ ಸ್ಕೂಟರ್‌ ಚಲಾಯಿಸಿಕೊಂಡು ಬರುತ್ತಾನೆ. ಆತನ ಗಾಡಿಯ ಮುಂಭಾಗ ಲಗೇಜ್‌ ತುಂಬಿರುತ್ತದೆ. ಆ ಸ್ಕೂಟರ್‌ ಅನ್ನು ನಾಯಿ ಸ್ವಲ್ಪ ದೂರ ಹಿಂಬಾಲಿಸುತ್ತದೆ. ಬಳಿಕ ಆತ ತನ್ನ ಸ್ಕೂಟರ್ ನಿಲ್ಲಿಸುತ್ತಾನೆ. ಆಗ ನಾಯಿ ಹಾರಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತದೆ. ಬಳಿಕ ಆತ ಅದನ್ನು ಕರೆದುಕೊಂಡು ಹೊರಡುತ್ತಾನೆ. ಈ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವವರು ಚಿತ್ರೀಕರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 2 ಲಕ್ಷಕ್ಕಿತಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ನಡೆದ ಘಟನೆ ಎನ್ನಲಾಗಿದೆ. ಈ ದೃಶ್ಯಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ

ನೆಟ್ಟಿಗರು ಏನಂದ್ರು?

ʼʼಸ್ಕೂಟರ್‌ ಸವಾರ ಉತ್ತಮ ವ್ಯಕ್ತಿ. ಆ ಶ್ವಾನವನ್ನು ನೋಡುವಾಗ ನಗು ಬರುತ್ತದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಮಾನವೀಯತೆ ತುಂಬಿದ ವ್ಯಕ್ತಿʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಸ್ಕೂಟರ್‌ ಸವಾರನ ಹೃದಯ ಶ್ರೀಮಂತಿಕೆಗೆ ಸಾಟಿ ಇಲ್ಲʼʼ ಎಂದು ಮಗದೊಬ್ಬರು ಹೊಗಳಿದ್ದಾರೆ. ʼʼತುಂಬ ಚೆಂದದ ವಿಡಿಯೊʼʼ ಎಂದು ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರೊಬ್ಬರು. ʼʼಸ್ಕೂಟರ್‌ ಸವಾರನಿಗೆ ದೇವರು ಒಳ್ಳೆಯದು ಮಾಡಲಿʼʼ ಎನ್ನುವ ಹಾರೈಕೆ ಮತ್ತೊಬ್ಬರದ್ದು. ಹಲವರು ಹೃದಯದ ಎಮೋಜಿ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರಂತೂ ನಾಯಿಯ ಬುದ್ಧಿವಂತಿಕೆಗೆ, ಕೌಶಲಕ್ಕೆ ಮನಸೋತಿದ್ದಾರೆ. ಹಲವರಿಗೆ ಈ ದೃಶ್ಯ ತಾವು ಡ್ರಾಪ್‌ ಕೇಳಿಕೊಂಡು ಕಾಲೇಜಿಗೆ, ಆಫೀಸ್‌ಗೆ ತೆರಳುತ್ತಿದ್ದ ದಿನಗಳನ್ನು ನೆನಪಿಸಿದೆ. ಶ್ವಾನ ಕೂಡ ಮಾನವನ ವರ್ತನೆಯನ್ನು ನೋಡಿ ಅನುಕರಿಸುವುದನ್ನು ಕಲಿತಿದೆ ಎನ್ನುವಂತಿದೆ ಈ ದೃಶ್ಯ. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿರುವುದಂತೂ ಸತ್ಯ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version