ನವದೆಹಲಿ: ಕಾಳಿಂಗ ಸರ್ಪ-ಇದನ್ನು ನೋಡುವುದು ಬಿಡಿ ಹೆಸರು ಕೇಳಿದರೆ ಸಾಕು ಅನೇಕರು ಬೆಚ್ಚಿ ಬೀಳುತ್ತಾರೆ. ಎದುರು ಕಾಣ ಸಿಕ್ಕರಂತು ಬಿಡಿ ಕಥೆ ಮುಗಿದೇ ಹೋಯಿತು. ಮಾರು ದೂರ ಓಡಿ ಬಿಡುತ್ತಾರೆ. ಆದರೆ ನಾಯಿಗಳು ಹಾಗಲ್ಲ. ಅಪಾಯ ಗೊತ್ತಿದ್ದರೂ ಕಾದಾಟಕ್ಕೆ ಇಳಿಯುತ್ತವೆ. ಆಕ್ರಮಣ ಮಾಡುತ್ತವೆ. ಸದ್ಯ ಅಂತಹದ್ದೊಂದು ವಿಡಿಯೊ ವೈರಲ್ ಆಗಿದೆ (Viral Video). ಮೈ ನವಿರೇಳಿಸುವ ಈ ವಿಡಿಯೊವನ್ನೂ ನೀವೂ ನೋಡಿ.
ವಿಡಿಯೊದಲ್ಲೇನಿದೆ?
ಇಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಮಂದಿ ಉಸಿರು ಬಿಗಿ ಹಿಡಿದು ಈ ಭೀಕರ ಕಾಳಗವನ್ನು ವೀಕ್ಷಿಸಿದ್ದಾರೆ. ಸುತ್ತಮುತ್ತಲು ಪೊದೆಗಳಿರುವ ಬಯಲು ಪ್ರದೇಶ ಅದು. ಅಲ್ಲಿ ಹರಿದಾಡುತ್ತಿರುವ ಕಾಳಿಂಗ ಸರ್ಪವನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಆ ಮಾರುದ್ದದ ಹಾವಿನ ಸುತ್ತ ನಿಂತುಕೊಂಡಿರುವ 5 ಬೀದಿ ನಾಯಿಗಳು ಏಕ ಕಾಲಕ್ಕೆ ದಾಳಿ ನಡೆಸುತ್ತವೆ. ಒಂದು ಬಾಲ ಕಚ್ಚಿ ಎಳೆದರೆ, ಇನ್ನೊಂದು ದೇಹದ ಮಧ್ಯ ಭಾಗಕ್ಕೆ ಬಾಯಿ ಹಾಕುತ್ತದೆ. ಇನ್ನೊಂದು ತಲೆಯ ಹತ್ತಿರ ಆಕ್ರಮಣ ಮಾಡಲು ಮುಂದಾಗುತ್ತದೆ.
ಇತ್ತ ಹಾವು ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಏಕಾಂಗಿಯಾಗಿ ಹೋರಾಟ ನಡೆಸುತ್ತದೆ. ಹೆಡೆ ಎತ್ತಿ ರೋಷದಿಂದ ಹಿಮ್ಮೆಟ್ಟಿಸಲು ನೋಡುತ್ತದೆ. ಸುತ್ತ ಶತ್ರುಗಳು ತುಂಬಿದ್ದರೂ ಛಲ ಬಿಡದೆ ಏಕಾಂಗಿಯಾಗಿ ಹೋರಾಡುವ ಧೀರ ಯೋಧನಂತೆ ಹಾವು ತನ್ನ ಪ್ರಯತ್ನ ಮುಂದುವರಿಸುತ್ತದೆ. ಕಾಳಿಂಗ ಸರ್ಪ ಮತ್ತು ಶ್ವಾನ ಗುಂಪುಗಳ ಈ ಕದನದ ಕೊನೆಗೆ ಏನಾಯಿತು ಎನ್ನುವುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಈ ಭೀಕರ ಹೋರಾಟ ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ನೆಟ್ಟಿಗರು ಏನಂದ್ರು?
ವಿಡಿಯೊ ನೋಡಿ ಹಲವರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಪ್ರಾಣಿ ಜಗತ್ತಿನಲ್ಲಿ ಪರಸ್ಪರ ಬೇಟೆ, ಕಾದಾಟ ಸಾಮಾನ್ಯವಾದರೂ ಈ ವಿಡಿಯೊ ಹಲವರಿಗೆ ಕಳವಳವನ್ನುಂಟು ಮಾಡಿದೆ. ಕೆಲವರು ಶ್ವಾನಗಳ ಸುರಕ್ಷತೆ ಬಗ್ಗೆ ಯೋಚಿಸಿದರೆ ಇನ್ನು ಕೆಲವರು ಹಾವಿನ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.
ʼʼಒಗ್ಗಟ್ಟಿನಿಂದ, ಒಂದು ತಂಡವಾಗಿ ಕೆಲಸ ಮಾಡಿದರೆ ಜಯ ನಿಶ್ಚಿತ. ಎಲ್ಲರಿಗಾಗಿ ಒಂದು ತಂಡ ಮತ್ತು ಒಂದು ತಂಡಕ್ಕಾಗಿ ಎಲ್ಲರೂʼʼ ಎಂದು ಒಬ್ಬರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ʼʼತಂಡವಾಗಿ ಕೆಲಸ ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ ಎನ್ನುವುದು ಇದರಿಂದ ತಿಳಿದುಕೊಂಡೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಹಾವಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ʼʼಈ ವಿಡಿಯೊ ನೋಡಿದ ಬಳಿಕ ಮೊದಲ ಬಾರಿ ಹಾವಿನ ಬಗ್ಗೆ ಅಯ್ಯೋ ಪಾಪ ಎನಿಸುತ್ತಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ನೆಟ್ಟಿಗರ ಮಧ್ಯೆ ಚರ್ಚೆಯನ್ನೇ ಹುಟ್ಟು ಹಾಕಿದೆ.
ಇದನ್ನೂ ಓದಿ: Viral Video: ಹುಲಿ-ಮೊಸಳೆ ಮಧ್ಯೆ ರಣ ರೋಚಕ ಕದನ; ಕೊನೆಯಲ್ಲಿ ಗೆದ್ದವರು ಯಾರು?
ಕಾಳಿಂಗ ಸರ್ಪವನ್ನು ಅತ್ಯಂತ ಅಪಾಯಕಾರಿ ಹಾವು ಎಂದೇ ಪರಿಗಣಿಸಲಾಗುತ್ತದೆ. ಆದರೆ ಇದು ತನ್ನ ಪಾಡಿಗೆ ತಾನಿರುತ್ತದೆ. ಇದಕ್ಕೆ ಯಾವುದೇ ತೊಂದರೆಯಾಗದ ಹೊರತು ಆಕ್ರಮಣಕ್ಕೆ ಮುಂದಾಗುವುದಿಲ್ಲ. ಇದು ಸಾಮಾನ್ಯವಾಗಿ ಭಾರತ, ಇಂಡೋನೇಷ್ಯಾಗಳಲ್ಲಿ ಕಂಡು ಬರುತ್ತದೆ. ಕಪ್ಪು ಬಣ್ಣದಲ್ಲಿರುವ ಇದು ಇತರ ಹಾವುಗಳಿಗೆ ಹೋಲಿಸಿದರೆ ತುಂಬಾ ಉದ್ದವಾಗಿರುತ್ತದೆ. ತನಗೆ ಅಪಾಯ ಉಂಟಾಗುತ್ತಿದೆ ಎನಿಸಿದಾಗ ಕಾಳಿಂಗ ಸರ್ಪವು ತನ್ನ ದೇಹವನ್ನು ನೆಲದಿಂದ ಮೇಲಕ್ಕೆ ಎತ್ತುತ್ತದೆ, ಹೆಡೆಗೆ ಅರಳಿಸಿ ಬಸುಗುಟ್ಟುತ್ತದೆ. ಅದರ ರೋಷಾವೇಶ ನೋಡಿದರೆ ಯಾರಾದರೂ ಕ್ಷಣಕಾಲ ದಂಗಾಗುವುದು ಖಚಿತ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ