ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ತೆಲುಗು ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾವನ್ನು ಯಾವ ಪ್ರೇಕ್ಷಕ ತಾನೇ ಮರೆಯಲು ಸಾಧ್ಯ? ಟಾಲಿವುಡ್ ನಾಯಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ ಚಿತ್ರವದು. ಉತ್ತಮ ಕತೆ, ಅದ್ಧೂರಿ ಮೇಕಿಂಗ್, ಗುಣಮಟ್ಟದ ಗ್ರಾಫಿಕ್ಸ್ ಮುಂತಾದ ವಿಚಾರಗಳಿಂದ ಸದ್ದು ಮಾಡಿದ ʼಬಾಹುಬಲಿʼ ಚಿತ್ರದಲ್ಲಿ ದೃಶ್ಯವೊಂದಿದೆ. ಬಾಲ್ಲಾಳದೇವ (ರಾಣಾ ದಗ್ಗುಬಾಟಿ) ಬೃಹತ್ ಗಾತ್ರದ ಗೂಳಿಯೊಂದಿಗೆ ಕಾದಾಡಿ ಅದನ್ನು ಸೋಲಿಸುತ್ತಾನೆ. ಇದೀಗ ಯುವಕನೊಬ್ಬ ಅದೇ ರೀತಿ ಗೂಳಿಯೊಂದಿಗೆ ಕಾದಾಡಿದ ವಿಡಿಯೊ ವೈರಲ್ (Viral Video) ಆಗಿದೆ. ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಗೂಳಿಯ ಬಳಿ ಕಾಲು ಕೆದರಿಕೊಂಡು ಜಗಳಕ್ಕೆ ನಿಂತ ಯುವಕನ ಪಾಡು ಕೊನೆಗೆ ಏನಾಯಿತು?
ನಕ್ಕು ನಕ್ಕು ಸುಸ್ತಾದ ನೆಟ್ಟಿಗರು
ರಸ್ತೆ ಮಧ್ಯೆ ಗೂಳಿಯೊಂದು ಸುಮ್ಮನೆ ನಿಂತಿತ್ತು. ಅಲ್ಲಿಗೆ ಯುವಕನೊಬ್ಬ ಬರುತ್ತಾನೆ. ಅವನು ಮದ್ಯ ಸೇವಿಸಿ ನಶೆಯಲ್ಲಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಗೂಳಿ ಎದುರು ನಿಂತು ಅದನ್ನು ಕೆಣಕುತ್ತಾನೆ. ಗೂಳಿ ಸುಮ್ಮನಿರುತ್ತದೆ. ಬಳಿಕ ಮುಖ ತಿರುಗಿಸುತ್ತದೆ. ಆದರೂ ಆತ ಸುಮ್ಮನಿರುವುದುಲ್ಲ. ಫೈಟ್ ಮಾಡುವಂತೆ ಎರಡೂ ಕೈಗಳನ್ನು ಅದರ ಕೊಂಬಿನ ಬಳಿ ಚಾಚುತ್ತಾನೆ. ಅದುವರೆಗೆ ತಾಳ್ಮೆಯಿಂದ ಇದ್ದ ಗೂಳಿ ಒಮ್ಮೆಲೆ ಕೊಂಬಿನಿಂದ ಎತ್ತಿ ಗಾಳಿಯಲ್ಲಿ ಅಲ್ಲಾಡಿಸಿ ಆತನನ್ನು ಬೀಳಿಸುತ್ತದೆ. ಅದೃಷ್ಟವಶಾತ್ ಅವನಿಗೆ ಹೆಚ್ಚಿನ ಏಟಾಗಿರಲಿಲ್ಲ. ಆಗ ಬುದ್ಧಿ ಕಲಿತ ಆತ ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವಂತೆ ಮೈ ಕೈ ಉಜ್ಜಿಕೊಂಡು ಅಲ್ಲಿಂದ ತೆರಳುತ್ತಾನೆ. ಬಹುಶಃ ನಶೆ ಎಲ್ಲ ಒಮ್ಮೆಲೆ ಇಳಿದಿರಬೇಕು!
ನೆಟ್ಟಿಗರು ಏನಂದ್ರು?
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 20 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಕೆಲವರು ಅಪಾಯಕಾರಿ ಪ್ರವೃತ್ತಿ ಕೈಗೊಂಡಿದ್ದಕ್ಕೆ ಆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುತೇಕ ನೆಟ್ಟಿಗರು ನಗುವಿನ ಇಮೋಜಿ ಹಾಕಿದ್ದಾರೆ. ʼʼಗೂಳಿ ಉತ್ತಮ ಕೆಲಸ ಮಾಡಿದೆʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಇದ್ದನ್ನು ʼದೇಸಿ ಗೂಳಿಕಾಳಗʼಕ್ಕೆ ಹೋಲಿಸಿದ್ದಾರೆ. ʼʼಕೊನೆಯ ಭಾಗ ನನಗೆ ತೃಪ್ತಿ ನೀಡಿತುʼʼ ಎಂದಿದ್ದಾರೆ ಮತ್ತೊಬ್ಬರು. ʼʼಆತನಿಗೆ ಆಶೀರ್ವಾದ ಸಿಕ್ಕಿತುʼʼ ಎಂದು ಕಮೆಂಟ್ ಮಾಡಿದ್ದಾರೆ ಮಗದೊಬ್ಬರು. ಹಲವರು ವಿಡಿಯೊ ಮಜ ಒದಗಿಸಿತು ಎಂದಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಈ ವಿಡಿಯೊ ನೋಡಿ ನಕ್ಕು ಹಗುರವಾಗಿರುವುದಂತು ಸ್ಪಷ್ಟ.
ಇದನ್ನೂ ಓದಿ: Viral Video: ಗೆದ್ದದ್ದು ಆಫ್ಘನ್, ಕುಣಿದು ಕುಪ್ಪಳಿಸಿದ್ದು ಇರ್ಫಾನ್ ಪಠಾಣ್
ಹಿಂದೆಯೂ ನಡೆದಿತ್ತು
ಈ ರೀತಿಯ ಘಟನೆ ಹಿಂದೆಯೂ ನಡೆದಿದೆ. ಈ ಹಿಂದೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಎರಡು ಗೂಳಿಗಳು ಜಗಳವಾಡುತ್ತಿರುವುದನ್ನು ನೋಡಿ ಅದನ್ನು ಬಿಡಿಸಲು ಹೋಗಿದ್ದ ವಿಡಿಯೊ ವೈರಲ್ ಆಗಿತ್ತು. ಛತ್ತೀಸ್‌ಗಢದ ಕೊರ್ಬಾದಲ್ಲಿ ಈ ಘಟನೆಯಲ್ಲಿ ಆ ವ್ಯಕ್ತಿಗೆ ಗಾಯವಾಗಿತ್ತು. ಮತ್ತೊಂದು ಘಟನೆಯಲ್ಲಿ ಉತ್ತರಾಖಂಡದ ಹೃಷಿಕೇಶದ ತಪೋವನ ಪ್ರದೇಶದಲ್ಲಿ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.