ಬೆಂಗಳೂರು: ಸಿಂಹ, ಸಿಂಹಿಣಿ ಕಂಡಾಕ್ಷಣ ಎಲ್ಲ ಪ್ರಾಣಿಗಳೂ ಹೆದರುತ್ತವೆ. ಆದರೆ ಈ ವಿಡಿಯೊದಲ್ಲಿ ಸಿಂಹಿಣಿಯನ್ನು ಕಂಡು ಆನೆ ಹೆದರಿಲ್ಲ, ಬದಲಾಗಿ ಆನೆಯನ್ನು ಕಂಡು ಸಿಂಹಿಣಿಯೇ ಹೆದರಿ ಓಡಿದೆ. ಅಂಥದ್ದೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : 14 ಕೋಟಿ ರೂ. ಮೌಲ್ಯದ 45 ವೈನ್ ಬಾಟಲ್ ಕದ್ದಿದ್ದ ಜೋಡಿಗೆ ಜೈಲು ಶಿಕ್ಷೆ
ಸಿಂಹಿಣಿಯೊಂದು ಬಾವಿಯ ಹಿಂದೆ ಮಲಗಿಕೊಂಡಿರುತ್ತದೆ. ಅದೇ ವೇಳೆ ಆನೆಯು ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ನೀರು ಕುಡಿಯುವುದಕ್ಕೆಂದು ಬಾವಿಯ ಹತ್ತಿರ ಬರುತ್ತದೆ. ಸಿಂಹಿಣಿ ಆನೆಯನ್ನು ನೋಡುವಷ್ಟರಲ್ಲಿ ಆನೆ ಬಾವಿಯ ಹತ್ತಿರ ಬಂದಿರುತ್ತದೆಯಾದ್ದರಿಂದ, ಆನೆ ನೀರು ಕುಡಿದು ಹೋದ ಮೇಲೆ ಇಲ್ಲಿಂದ ಬೇರೆಡೆಗೆ ಹೋಗೋಣವೆಂದು ಸಿಂಹಿಣಿ ಬಾವಿಯ ಹಿಂದೆ ಅಡಗಿಕೊಳ್ಳುತ್ತದೆ.
ಸ್ವಲ್ಪ ನೀರು ಕುಡಿದ ಆನೆಗೆ ಅಲ್ಲಿ ಸಿಂಹಿಣಿ ಅಡಗಿರುವುದು ಗೊತ್ತಾಗುತ್ತದೆ. ಸುಮ್ಮನಾಗದ ಅದು ಸೊಂಡಿಲಿನಲ್ಲಿ ನೀರು ತುಂಬಿಕೊಂಡು, ಸಿಂಹಿಣಿಯತ್ತ ಹಾರಿಸುತ್ತದೆ. ಸಿಂಹಿಣಿ ಗಾಬರಿಯಿಂದ ಓಡಲಾರಂಭಿಸುತ್ತದೆ. ಆನೆ ಕೂಡ ತಾನು ಬೆನ್ನಟ್ಟಿಕೊಂಡು ಬರುವಂತೆ ಸಿಂಹಿಣಿ ಹಿಂದೆ ಸ್ವಲ್ಪ ದೂರ ಓಡಿದಂತೆ ಮಾಡಿ ಆಮೇಲೆ ಸುಮ್ಮನಾಗುತ್ತದೆ.
ಈ ದೃಶ್ಯಗಳಿರುವ ವಿಡಿಯೊವನ್ನು ಲೇಟೆಸ್ಟ್ ಸೈಟಿಂಗ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. “ಆನೆ ಬೃಹದಾಕಾರದ ಪ್ರಾಣಿ ಮಾತ್ರವಲ್ಲ, ಚಾಣಾಕ್ಷ ಪ್ರಾಣಿ ಕೂಡ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. “ಕಾಡಿನ ರಾಣಿಗೇ ಹೆದರಿಸುವ ಧೈರ್ಯ ಆನೆಗಿದೆ” ಎಂದು ಕೆಲವರು ಕಾಮೆಂಟ್‌ನಲ್ಲಿ ಹೇಳಿದ್ದಾರೆ.