ನವದೆಹಲಿ: ದಕ್ಷಿಣ ಭಾರತದ ಉತ್ತಪ್ಪಮ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ತಮಿಳುನಾಡಿನ ಈ ಸಾಂಪ್ರದಾಯಿಕ ತಿಂಡಿ ಬಹು ಜನಪ್ರಿಯ. ವೃತ್ತಾಕಾರದ ಈ ತಿಂಡಿಯನ್ನು ದೋಸೆಗಿಂತ ಸ್ವಲ್ಪ ದಪ್ಪವಾಗಿ ಕಾವಲಿ ಮೇಲೆ ಹೊಯ್ಯಲಾಗುತ್ತದೆ. ಗರಿಗರಿಯಾದ ತಿಂಡಿಯನ್ನು ಕಾಯಿಚಟ್ನಿಯೊಂದಿಗೆ ಸೇವಿಸುವುದು ವಾಡಿಕೆ. ಆದರೆ ಈ ಉತ್ತಪ್ಪಮ್ ನೋಡಿದರೆ ಯಾರಿಗೂ ತಿನ್ನಲು ಮನಸ್ಸೇ ಬಾರದು. ಅಷ್ಟು ಸೊಗಸಾಗಿ ಅದರ ಮೇಲೆ ಡಿಸೈನ್ ರಚಿಸಲಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ದೆಹಲಿ ಮೂಲದ ಬಾಣಸಿಗರಾದ ಸುರಭಿ ಸೆಹಗಲ್ ಇತ್ತೀಚೆಗೆ ತಯಾರಿಸಿದ ಉತ್ತಪ್ಪಮ್‌ನ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬೇಬಿ ಕಾರ್ನ್, ಹಸಿರು ಈರುಳ್ಳಿ, ಬೆಂಡೆ, ಉಪ್ಪಿನಕಾಯಿ ಮತ್ತು ಮೈಕ್ರೊಗ್ರೀನ್‌ನಂತಹ ತರಕಾರಿಗಳನ್ನು ಬಳಿಸಿ ಸುರಭಿ ಉತ್ತಪ್ಪಮ್ ಮೇಲೆ ಸುಂದರ ಕಲಾಕೃತಿ ಬಿಡಿಸಿದ್ದಾರೆ. ಈ ಸಾಂಪ್ರದಾಯಿಕ ಖಾದ್ಯದ ಮೇಲಿನಈ ನೂತನ ಪ್ರಯೋಗಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ವಿಡಿಯೊದ ಆರಂಭದಲ್ಲಿ ಸುರಭಿ ತೆಳುವಾಗಿ ಕತ್ತರಿಸಿದ ಬೇಬಿ ಕಾರ್ನ್, ಈರುಳ್ಳಿ ಮತ್ತು ಬೆಂಡೆಕಾಯಿಯನ್ನು ಜೋಡಿಸುತ್ತಿರುವುದು ಕಂಡು ಬರುತ್ತದೆ. ಹೂವಿನ ವಿನ್ಯಾಸವನ್ನು ಅವರು ಈ ತರಕಾರಿಗಳಿಂದ ರಚಿಸುತ್ತಾರೆ. ಬಳಿಕ ಅವರು ಉತ್ತಪ್ಪಮ್ ಹಿಟ್ಟನ್ನು ತವಾ ಮೇಲೆ ಹರಡುತ್ತಾರೆ. ಬಳಿಕ ಹಿಟ್ಟಿನ ಮೇಲೆ ಹೂವಿನ ಮಾದರಿಗಳನ್ನು ಸೂಕ್ಷ್ಮವಾಗಿ ಇರಿಸುತ್ತಾರೆ. ಅಂತಿಮವಾಗಿ ಹಸಿರು ಈರುಳ್ಳಿ ಮತ್ತು ಮೈಕ್ರೊಗ್ರೀನ್ ಎಲೆಗಳನ್ನು ಸೇರಿಸಿ ಅವರು ಉತ್ತಪ್ಪಮ್ ಅನ್ನು ಬೇಯಿಸುತ್ತಾರೆ. ಎರಡೂ ಕಡೆ ಉತ್ತಮವಾಗಿ ಬೆಂದ ಉತ್ತಪ್ಪಮ್ ಅನ್ನು ತಟ್ಟೆಗೆ ವರ್ಗಾಯಿಸುತ್ತಾರೆ. ಇದು ಮೇಲ್ನೋಟಕ್ಕೆ ಕಲಾಕೃತಿ ಎಂದೇ ಭಾಸವಾಗುತ್ತದೆ. ʼʼನನ್ನ ನೆಚ್ಚಿನದುʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ.
ನೆಟ್ಟಿಗರು ಏನಂದ್ರು?
ಸುರಭಿ ಅವರ ಈ ವಿಡಿಯೊಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ʼʼಈ ಉತ್ತಪ್ಪಮ್ ತಿನ್ನಲು ಮನಸ್ಸೇ ಬರಲಾರದು. ಈ ಉತ್ತಮ ಕಲಾಕೃತಿಯನ್ನು ಸೇವಿಸುವುದಾದರೂ ಹೇಗೆ?ʼʼ ಎಂದು ಒಬ್ಬರು ಹೇಳಿದ್ದಾರೆ. ʼʼಬಟ್ಟೆಯ ಮೇಲಿನ ಎಂಬ್ರಾಯಿಡರಿಯನ್ನು ಇದು ಹೋಲುತ್ತದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅದ್ಭುತ ಕಲೆʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼನಿಜವಾಗಿಯೂ ಇದು ಉತ್ತಮ ಕಲೆʼʼ ಎಂದು ಮಗದೊಬ್ಬರು ಹೊಗಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿರುವುದಂತು ಹೌದು.
ಇದಕ್ಕೂ ಮೊದಲು ಸುರಭಿ ಈ ವಿಶಿಷ್ಟ ಉತ್ತಪ್ಪಮ್ ಪಾಕವಿಧಾನದ ಹಿಂದಿನ ಸೃಜನಶೀಲ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದರು. “ಉತ್ತಪ್ಪಮ್ ರೀಲ್‌ಗಾಗಿ ತೆಳುವಾದ ಕಾಂಡಗಳನ್ನು ಹೊಂದಿರುವ ಸುಂದರವಾದ ಈರುಳ್ಳಿಯನ್ನು ನಾನು ಮಾರುಕಟ್ಟೆಯಲ್ಲಿ ಕಂಡುಕೊಂಡೆ. ಈ ಪ್ರಕ್ರಿಯೆಯು ಚಿತ್ರಕಲೆಗೆ ಹೋಲುತ್ತದೆʼʼ ಎಂದು ಹೇಳಿದ್ದರು. ಈ ಹಿಂದೆ ಸುರಭಿ ವಿವಿಧ ವರ್ಣರಂಜಿತ ಪದಾರ್ಥಗಳನ್ನು ಬಳಸಿಕೊಂಡು ಇಡ್ಲಿ ತಯಾರಿಸುತ್ತಿರುವ ವಿಡಿಯೊ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್ ಮಿಕ್ಸ್ ಅಂದ್ರು ನೆಟ್ಟಿಗರು