ಲಕ್ನೋ: ಇತ್ತೀಚೆಗೆ ಇನ್‌ಸ್ಟಾಗ್ರಾಮ್ ರೀಲ್ಸ್ (Instagram reel) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೆಲವರು ಜನಪ್ರಿಯತೆ ಗಳಿಸಲು, ಹೆಚ್ಚಿನ ಲೈಕ್ಸ್ ಪಡೆಯಲು ಎಂತಹ ಮಟ್ಟಕ್ಕೂ ಇಳಿಯಲು ಹಿಂಜರಿಯುವುದಿಲ್ಲ ಎನ್ನುವುದು ಅನೇಕ ಘಟನೆಗಳ ಮೂಲಕ ಈಗಾಗಲೇ ಸಾಬೀತಾಗಿದೆ. ದುಸ್ಸಾಹಸ ಪ್ರದರ್ಶಿಸುವ ಮೂಲಕ ತಮ್ಮ ಜೀವವನ್ನೇ ಅಪಾಯಕ್ಕೆ ಗುರಿಯಾಗಿಸುವ ಜತೆಗೆ ಇತರರಿಗೂ ತೊಂದರೆ ನೀಡುವ ಚಾಳಿ ಹೆಚ್ಚುತ್ತಿದೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಗಾಜಿಯಾಬಾದ್‌ನಲ್ಲಿ ಯುವಕನೋರ್ವ ನಾಯಿಯ ಕಾಲನ್ನು ಹಿಡಿದು ಕ್ರೂರವಾಗಿ ತಿರುಗಿಸುವ ಮೂಲಕ ಅಮಾನುಷವಾಗಿ ವರ್ತಿಸಿದ ವಿಡಿಯೊ ವೈರಲ್ ಆಗಿದೆ (Viral Video). ಈತನ ವಿರುದ್ಧ ಕ್ರಮಕ್ಕೆ ಇದೀಗ ಪೊಲೀಸರು ಮುಂದಾಗಿದ್ದಾರೆ.
#Ghaziabad रील रिकॉर्ड करने के लिए पशुओं संग क्रूरता ना काबिले बर्दाश्त है। वो भी जीव है ऐसा करने वाले पर कार्यवाई अपेक्षित है। यके घृणित कृत्य भोजपुर के शकूरपुर गांव के जफर द्वारा किया गया है। कार्यवाई अपेक्षित है @Uppolice @PetaIndia @surbhirawatpfa pic.twitter.com/oPEVxqZxB1
— Lokesh Rai (@lokeshRlive) February 26, 2024
ವಿಡಿಯೊದಲ್ಲೇನಿದೆ?
ಶಕುರ್ಪುರ್ ಗ್ರಾಮದಲ್ಲಿ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ. ಝಾಫರ್ (Zafar) ಎನ್ನುವ ಯುವಕ ನಾಯಿಯನ್ನು ಬಲವಂತದಿಂದ ಎಳೆದುಕೊಂಡು ಬರುತ್ತಾನೆ. ನಾಯಿ ಗಾಬರಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಬಿಗಿಯಾಗಿ ಹಿಡಿದುಕೊಳ್ಳುವ ಆತ ಅದನ್ನು ಅನಾಮತ್ತಾಗಿ ಎತ್ತಿಕೊಳ್ಳುತ್ತಾನೆ. ಬಳಿಕ ಅದರ ಕಾಲುಗಳನ್ನು ಹಿಡಿದುಕೊಂಡು ವೇಗವಾಗಿ ಸುತ್ತುತ್ತಾನೆ. ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಇದನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೊವನ್ನು ಪತ್ರಕರ್ತರೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಕ್ರಮಕ್ಕೆ ಆಗ್ರಹಿಸಿದ್ದಾರೆ.
ʼʼರೀಲ್‌ಗಾಗಿ ಪ್ರಾಣಿಯ ಮೇಲೆ ಈ ರೀತಿ ಕ್ರೂರವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಶ್ವಾನಗಳಿಗೂ ಬದುಕುವ ಹಕ್ಕಿದೆ. ಇಂತಹ ದುರ್ವತನೆ ತೋರಿದ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಉತ್ತರ ಪ್ರದೇಶ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆ ನಡೆಸುವಂತೆ ಗಾಜಿಯಾಬಾದ್ ಪೊಲೀಸರಿಗೆ ಸೂಚಿಸಿದೆ. ʼʼಶೀಘ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿʼʼ ಎಂದು ತಿಳಿಸಿದೆ.
ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಒಂದಷ್ಟು ವಿದ್ಯಾರ್ಥಿಗಳ ಗುಂಪು ಒಂದು ಗರ್ಭಿಣಿ ನಾಯಿಯನ್ನು ರಸ್ತೆಯ ಮೇಲೆಲ್ಲ ಎಳೆದಾಡಿ, ಹಿಂಸೆ ಕೊಟ್ಟು ಅಮಾನುಷವಾಗಿ ಕೊಂದಿರುವ ವಿಡಿಯೊ ವೈರಲ್ ಆಗಿತ್ತು. ಆ ಭಯಾನಕ ವಿಡಿಯೊದಲ್ಲಿ ಹುಡುಗನೊಬ್ಬ ಶ್ವಾನದ ಹಿಂಬದಿಯ ಎರಡೂ ಕಾಲು ಹಿಡಿದು ದರದರನೇ ಎಳೆಯುವ ದೃಶ್ಯ ಸೆರೆಯಾಗಿತ್ತು. ಬಳಿಕ ಆ ವಿದ್ಯಾರ್ಥಿಗಳ ಗುಂಪು ಆ ಶ್ವಾನವನ್ನು ಅವರು ಕೊಂದೇ ಬಿಟ್ಟಿದ್ದರು. ಈ ವಿಡಿಯೊ ನೋಡಿ ಅನೇಕರು ಆ ಹುಡುಗರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Video | ಗರ್ಭಿಣಿ ಶ್ವಾನವನ್ನು ಹೊಡೆದು, ನೆಲದ ಮೇಲೆ ಎಳೆದಾಡಿ ಕೊಂದ ವಿದ್ಯಾರ್ಥಿಗಳು; ಇವರೆಂಥಾ ಕ್ರೂರಿಗಳಿರಬೇಕು
ನಿಯಮ ಏನು ಹೇಳುತ್ತದೆ?
ಪ್ರಾಣಿಗಳನ್ನು ಈ ರೀತಿಯ ಕ್ರೌರ್ಯದಿಂದ ರಕ್ಷಿಸಲು ಭಾರತದಲ್ಲಿ ಕಾನೂನು ಇದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 (PCA Act) ಯಾವುದೇ ಪ್ರಾಣಿಗೆ ಅನಗತ್ಯ ನೋವು ಅಥವಾ ತೊಂದರೆ ಉಂಟು ಮಾಡುವುದನ್ನು ನಿಷೇಧಿಸುತ್ತದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 ಮತ್ತು 429ರ ಪ್ರಕಾರ ಪ್ರಾಣಿಗಳನ್ನು ಕೊಲ್ಲುವುದು, ವಿಷಪ್ರಾಶನ ಮಾಡುವುದು, ಅಂಗ ವೈಕಲ್ಯಗೊಳಿಸುವುದು ಅಥವಾ ಪ್ರಾಣಿಗಳನ್ನು ನಿಷ್ಪ್ರಯೋಜಕವಾಗಿಸುವುದು ಅಪರಾಧ. ಈ ಅಪರಾದಕ್ಕೆ ದಂಡದಿಂದ ಹಿಡಿದು ಜೈಲು ಶಿಕ್ಷೆಯವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ