ಮಾತನಾಡಲು ಬಾಯಿ ಬರದು ಎಂಬ ಮಾತ್ರಕ್ಕೆ ಪ್ರಾಣಿಗಳು ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಮನುಷ್ಯನಷ್ಟೇ ಭಾವನಾತ್ಮಕ ಜೀವಿ, ಭಾವನೆಯಿಲ್ಲದ ಮನುಷ್ಯ ಪ್ರಾಣಿಗಳಂತೆ ಎಂದು ಉಡಾಫೆಯಿಂದ ಸಾಮಾನ್ಯವಾಗಿ ಹೇಳಿಕೆ ನೀಡಿದರೂ, ಪ್ರಾಣಿಗಳ ಭಾವನಾಲೋಕ ನಮ್ಮೆದುರು ತೆರೆದುಕೊಂಡರೆ ಮನುಷ್ಯನೂ ಮೂಕನಾಗುತ್ತಾನೆ. ಅದರಲ್ಲೂ ನಾಯಿಯೆಂಬ ಗೆಳೆಯ ತನ್ನನ್ನು ಸಾಕಿದವರೊಂದಿಗೆ ಹೊಂದುವ ಭಾವಲೋಕವೇ ವಿಸ್ಮಯವಾದದ್ದು. ಇಲ್ಲೂ ಅಂತಹ ನಾಯಿಯೊಂದು ತನ್ನೊಡೆಯನ ಜೊತೆಗೆ ಮಾಡಿದ ಭಾವಾಭಿನಯವೇ ಈಗ ಜನಮನ ಗೆದ್ದಿದೆ!
ಹೀಗೆ ಊಹಿಸಿಕೊಳ್ಳಿ. ನೀವೊಂದು ಡಯಟ್‌ನಲ್ಲಿದ್ದೀರಿ, ಆ ಡಯಟ್ ಪ್ರಕಾರ ನೀವು ಕೇವಲ ಲಘು ಆರೋಗ್ಯಕರ ಆಹಾರವನ್ನಷ್ಟೇ ಸೇವಿಸಬೇಕು, ಹಾಗೂ ಇದೇ ಸಂದರ್ಭ ನೀವು ನಿಮ್ಮ ಗೆಳೆಯರ ಜೊತೆಗೆ ಒಂದು ಭಾರೀ ಹೋಟೇಲಿಗೆ ಭೂರೀ ಭೊಜನಕ್ಕೆ ಹೋದಿರಿ ಎಂದಿಟ್ಟುಕೊಳ್ಳಿ. ನಿಮ್ಮ ಗೆಳೆಯರೆಲ್ಲರೂ, ಬಾಯಲ್ಲಿ ನೀರೂರಿಸುವ ಬರ್ಗರ್, ಫಿಂಗರ್ ಚಿಪ್ಸ್, ನಾಚೋಸ್ ಜೊತೆಗೆ ಡಿಪ್ಸ್ ಎಲ್ಲ ಆರ್ಡರ್ ಮಾಡಿ ನಿಮ್ಮ ಮುಂದೆಯೇ ಪ್ಲೇಟ್ ಹರವಿಟ್ಟು ಸವಿದು ಸವಿದು ತಿನ್ನ ತೊಡಗುತ್ತಾರೆ. ಅಥವಾ ರುಚಿರುಚಿಯಾದ ಪಿಜ್ಜಾ ಆರ್ಡರ್ ಮಾಡಿ ಬಿಸಿಬಿಸಿಯಾಗಿ ತಿನ್ನಲು ಶುರು ಮಾಡುತ್ತಾರೆ. ನೀವು ತಿನ್ನುವಂತಿಲ್ಲ. ನೀವು ತಿನ್ನುವ ಹಾಗಿಲ್ಲ ಎಂದು ಗೊತ್ತಿರುವ ಅವರ್ಯಾರೂ ನಿಮ್ಮ ಬಳಿ ತಿನ್ನು ಎಂದು ಹೇಳುತ್ತಿಲ್ಲ. ನಿಮಗೆ ತಿನ್ನಬೇಕೆಂದು ಆಸೆಯಾದರೂ ಹೇಳುವಂತಿಲ್ಲ, ಬಿಡುವಂತಿಲ್ಲ. ಒಂದು ಬೈಟ್ ರುಚಿಯಾದರೂ ನೋಡುತ್ತೇನೆ ಎಂದು ಅನಿಸದೆ ಇರದು. ಆದರೂ ಬಾಯಿಕಟ್ಟಿ, ಓರೆಗಣ್ಣಿನಿಂದ ಅವರು ಚಪ್ಪರಿಸುವುದನ್ನೇ ನೋಡುತ್ತಿರುತ್ತೀರಿ. ಹೀಗೊಂದು ಸಂದರ್ಭವನ್ನು ಊಹಿಸಿಕೊಳ್ಳಿ. ಇಲ್ಲೂ ಅಂಥದ್ದೇ ಒಂದು ಸಂದರ್ಭ. ಆದರೆ, ಇಲ್ಲಿ ನಿಮ್ಮ ಜಾಗದಲ್ಲಿ ಮಾತ್ರ ನಾಯಿಯಿದೆ!
ಇದನ್ನೂ ಓದಿ | Viral news | 88ನೇ ಮದುವೆಯಾಗಲು ಹೊರಟ 61ರ ಹರೆಯದ ಯುವಕ!
ʻನನಗೆ ನಿನ್ನ ಆಹಾರದಲ್ಲಿ ಆಸಕ್ತಿಯಿಲ್ಲ ಎಂದು ಹೇಳಿದ್ದೆ ತಾನೇ!ʼ ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು ಎಲ್ಲರ ಮನಗೆದ್ದಿದೆ. ಇಲ್ಲೊಂದು ನಾಯಿ ತನ್ನೊಡೆಯನ ಜೊತೆಗೆ ಸೋಫಾದಲ್ಲಿ ಕೂತಿದೆ. ನಾಯಿ ಪಕ್ಕ ಇರುವಾತ ತನ್ನ ತಟ್ಟೆಯಲ್ಲಿ ಒಂದಿಷ್ಟು ನಾಚೋಸ್ ಇಟ್ಟುಕೊಂಡು ಬಗೆ ಬಗೆಯ ಡಿಪ್‌ಗಳ ಜೊತೆಗೆ ಅದ್ದಿ ತಿನ್ನುತ್ತಿದ್ದಾನೆ. ಆತನ ಪಕ್ಕ ಇರುವ ನಾಯಿ ಆತ ತಿನ್ನುವುದನ್ನೇ ಆಸೆ ಕಂಗಳಿಂದ ನೋಡುತ್ತಿದೆ. ಆದರೆ, ಆತ ನಾಯಿಯ ಕಡೆಗೆ ನೋಡಿದಾಗ, ಅದು ತನ್ನ ದೃಷ್ಟಿ ಬದಲಾಯಿಸಿ ಎತ್ತಲೋ ನೋಡಿದಂತೆ ನಟಿಸುತ್ತದೆ. ಮತ್ತೆ ಆತ ತಿನ್ನುವ ಕಾರ್ಯದಲ್ಲಿ ಮುಂದುವರಿದಾಗ ಅದೂ ಮತ್ತೆ ತಿನಿಸನ್ನೇ ಆಸೆ ಕಂಗಳಿಂದ ನೋಡುತ್ತದೆ. ಆದರೆ ಆತ ನೋಡುವಾಗ ಮಾತ್ರ ದೃಷ್ಟಿ ಬೇರೆ ಕಡೆಗೆ ತಿರುಗಿಸುತ್ತದೆ!
ತಮಾಷೆಯಾಗಿರುವ ಈ ವಿಡಿಯೋನಲ್ಲಿ ನಾಯಿಯ ಭಾವನೆಯನ್ನು ನೋಡಲು ವಿಡಿಯೋವನ್ನೇ ವೀಕ್ಷಿಸಬೇಕು. ಮುದ್ದುಮುದ್ದಾಗಿ ಅದು ಮುಖ ತಿರುಗಿಸಿ ಎತ್ತಲೋ ನೋಡುವ ಅದರ ಅಭಿನಯವೇ ಅದ್ಭುತವಾಗಿದೆ. ತಮಾಷೆಯಾಗಿದ್ದರೂ ಮುದ್ದು ಬರುವಂತಿದೆ. ಸದ್ಯಕ್ಕೆ ಇದನ್ನು ೮.೮ ಮಿಲಿಯನ್ ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
ಕೆಲವರು, ಅಯ್ಯೋ ಇದು ಅನ್ಯಾಯ, ಅಷ್ಟು ಪಕ್ಕದಲ್ಲಿ ಕೂತು, ಆತ ತಿನ್ನುತ್ತಿರುವಾಗ ತಿನಿಸಿನ ಪರಿಮಳವನ್ನೂ ಮೂಸಿಕೊಂಡು ಹಾಗೆ ಕೂತಿರುವುದು ಎಷ್ಟು ಕಷ್ಟ. ನಾಯಿಗೆ ಬಹುಶಃ ಹೀಗಿರಲು ತರಬೇತಿ ಕೊಟ್ಟಿರಬಹುದು ಎಂದೂ ಹೇಳಿದ್ದಾರೆ. ಆದರೂ ಬಹಳಷ್ಟು ಮಂದಿ ಈ ವಿಡಿಯೋವನ್ನು ದಿನವೂ ಕೂತು ನೋಡಿ ಮನಸ್ಸು ಬಿಚ್ಚಿ ನಕ್ಕು ಹಗುರಾಗಬಹುದು. ಅಷ್ಟು ಮುದ್ದಾಗಿಯೂ, ತಮಾಷೆಯಾಗಿಯೂ ಇದೆ ಎಂದು ಕಾಮೆಂಟಿಸಿದ್ದಾರೆ.
ಇದನ್ನೂ ಓದಿ | Viral post | ಮೊದಲ ಬಾರಿಗೆ ವಿಮಾನ ಹತ್ತಲು ಬಂದ ಹಳ್ಳಿ ದಂಪತಿಗಳಿಗೇನಾಯ್ತು: ಒಂದು ಹೃದಯಸ್ಪರ್ಶಿ ಪೋಸ್ಟ್!