ಪುಣೆ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳು ಸದ್ದು ಮಾಡುತ್ತಿವೆ. ರೈಲಿನೊಳಗೆ ನಡೆಯುವ ಅಸಭ್ಯ ವರ್ತನೆ, ಅಹಿತಕರ ಘಟನೆ, ಅಪಘಾತಗಳು ಆಗಾಗ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡು ವೈರಲ್ ಆಗುತ್ತವೆ. ಇದೀಗ ಪುಣೆ ಮೆಟ್ರೋ (Pune Metro) ಸ್ಟೇಷನ್‌ನಲ್ಲಿ ನಡೆದ ಘಟನೆಯೊಂದರ ಸಿಸಿ ಟಿವಿ ಕ್ಯಾಮೆರಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 3 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ಸೆಕ್ಯುರಿಟಿ ಗಾರ್ಡ್ ರಕ್ಷಿಸುವ ವಿಡಿಯೊ ಇದಾಗಿದೆ (Viral Video). ಜನವರಿ 19ರಂದು ಈ ಘಟನೆ ನಡೆದಿತ್ತು.
– पुणे मेट्रोच्या सुरक्षा रक्षकाने दोन जीव वाचवले
— Pune Metro Rail (@metrorailpune) January 20, 2024
– Two Lives Saved by Pune Metro security Guard
Pune Metro Guard, Mr. Vikas Bangar, displayed an exemplary presence of mind that saved the life of a 3-year-old boy. On the date 19.01.2024 at 14:22 hrs,
A 3-year-old boy fell… pic.twitter.com/a2DDwoCw3f
ಏನಿದು ಘಟನೆ?
ಅದು ಪುಣೆಯ ಸಿವಿಲ್ ಕೋರ್ಟ್ ಎಲಿವೇಟೆಡ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2. ಗಂಟೆ ಅಪರಾಹ್ನ 2.22ರ ಸುಮಾರು. ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸುಮಾರು 2ರಿಂದ 3 ವರ್ಷದ ಬಾಲಕ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಹಳಿಗಳ ಮೇಲೆ ಬಿದ್ದು ಬಿಟ್ಟ. ತಾಯಿ ತನ್ನ ಮಗುವನ್ನು ರಕ್ಷಿಸಲು ಹಳಿಗಳ ಮೇಲೆ ಹಾರಿದರು. ಇನ್ನೇನು ರೈಲು ಬರುವ ಹೊತ್ತು. ಎಲ್ಲರೂ ದಂಗಾಗಿ, ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಯಾರಿಗೆ ಏನು ಮಾಡಬೇಕೆಂದು ತೋಚದ ಕ್ಷಣವದು.
ಆಗಲೇ ಆಪತ್ಬಾಂಧವನ ರೂಪದಲ್ಲಿ ನೆರವಿಗೆ ಧಾವಿಸಿದವರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ವಿಕಾಸ್ ಬಂಗಾರ್. ತಮ್ಮ ಸಮಯೋಚಿತ ಕರ್ತವ್ಯ ಪ್ರಜ್ಞೆಯಿಂದ ನಡೆಯಬಹುದಾದ ಅತಿ ದೊಡ್ಡ ಅವಘಢವನ್ನು ತಪ್ಪಿಸಿ ಅಕ್ಷರಶಃ ಹೀರೋ ಎನಿಸಿಕೊಂಡರು. ಕೂಡಲೇ ಅವರು ತುರ್ತು ರೈಲು ನಿಲುಗಡೆ (Emergency stop plunger-ESP) ಬಟನ್ ಒತ್ತಿದರು. ಧಾವಿಸಿ ಬರುತ್ತಿದ್ದ ರೈಲು ನಿಲ್ದಾಣದಿಂದ ಕೇವಲ 30 ಮೀಟರ್ ದೂರದಲ್ಲಿ ಎರಡೂ ಬದಿಗಳಲ್ಲಿ ನಿಂತು ಬಿಟ್ಟಿತು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಮ್ಮ-ಮಗುವಿನ ರಕ್ಷಣೆಗೆ ಧಾವಿಸಿದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಮಯೋಚಿತ ನಿರ್ಧಾರದಿಂದ ಅಮ್ಮ-ಮಗುವಿನ ಜೀವ ಕಾಪಾಡಿದ ವಿಕಾಸ್ ಬಂಗಾರ್ ಅವರಿಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಸ್ ಬಂಗಾರ್ ಅವರ ತ್ವರಿತ ಪ್ರತಿಕ್ರಿಯೆಯು ಸಂಭಾವ್ಯ ವಿಪತ್ತನ್ನು ತಪ್ಪಿಸಿದ್ದಲ್ಲದೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಉತ್ತಮ ತರಬೇತಿ ಪಡೆದ ಸಿಬ್ಬಂದಿಯ ಪಾತ್ರದ ಮಹತ್ವನ್ನು ಒತ್ತಿ ಹೇಳಿದೆ. ವಿಕಾಸ್ ಅವರ ಸಮಯೋಚಿತ ಕ್ರಮದಿಂದ ಮಗು ಮತ್ತು ತಾಯಿ ಇಬ್ಬರೂ ಯಾವುದೇ ಗಾಯಗಳಿಂದ ಪಾರಾಗಿದ್ದಾರೆ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಕಾಸ್ ಬಂಗಾರ್ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇಂತಹ ನಿಷ್ಠಾವಂತ ಸಿಬ್ಬಂದಿ ಅಗತ್ಯ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ವಿಕಾಸ್ ಬಂಗಾರ್ ನಿಜಾರ್ಥದಲ್ಲಿ ಅಮ್ಮ-ಮಗುವಿನ ಪಾಲಿನ ದೇವರು ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರದೊಳಗೆ ಎರಡನೇ ದಿನವೇ ಹನುಮಾನ್ ಪ್ರವೇಶ!
ಇತ್ತ ಪುಣೆ ಮೆಟ್ರೋ ರೈಲ್ವೇ ಅಧಿಕಾರಿಗಳು ವಿಕಾಸ್ ಬಂಗಾರ್ ಅವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಅವರನ್ನು ಗೌರವಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ