Site icon Vistara News

Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ!

cobra

cobra

ಬೆಂಗಳೂರು: ʼಹಾವುʼ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳುವವರೇ ಅಧಿಕ. ಅದರಲ್ಲೂ ಕಾಳಿಂಗ ಸರ್ಪವನ್ನು ಫೋಟೊದಲ್ಲಿ ನೋಡಿದರೂ ಭಯಪಡುವವರಿದ್ದಾರೆ. ಈ ಎಲ್ಲರ ಮಧ್ಯೆ ಈ ವ್ಯಕ್ತಿಯೊಬ್ಬರು ಭಿನ್ನವಾಗಿ ನಿಲ್ಲುತ್ತಾರೆ. ಕಾಳಿಂಗ ಸರ್ಪವನ್ನು ಮಗುವಿನಂತೆ ಸ್ನಾನ ಮಾಡಿಸುವುದನ್ನು ನೀವು ಊಹಿಸಿಕೊಳ್ಳಲು ಸಾಧ್ಯವೆ? ಆದರೆ ಈ ವ್ಯಕ್ತಿ ಅದನ್ನು ಮಾಡಿ ತೋರಿಸಿದ್ದಾರೆ. ಸದ್ಯ ಈ ವಿಡಿಯೊ ಇದೀಗ ವೈರಲ್‌ (Viral Video) ಆಗಿದೆ.

ಕೇವಲ 19 ಸೆಕೆಂಡ್‌ನ ಈ ವಿಡಿಯೊ ಹಲವರ ಗಮನ ಸೆಳೆದಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದಾ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ʼʼಕಾಳಿಂಗ ಸರ್ಪಕ್ಕೆ ಸ್ನಾನ. ಹಾವುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸ್ವಚ್ಛವಾಗಿಟ್ಟುಕೊಳ್ಳಲು ನಿಯಮಿತವಾಗಿ ಪೊರೆಯನ್ನು ಕಳಚುತ್ತವೆ. ಹಾಗಿದ್ದೂ ಬೆಂಕಿಯೊಡನೆ ಸರಸವಾಡುವ ಪ್ರಯತ್ನವೇಕೆ?ʼʼ ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲೇನಿದೆ?

ಯುವಕನೊಬ್ಬ ಯಾವುದೇ ಅಂಜಿಕೆ ಇಲ್ಲದೆ, ಧೈರ್ಯದಿಂದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಆ ವ್ಯಕ್ತಿಯು ಬಕೆಟ್‌ನಿಂದ ಹಾವಿನ ಮೇಲೆ ಪದೇಪದೆ ನೀರನ್ನು ಸುರಿಯುತ್ತಾರೆ. ಮಾತ್ರವಲ್ಲ ಒಂದು ಹಂತದಲ್ಲಿ ಅವರು ಆ ಅಪಾಯಕಾರಿ ಹಾವಿನ ತಲೆಯನ್ನೂ ಸವರಿ ಅದರ ದೇಹವನ್ನು ಸ್ವಚ್ಛಗೊಳಿಸುತ್ತಾರೆ. ಸದ್ಯ ಈ ವಿಡಿಯೊವನ್ನು 20 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ವ್ಯಕ್ತಿಯ ಧೈರ್ಯವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಹುಚ್ಚು ಸಾಹಸ ಎಂದು ಕರೆದಿದ್ದಾರೆ.

ನೆಟ್ಟಿಗರು ಏನಂದ್ರು?

“ಸೆರೆಯಲ್ಲಿರುವಾಗ ಕೆಲವೊಮ್ಮೆ ಹಾವುಗಳಿಗೆ ತಮ್ಮ ಪೊರೆಯನ್ನು ಸಂಪೂರ್ಣವಾಗಿ ಕಳಚಲು ಸಾಧ್ಯವಾಗುವುದಿಲ್ಲ. ಹಳೆಯ ಪೊರೆಯ ಸಣ್ಣ ಭಾಗವು ಚರ್ಮಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಮಾನವ ಹಸ್ತಕ್ಷೇಪದ ಅಗತ್ಯವಿರುತ್ತದೆ. ಆದರೆ ಅದಕ್ಕಾಗಿ ಸ್ನಾನ ಮಾಡಿಸುವುದು ಸರಿಯಾದ ಮಾರ್ಗವಲ್ಲʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಹಾವಿನ ಹಲ್ಲು ಕಿತ್ತು ಹಾಕಿರುವ ಹಾಗಿದೆʼʼ ಎಂದು ಇನ್ನೊಬ್ಬರು ಊಹಿಸಿದ್ದಾರೆ. “ಈ ಹಾವು ಥಾಯ್ ಕೋಬ್ರಾ ಪ್ರದರ್ಶನದ್ದಾಗಿರಬೇಕು. ಅವರು ಹಾವುಗಳನ್ನು ಸಾಕುಪ್ರಾಣಿಗಳಾಗಿ ಬೆಳೆಸುತ್ತಾರೆ” ಎಂದು ಮತ್ತೊಬ್ಬರು ಮಾಹಿತಿ ನೀಡಿದ್ದಾರೆ. ʼʼಸಾಕು ಪ್ರಾಣಿಗಳು ಯಾವತ್ತೂ ಸ್ವಚ್ಛವಾಗಿರಬೇಕುʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಬಹುಶಃ ಇದು ಕೊನೆಯ ಸ್ನಾನ ಇರಬೇಕುʼʼ ಎಂದು ಮಗದೊಬ್ಬರು ಹೇಳಿದ್ದಾರೆ. ʼʼಇದು ಸೋಪ್‌ನ ಜಾಹೀರಾತುʼʼ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.

ಇದೇ ರೀತಿಯ ಮತ್ತೊಂದು ವಿಡಿಯೊ

ವ್ಯಕ್ತಿಯೊಬ್ಬ ಎರಡು ನಾಗರ ಹಾವುಗಳನ್ನು ಏಕ ಕಾಲಕ್ಕೆ ಸ್ನಾನ ಮಾಡಿಸುವ ಇದೇ ರೀತಿಯ ವಿಡಿಯೊವೊಂದು ಆಗಸ್ಟ್‌ನಲ್ಲಿ ವೈರಲ್‌ ಆಗಿತ್ತು. ಈ ಪೈಕಿ ಒಂದು ನಾಗರಹಾವು ತನ್ನ ಮೇಲೆ ನೀರನ್ನು ಸುರಿದಾಗ ಮಿಸುಕಾಡುತ್ತಿದ್ದರೆ ಇನ್ನೊಂದು ಶಾಂತವಾಗಿ ವರ್ತಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬರುತ್ತದೆ. ಇಲ್ಲೂ ಆ ವ್ಯಕ್ತಿ ಯಾವುದೇ ಅಂಜಿಕೆ, ಭಯವಿಲ್ಲದೆ ಹಾವುಗಳ ಸ್ನಾನ ಮಾಡಿಸುತ್ತಿರುವುದು ಕಂಡು ಬಂದಿದೆ. ವೃತ್ತಿಪರ ಪ್ರಾಣಿ ರಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ ಸಿಂಟು ಸ್ನೇಕ್ ಸೇವರ್ ಎಂಬ ಬಳಕೆದಾರರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಒಂದೇ ಬಾರಿ ಎರಡೆರಡು ಹಾವು ನೋಡಿ ಅನೇಕರು ಬೆಚ್ಚಿ ಬಿದ್ದಿದ್ದರು.

ಇದನ್ನೂ ಓದಿ: Viral Video: ಶ್‌! ಯಾರೂ ಡಿಸ್ಟರ್ಬ್‌ ಮಾಡಬೇಡಿ; ಕಡತ ನೋಡುವುದರಲ್ಲೇ ನಿರತವಾದ ಕೋತಿ

Exit mobile version