Site icon Vistara News

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

kim

kim

ಉತ್ತರ ಕೊರಿಯಾ: ಉತ್ತರ ಕೊರಿಯಾ (North Korea)ದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್(Kim Jong Un) ಹೆಚ್ಚು ಮಕ್ಕಳನ್ನು ಹೆರುವಂತೆ ಮಹಿಳೆಯರಲ್ಲಿ ಮನವಿ ಮಾಡಿ ಕಣ್ಣೀರು ಸುರಿಸಿದ್ದಾರೆ. ಭಾನುವಾರ (ಡಿಸೆಂಬರ್‌ 3) ನಡೆದ ತಾಯಂದಿರ ರಾಷ್ಟ್ರೀಯ ಸಭೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕಿಮ್​ ಜಾಂಗ್​ ಉನ್ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್ ಆಗುತ್ತಿದೆ (Viral Video).

ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣವು ಕುಸಿಯುತ್ತಿದೆ. ಆದ್ದರಿಂದ ‘ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸುವ’ ಪ್ರಯತ್ನದ ಭಾಗವಾಗಿ ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಕಿಮ್ ಕರೆ ನೀಡಿದ್ದಾರೆ. ಬಳಿಕ ಅವರು ಭಾವುಕರಾಗಿದ್ದಾರೆ. ಬಿಳಿ ಕರವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಳ್ಳುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ ಸಭೆಯಲ್ಲಿದ್ದ ಅನೇಕ ಮಹಿಳೆಯರು ಕೂಡ ಭಾವುಕರಾಗಿದ್ದಾರೆ. “ಜನನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮಕ್ಕಳ ಆರೈಕೆ, ಉತ್ತಮ ಶಿಕ್ಷಣವನ್ನು ಒದಗಿಸಲು ವಾವೆಲ್ಲ ಒಂದಾಗಿ ಕಾರ್ಯ ನಿರ್ವಹಿಸಬೇಕು. ಸಮಸ್ಯೆ ಪರಿಹಾರಕ್ಕೆ ತಾಯಂದಿರೊಂದಿಗೆ ನಾವೆಲ್ಲ ಕೈ ಜೋಡಿಸೋಣʼʼ ಎಂದು ಕಿಮ್ ಹೇಳಿದ್ದಾರೆ.

ಕಾರಣವೇನು?

ವಿಶ್ವಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣ ಕುಸಿತ ಕಂಡಿದೆ. 2023ರ ವೇಳೆಗೆ ಇಲ್ಲಿ ಜನಿಸುವ ಸರಾಸರಿ ಮಕ್ಕಳ ಸಂಖ್ಯೆ 1.8ರಷ್ಟಿದೆ. ಸ್ಪರ್ಧಾತ್ಮಕ ಶಾಲಾ ಮಾರುಕಟ್ಟೆ, ದುರ್ಬಲ ಮಕ್ಕಳ ಆರೈಕೆ, ಪುರುಷ ಕೇಂದ್ರಿತ ಕಾರ್ಪೊರೇಟ್ ಸಂಸ್ಕೃತಿ ಇತ್ಯಾದಿ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

1970-80ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ನಿಧಾನಗೊಳಿಸಲು ಉತ್ತರ ಕೊರಿಯಾ ಜನನ ನಿಯಂತ್ರಣ ಯೋಜನೆಗಳನ್ನು ಜಾರಿಗೆ ತಂದಿತ್ತು. ಈ ಮಧ್ಯೆ 1990ರ ದಶಕದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಕ್ಷಾಮದ ಪರಿಣಾಮ ಲಕ್ಷಾಂತರ ಮಂದಿ ಅಸುನೀಗಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಿಧ ಕೊಡುಗೆಗಳ ಘೋಷಣೆ

ಇದೀಗ ಜನಸಂಖ್ಯೆ ಹೆಚ್ಚಿಸಲು ನಿರ್ಧರಿಸಿರುವ ಉತ್ತರ ಕೊರಿಯಾ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಇಂತಹ ಕುಟುಂಬಗಳಿಗೆ ಉಚಿತ ವಸತಿ ವ್ಯವಸ್ಥೆ, ಸಬ್ಸಿಡಿ, ಉಚಿತ ಆಹಾರ, ಔಷಧ ಮತ್ತು ಗೃಹೋಪಯೋಗಿ ವಸ್ತುಗಳ ಪೂರೈಕೆ ಮತ್ತು ಈ ವರ್ಷ ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸೇರಿದಂತೆ ಹಲವು ಕೊಡುಗೆಗಳನ್ನು ಪರಿಚಯಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

ಹ್ಯುಂಡೈ ಇನ್‌ಸ್ಟಿಟ್ಯೂಟ್‌ ವರದಿ ಪ್ರಕಾರ, ಉತ್ತರ ಕೊರಿಯಾದಲ್ಲಿ 2034ರಿಂದ ಜನಸಂಖ್ಯೆ ತೀವ್ರವಾಗಿ ಕುಗ್ಗುವ ಸಾಧ್ಯತೆ ಇದೆ. 2070ರ ವೇಳೆಗೆ ಇಲ್ಲಿನ ಜನಸಂಖ್ಯೆ 23.7 ಮಿಲಿಯನ್‌ (23,700,000)ಗೆ ಕುಸಿಯುವ ಅಂದಾಜಿದೆ ಎಂದು ಹೇಳಿದೆ. ಈ ಮಧ್ಯೆ ಪುರುಷ ಪ್ರಧಾನ ವ್ಯವಸ್ಥೆಯಿಂದಾಗಿ ಉತ್ತರ ಕೊರಿಯಾದಲ್ಲಿ ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಅದು ವರದಿಯಾಗುವುದಿಲ್ಲ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version