ಸಾಮಾಜಿಕ ಜಾಲತಾಣದಲ್ಲಿ, ಇಂತಹ ವಿಡಿಯೋಗಳು ಜನಮನ ಗೆಲ್ಲುತ್ತವೆ, ವೈರಲ್ ಆಗುತ್ತವೆ. ಮನುಷ್ಯನಷ್ಟು ಬುದ್ಧಿವಂತ ಪ್ರಾಣಿ ಇನ್ನೊಂದಿಲ್ಲ ಎಂದುಕೊಳ್ಳುವಾಗಲೆಲ್ಲ, ಸಹಾಯ ಮಾಡಿದವರನ್ನೂ ಮರೆತು ಮನುಷ್ಯ ಮುಂದೆ ಸಾಗುವಾಗ ಆಗೊಮ್ಮೆ ಈಗೊಮ್ಮೆ ಇಂತಹ ಅಪರೂಪದ ವಿಡಿಯೋಗಳು ಕಣ್ಣಂಚು ಒದ್ದೆ ಮಾಡುತ್ತವೆ. ಮನುಷ್ಯ ತೋರಿಸಬೇಕಾದ ಪ್ರೀತಿ, ಕಾಳಜಿ, ದಯೆಯನ್ನು ಆಗಾಗ ನೆನಪಿಸುವ ಪ್ರಯತ್ನ ಮಾಡುತ್ತವೆ. ಪ್ರಾಣಿಗಳು ತೋರಿಸುವ ಪ್ರೀತಿ ಅವುಗಳಲ್ಲಿರುವ ಬುದ್ಧಿಮತ್ತೆಯನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ.
ಇಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯನ್ನು ಹಂಚುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಅವರು ಶೇರ್ ಮಾಡಿರುವ ಈ ವಿಡಿಯೋನಲ್ಲಿ, ಪುಟಾಣಿ ಆನೆಯೊಂದು ಹಳ್ಳಿರಸ್ತೆ ಬದಿಯಲ್ಲಿ ಕಂಡ ಕಬ್ಬಿನಗದ್ದೆಯಲ್ಲಿ ಮನಸೋ ಇಚ್ಛೆ ಕಬ್ಬು ತಿನ್ನುವ ಆಸೆಯಿಂದ ಗದ್ದೆಗೆ ನುಗ್ಗಿದ್ದ ಸಂದರ್ಭ ಕೆಸರಿನಲ್ಲಿ ಕಾಲು ಹೂತು ಹೋಗಿ ಮೇಲೆ ಬರಲು ಪ್ರಯಾಸ ಪಡುತ್ತಿತ್ತು. ಕಾಲುಗಳೆರಡು ಕೆಸರಿನಲ್ಲಿ ಹೂತುಕೊಂಡು ಅದನ್ನು ಮೇಲೆತ್ತಲಾಗದೆ ಕಷ್ಟಪಡುತ್ತಿರುವಾಗ ಹುಡುಗಿಯೊಬ್ಬಳು ಧೈರ್ಯದಿಂದ ಆನೆಮರಿಯ ಬಳಿ ಹೋಗಿ ಮರಿಯಾನೆಯ ಕಾಲುಗಳನ್ನು ಕಷ್ಟಪಟ್ಟು ಕೆಸರಿನಿಂದ ಮೇಲೆತ್ತಲು ಸಹಾಯ ಮಾಡುವ ವಿಡಿಯೋ ಇದಾಗಿದೆ. ಹಳ್ಳಿಯ ರಸ್ತೆಬದಿಯಲ್ಲಿರುವ ಕಬ್ಬಿನ ಗದ್ದೆಯಲ್ಲಿ ಕಬ್ಬು ತಿನ್ನಲು ಬಂದ ಮರಿಯಾನೆಯ ಮೇಲೆ ಕೋಪ ಮಾಡಿಕೊಳ್ಳದೆ, ಆಕೆ, ಪ್ರೀತಿಯಿಂದ ಕಷ್ಟಪಟ್ಟು ಸಹಾಯ ಮಾಡುತ್ತಿರುವುದು ಎಲ್ಲರ ಮನಗೆದ್ದಿದೆ. ಜೊತೆಗೆ ಆಕೆಯ ಧೈರ್ಯಕ್ಕೆ ಭೇಷ್ ಎಂದಿದೆ.
ಇದು ಇಷ್ಟಕ್ಕೇ ನಿಂತಿಲ್ಲ. ಕೊನೆಗೂ ಹೂತುಹೋದ ಕಾಲನ್ನು ಮೇಲೆತ್ತುವಲ್ಲಿ ಸಫಲವಾಗಿ ಮುಂದೆ ಹೊರಟ ಆನೆಮರಿ, ಖುಷಿಯಿಂದ ತನಗೆ ಸಹಾಯ ಮಾಡಿದ ಯುವತಿಯ ಕಡೆಗೆ ನೋಡಿ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಸೊಂಡಿಲು ಮೇಲೆತ್ತಿ ಧನ್ಯವಾದವನ್ನೂ ಹೇಳಿದೆ. ಸಹಾಯಕ್ಕೆ ಪ್ರತಿಯಾಗಿ ಪುಟ್ಟ ಆನೆಮರಿ ಸೊಂಡಿಲು ಎತ್ತಿ ತೋರಿಸಿದ ಪ್ರೀತಿ ಎಲ್ಲರ ಮನಗೆದ್ದಿದೆ.
ಇದನ್ನೂ ಓದಿ | Viral video | ನೀರಿಗೆ ಬಿದ್ದ ಕಾಗೆಯನ್ನು ರಕ್ಷಿಸಿದ ಕರಡಿ!
೩೬ ಸೆಕೆಂಡುಗಳ ಈ ವೀಡಿಯೋ ಹಲವರ ಮುಖದಲ್ಲಿ ಖುಷಿ ತರಿಸಿದೆ. ಸಾವಿರಗಟ್ಟಲೆ ವೀಕ್ಷಣೆಯನ್ನು ಇದು ಕಂಡಿದ್ದು, ನೂರಾರು ಮಂದಿ ಈ ಹುಡುಗಿಯ ಧೈರ್ಯಕ್ಕೆ ಮೆಚ್ಚಿ ತಲೆದೂಗಿದ್ದಾರೆ. ಈ ಭೂಮಿ ಎಲ್ಲರಿಗೂ ಸೇರಿದ್ದಾಗಿದ್ದು, ಎಲ್ಲರಿಗೂ ಇಲ್ಲಿ ಬದುಕುವ ಹಕ್ಕಿದೆ ಎಂಬ ಸಂದೇಶ ರವಾನಿಸಿದ ಈ ಪೋಸ್ಟ್‌ಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಒಂದೇ. ಮನುಷ್ಯರೂ, ಪ್ರಾಣಿಗಳೂ ಪರಸ್ಪರ ಸಹಾಯ ಮಾಡಿಕೊಂಡು ಬದುಕಬೇಕು. ಎಲ್ಲರಿಗೂ ಇಲ್ಲಿ ಸಮಾನವಾಗಿ ಬದುಕುವ ಹಕ್ಕಿದೆ. ಆ ಹುಡುಗಿ ಧೈರ್ಯದಿಂದ ಹೋಗಿ ಆನೆಮರಿಗೆ ಸಹಾಯ ಮಾಡಿದ್ದು ಮನಮಿಡಿಯುವಂತಿದೆ. ಎಲ್ಲರೂ ಇದರಿಂದ ಲಭಿಸುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಸ್ಪರ ಸಹಾಯ ಮಾಡಬೇಕು. ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ ಎಂದು ಎಂದೂ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಆನೆಮರಿಗೆ ಸಹಾಯ ಮಾಡಿದ ಆಕೆಗೆ ಅನಂತಾನಂತ ಧನ್ಯವಾದಗಳು ಎಂದೂ ಕೆಲವರು ಆಕೆಯೆಡೆಗೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು, ಆನೆ ಸೊಂಡಿಲೆತ್ತಿ ಧನ್ಯವಾದವನ್ನು ಸಲ್ಲಿಸಿರುವುದಕ್ಕೆ ಮನಸೋತಿದ್ದಾರೆ.
ಇದನ್ನೂ ಓದಿ | Viral Video | ಪ್ರೀತಿ ಎಲ್ಲಿದೆ? – ಪತ್ನಿಯ ಕಾಲ್ಬೆರಳ ಉಗುರಿಗೆ ನೇಲ್ಪಾಲಿಶ್ ಹಚ್ಚುವುದರಲ್ಲೂ ಇದೆ !