ಫ್ರಾನ್ಸ್: ಮನುಷ್ಯನ ದೇಹಕ್ಕೆ ಚೂರು ಬೆಂಕಿ ಹತ್ತಿಕೊಂಡರೂ ಅದನ್ನು ಸಹಿಸಲಾಗದು. ಸುಟ್ಟ ಗಾಯದಿಂದ ಬಳಲಬೇಕಾಗುತ್ತದೆ. ಆದರೆ ಫ್ರಾನ್ಸ್‌ನ ಈ ಮನುಷ್ಯ ಬೆಂಕಿಯೊಂದಿಗೇ ಸರಸವಾಡುವವನು. ಅದೇ ಬೆಂಕಿಯೊಂದಿಗೇ ಆಡುತ್ತಲೇ ವರ್ಲ್ಡ್ ರೆಕಾರ್ಡ್ ಅನ್ನೂ ಬರೆದುಬಿಟ್ಟಿದ್ದಾನೆ. ಆತನ ರೆಕಾರ್ಡ್‌ನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಫ್ರಾನ್ಸ್‌ನ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿರುವ ಜೊನಾಥನ್ ವೆರೋ(39)ಗೆ ಬಾಲ್ಯದಿಂದಲೂ ಬೆಂಕಿಯ ಮೇಲೆ ಪ್ರೀತಿಯಂತೆ. ಅದಕ್ಕೆಂದೇ ಆತ ಅಗ್ನಿಶಾಮಕ ದಳಕ್ಕೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾನೆ ಕೂಡ. ಇದೀಗ ಆತ ತನ್ನ ಪೂರ್ತಿ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಬರೋಬ್ಬರಿ 272.25 ಮೀಟರ್ ದೂರವನ್ನು ಓಡಿದ್ದಾನೆ. ಪೂರ್ತಿ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಇಷ್ಟು ದೂರ ಓಡಿದ ಮೊದಲ ವ್ಯಕ್ತಿ ಎನ್ನುವ ರೆಕಾರ್ಡ್ ಬರೆದಿದ್ದಾನೆ. ಹಾಗೆಯೇ ಈತ ಪೂರ್ತಿ ದೇಹಕ್ಕೆ ಬೆಂಕಿ ಹಚ್ಚಿಕೊಂಡು ನೂರು ಮೀಟರ್ ದೂರವನ್ನು ಅತಿ ಕಡಿಮೆ ಸಮಯದಲ್ಲಿ ಓಡಿದ ವ್ಯಕ್ತಿ ಎನ್ನುವ ದಾಖಲೆಯನ್ನೂ ಬರೆದಿದ್ದಾನೆ. ನೂರು ಮೀಟರ್‌ಗಳನ್ನು 17 ಸೆಕೆಂಡುಗಳಲ್ಲಿ ಓಡಿದ್ದಾನೆ.
ಇದನ್ನೂ ಓದಿ: Video Viral : ಕೈಯಲ್ಲಿ ಗರುಡ ರೇಖೆ ಇದೆ, ನಂಗೇನೂ ಆಗಲ್ಲ ಎಂದು ಹಾವು ಹಿಡಿದು ಕಚ್ಚಿಸಿಕೊಂಡ! ಸತ್ತೇ ಹೋದ್ನಾ?
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಈತನ ಈ ಎರಡೂ ರೆಕಾರ್ಡ್‌ಗಳನ್ನು ಅಧಿಕೃತಗೊಳಿಸಿದೆ. ವೆರೋ ಅವರು ಹಲವಾರು ಫೂರ್ ಶೋಗಳನ್ನು ನಡೆಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬೆಂಕಿಯೊಂದಿಗೆ ಸಾಕಷ್ಟು ರೀತಿಯ ಸಾಹಸಗಳನ್ನು ಅವರು ಮಾಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದೆ ಕೂಡ.
New record: The fastest full body burn 100 m sprint without oxygen – 17 seconds by Jonathan Vero (France)
— Guinness World Records (@GWR) June 29, 2023
Jonathan also set the record for the farthest distance ran in full body burn during this attempt at 272.25 metres! 🔥 pic.twitter.com/J0QJsPNkPf
ಈ ದಾಖಲೆಗಳನ್ನು ಬರೆದ ನಂತರ ಮಾತನಾಡಿರುವ ವೆರೋ, “ಈ ಪ್ರದರ್ಶನ ನನಗೆ ಅತಿ ಮುಖ್ಯವಾಗಿತ್ತು. ಈ ಸಾಧನೆ ಸಾಧ್ಯವಾಗುವಂತೆ ಮಾಡಿದ ಅಗ್ನಿಶಾಮಕ ದಳಕ್ಕೆ ಮತ್ತು ನನಗೆ ತರಬೇತಿ ನೀಡಿದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಹಾಗೆಯೇ ಪ್ರೋತ್ಸಾಹಿಸಿದ ಜನರಿಗೂ ನನ್ನ ಧನ್ಯವಾದಗಳು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral News: 30 ವರ್ಷದ ಹಳೆಯ ಏರ್ ಪಾಸ್ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!
ಈ ವಿಡಿಯೊವನ್ನು ಎರಡು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ 24 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಹಾಗೆಯೇ ಆ ಸಂಖ್ಯೆ ಹೆಚ್ಚುತ್ತಲೇ ಇದೆ. ಹಲವಾರು ಮಂದಿ ವಿಡಿಯೊಗೆ ಲೈಕ್ ಮಾಡಿ, ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ದಾಖಲೆ ಬರೆದ ವೆರೋ ಅವರಿಗೆ ನೂರಾರು ಮಂದಿ ಕಾಮೆಂಟ್‌ಗಳ ಮೂಲಕ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.