Site icon Vistara News

Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

Viral Video

ಲಕ್ನೋ: ಐಫೋನ್‌ ಹೊಂದಿದವರು ತಕ್ಕಮಟ್ಟಿನ ಶ್ರೀಮಂತರು ಎನ್ನುವ ಮಾತಿದೆ. ಈ ಫೋನ್‌ಗಳಿಗೆ ದುಬಾರಿ ಬೆಲೆ ಆಗಿರುವ ಕಾರಣ ಹೀಗೆ ಹೇಳಲಾಗುತ್ತದೆ. ಜತೆಗೆ ಐಫೋನ್‌ ಪ್ರತಿಷ್ಠೆಯ ವಿಷಯ ಎಂದೂ ಕೆಲವರು ಭಾವಿಸುತ್ತಾರೆ. ಇದೇ ಕಾರಣಕ್ಕೆ ಐಫೋನ್‌ ಕುರುತಾದ ತಹೇವಾರಿ ಮೀಮ್ಸ್‌, ರೀಲ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತವೆ. ಇದೆಲ್ಲೆ ಫನ್ನಿ ವಿಡಿಯೊ ಬಿಡಿ. ಆದರೆ ಇದೀಗ ವೈರಲ್‌ ಆಗುತ್ತಿರುವ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ. ಅಂತಹದ್ದೇನಿದೆ ಈ ವಿಡಿಯೊದಲ್ಲಿ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Viral Video).

ಹೆದ್ದಾರಿಯೊಂದರಲ್ಲಿ ಲಾರಿ ಅಪಘಾತವಾಗಿದ್ದು, ಅದರಿಂದ ಹೊರಬಿದ್ದ ಜ್ಯೂಸ್‌ನ ಬಾಕ್ಸ್‌ ಅನ್ನು ಯುಕನೊಬ್ಬ ಎತ್ತಿಕೊಂಡು ಹೋಗುವ ದೃಶ್ಯ ಇದಾಗಿದೆ. ಅಪಘಾತಗೊಂಡ ಲಾರಿಯಲ್ಲಿದ್ದವರಿಗೆ ನೆರವಾಗುವುದು ಬಿಟ್ಟು ಈತ ಜ್ಯೂಸ್‌ ಎಗರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿ ಏನಿದೆ?

ಉತ್ತರಪ್ರದೇಶದ ಗಾಜಿಯಾಬಾದ್‌ನ ಲಾಲ್ ಕುವಾನ್ ಪ್ರದೇಶದಲ್ಲಿ ಸರಕು ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿತ್ತು. ಇದರಿಂದ ಹೊರ ಚೆಲ್ಲಿದ ತಂಪು ಪಾನೀಯಗಳ ಪ್ಯಾಕ್, ಬಾಕ್ಸ್‌ ರಸ್ತೆಯಲ್ಲಿ ಹರಡಿತ್ತು. ʼಕರ್ಮ್ ಕರೋ ಕಾಂಡ್ ನಹೀಂʼ (ಒಳ್ಳೆಯ ಕಾರ್ಯಗಳನ್ನು ಮಾಡಿ, ಕಿಡಿಗೇಡಿತನವನ್ನು ಮಾಡಬೇಡಿ) ಎಂದು ಬರೆದಿರುವ ಕಪ್ಪು ಟೀ ಶರ್ಟ್ ಧರಿಸಿದ ವ್ಯಕ್ತಿ ಅಪಘಾತ ಸಂಭವಿಸಿದ ಸ್ಥಳದ ಬಳಿ ನಡೆದುಕೊಂಡು ಬರುತ್ತಾನೆ. ಅವನು ಟ್ರಕ್‌ನಲ್ಲಿದ್ದವರಿಗೆ ನೆರವಾಗಲು ಬರುತ್ತಿದ್ದಾನೆ ಎಂದುಕೊಂಡರೆ ಅದು ತಪ್ಪು. ಅವನು ಫೋನಿನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ಬಿದ್ದಿರುವ ತಂಪು ಪಾನೀಯದ ಪ್ಯಾಕ್‌ ಎತ್ತಿ ಏನೂ ನಡೆದೇ ಇಲ್ಲವೆನ್ನುವಂತೆ ತನ್ನ ಪಾಡಿಗೆ ತಾನು ಹೊರಟು ಹೋಗುತ್ತಾನೆ. ವಿಶೇಷ ಎಂದರೆ ಆತನ ಕೈಯಲ್ಲಿರುವುದು ದುಬಾರಿ ಐಫೋನ್‌ ಎನ್ನುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಒಟ್ಟಿನಲ್ಲಿ ಆತನ ಟೀಷರ್ಟ್‌ನ ಸಂದೇಶಕ್ಕೂ, ಕೈಯಲ್ಲಿರುವ ಐಫೋನ್‌ಗೂ ಆತನ ವರ್ತನೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.

“ಬ್ರೋ, ತಂಪು ಪಾನೀಯವನ್ನು ಏಕೆ ಕದಿಯುತ್ತಿದ್ದೀಯಾ? ಅಪಘಾತ ಸಂಭವಿಸಿದೆ. ಕನಿಷ್ಠ ಅಪಘಾತ ಸ್ಥಳದಿಂದಾದರೂ ಕದಿಯಬೇಡ” ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅದಾಗ್ಯೂ ಐಫೋನ್‌ಧಾರಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ತಂಪು ಪಾನೀಯ ಪ್ಯಾಕ್‌ನೊಂದಿಗೆ ಹೊರಟು ಹೋಗುತ್ತಾನೆ.

ಇದನ್ನೂ ಓದಿ: Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

ನೆಟ್ಟಿಗರಿಂದ ಟೀಕೆ

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಆ ವ್ಯಕ್ತಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ʼʼಆತನ ನಿಜವಾದ ಸ್ವಭಾವ ಹೊರ ಬಂದಿದೆʼʼ ಎಂದು ಒಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ. ʼʼಇಂತಹ ವ್ಯಕ್ತಿಗಳಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?ʼʼ ಎಂದು ಇನ್ನೊಬ್ಬರು ಹತಾಶೆ ವ್ಯಕ್ತಪಡಿಸಿದ್ದಾರೆ. ʼʼತೀರ ಬಡವʼʼ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಇಎಂಐ ಪಾವತಿಸಿ ಐಫೋನ್‌ ಖರೀದಿಸಿರಬೇಕುʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಮಾನವೀಯತೆ ಮರೆಯಾಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಕೆಲವರಂತೂ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಜಿಯಾಬಾದ್‌ ಪೊಲೀಸರನ್ನು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಆತನ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.

Exit mobile version