Site icon Vistara News

Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Viral Video

ಹೈದರಾಬಾದ್‌: ಮೆಡಿಕಲ್ ಸ್ಟೋರ್‌ನಲ್ಲಿ (medical store) ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ (cardiac arrest) ಹಠಾತ್ ಸಾವನ್ನಪ್ಪಿರುವ ಘಟನೆ ಮೇ 5ರಂದು ಹೈದರಾಬಾದ್‌ನ (Hyderabad) ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಕೀಸರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪಳ್ಳಿಯ ಸತ್ಯನಾರಾಯಣ ಕಾಲೋನಿಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೆಡಿಕಲ್ ಸ್ಟೋರ್‌ನ ಸಿಸಿಟಿವಿ ದೃಶ್ಯದಲ್ಲಿ ಮೆಡಿಕಲ್ ಸ್ಟೋರ್ ನ ಬಿಲ್ಲಿಂಗ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆಘಾತದಿಂದ ಆತನತ್ತ ಧಾವಿಸಿ ಆತನನ್ನು ಬದುಕಿಸಲು ಯತ್ನಿಸಿದ. ಆದರೂ ಪ್ರಯೋಜನವಾಗಲಿಲ್ಲ.

ಈ ಹಿಂದೆಯೂ ತೆಲಂಗಾಣದಲ್ಲಿ ಇದೇ ರೀತಿಯ ಹೃದಯ ಸ್ತಂಭನದ ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಮೇಡ್ಚಲ್‌ನಲ್ಲಿ ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಬಲಿಯಾಗಿದ್ದರು. ಅದಕ್ಕೂ ಮುನ್ನ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದ.


ಹಠಾತ್ ಮತ್ತು ಅನಿರೀಕ್ಷಿತವಾಗಿರುವ ಈ ಘಟನೆಗಳ ಬಗ್ಗೆ ಅನೇಕರು ಆಶ್ಚರ್ಯ ಪಡುವಂತೆ ಮಾಡಿದೆ. ಇದಕ್ಕೆ ಕಾರಣವಾಗುವ ನಿರ್ದಿಷ್ಟ ಅಂಶಗಳನ್ನು ನಿರ್ಧರಿಸಲು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡುವುದು ಅತ್ಯಗತ್ಯವಾದರೂ, ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸಲು ಆರೋಗ್ಯ ಪರಿಸ್ಥಿತಿ ಅಥವಾ ಜೀವನಶೈಲಿಯ ಅಂಶಗಳು ಕಾರಣ ಎನ್ನುತ್ತಾರೆ ತಜ್ಞರು.

ಮಕ್ಕಳ ಎದುರೇ ತಂದೆಯ ಸಾವು

ಮೂವರು ಚಿಕ್ಕ ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಕ್ಲಬ್‌ನಲ್ಲಿ ನಡೆದಿದ್ದು, ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೀರತ್‌ನ ಜೈದಿ ಫಾರ್ಮ್‌ನ ನಿವಾಸಿ ಅರ್ಷದ್ (25) ಹತ್ಯೆಯಾದ ವ್ಯಕ್ತಿ. ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಮೀರತ್‌ನ ಕ್ಲಬ್‌ಗೆ ಬಂದಿದ್ದಾಗ ಈ ಘಟನೆ ನಡೆದಿತ್ತು.

ಇದನ್ನೂ ಓದಿ: K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಅರ್ಷದ್ ಮಕ್ಕಳೊಂದಿಗೆ ಭದಾನದಲ್ಲಿರುವ ಕ್ಲಬ್‌ನ ಈಜುಕೊಳಕ್ಕೆ ತೆರಳಿದ್ದರು. ಜನರಿಂದ ತುಂಬಿದ್ದ ಕ್ಲಬ್‌ನಲ್ಲಿ ಅರ್ಷದ್ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಅರ್ಷದ್ ತನ್ನ ಫೋನ್ ಅನ್ನು ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಅವರನ್ನು ಜನರ ಗುಂಪಿನಿಂದ ಪ್ರತ್ಯೇಕಿಸಲು ಪ್ರಯತ್ನಿಸಿದ್ದು, ಕೂಡಲೇ ಆತನ ಮೇಲೆ ಗುಂಡಿನ ದಾಳಿ ನಡೆದಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆರೋಪಿಗಳು ಅರ್ಷದ್ ಅವರ ತಲೆಗೆ ಅತಿ ಸಮೀಪದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

Exit mobile version