Site icon Vistara News

Viral Video: ಎಲ್ಲ ಖುಷಿಯನ್ನು ಯಾಕೆ ಮನುಷ್ಯ ಮಾತ್ರ ಅನುಭವಿಸಬೇಕು? ಸ್ವಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟ ಮಂಗಗಳು

Viral Video

Viral Video

ನವದೆಹಲಿ: ದೇಶದೆಲ್ಲೆಡೆ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಈ ವೇಳೆ ಕೊಳ, ನದಿ ಕಂಡರೆ ಸಾಕು ಹೋಗಿ ಈಜಾಡೋಣ ಎನಿಸುತ್ತದೆ. ಈ ಪರಿಯ ಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕಂಗಾಲಾಗಿವೆ. ಈ ಮಧ್ಯೆ ಮನುಷ್ಯರು ಮಾತ್ರ ಯಾಕೆ ನಾವೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿ ತಂಪು ಮಾಡಿಕೊಳ್ಳುತ್ತೇವೆ ಎಂಬಂತಿದೆ ಈ ಮಂಗಗಳ ವರ್ತನೆ. ಹೌದು, ಮುಂಬೈಯ ವಸತಿ ಸಂಕೀರ್ಣದ ಈಜುಕೊಳಕ್ಕೆ ಲಗ್ಗೆ ಇಟ್ಟ ಮಂಗಗಳ ಗುಂಪು ನೀರಾಟವಾಡುವ ಮೂಲಕ ಮೈ ಮನಸ್ಸು ಹಗುರ ಮಾಡಿಕೊಂಡಿವೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮುಂಬೈಯ ಬೋರಿವಾಲಿ ಪ್ರದೇಶದಲ್ಲಿರುವ ವಸತಿ ಸಂಕೀರ್ಣದೊಳಗೆ ಕಂಡುಬಂದ ಈ ದೃಶ್ಯವನ್ನು ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ. ಅದು ಪರಸ್ಪರ ಸಂಪರ್ಕ ಹೊಂದಿರುವ ಎರಡು ಈಜು ಕೊಳಗಳು. ಮೊದಲ ವಿಡಿಯೊದಲ್ಲಿ ಕೊಳದಲ್ಲಿ ಮಂಗಗಳು ಈಜುತ್ತಿರುವುದು ಕಂಡು ಬಂದರೆ ಎರಡನೇ ವಿಡಿಯೊದಲ್ಲಿ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಮಂಗಗಳು ನೆಗೆಯುತ್ತಿರುವುದು ಕಾಣಿಸುತ್ತಿದೆ. ʼಮಂಗಗಳು ಈಜು ಕೊಳಕ್ಕೆ ಮರಳಿವೆ. ಈ ಬೇಸಿಗೆಯ ದಿನವನ್ನು ಸಿಮ್ಮಿಂಗ್‌ ಪೂಲ್‌ನಲ್ಲಿ ಕಳೆಯುತ್ತಿವೆʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನೆಟ್ಟಿಗರು ಏನಂದ್ರು?

ಸದ್ಯ ಮಂಗಗಳ ಈ ನೀರಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಾಗಲೇ ಸಾವಿರಾರು ಮಂದಿ ನೋಡಿ ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ʼʼಈ ಬಿಸಿಲಿನ ಬೇಗೆಯಿಂದ ಪಾರಾಗಲು ಇದು ಅತ್ಯುತ್ತಮ ಮಾರ್ಗʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಸೂಪರ್‌. ಈ ಭೂಮಿ ಎಲ್ಲರಿಗಾಗಿ ಎನ್ನುವ ಮಾತನ್ನು ಈ ವಿಡಿಯೊ ನಿಜವಾಗಿಸಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼವಾವ್‌. ಈ ಕೋತಿಗಳ ಆಟ ನೋಡಲು ಖುಷಿಯಾಗುತ್ತಿದೆʼʼ ಎಂದು ಮತ್ತೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ʼʼಜೀವನ ಎಂದರೆ ಇದುʼʼ ಎನ್ನುವ ಉದ್ಘಾರ ಮಗದೊಬ್ಬರದ್ದು. ʼʼಈ ಕೋತಿಗಳು ಕೊಳದಲ್ಲಿ ಮಲ ವಿಸರ್ಜನೆ ಮಾಡದಿರುವವರೆಗೆ ಈಜುವುದು ಸ್ವೀಕಾರಾರ್ಹʼʼ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ದೇಶಾದ್ಯಂತ ಅನುಭವಕ್ಕೆ ಬರುತ್ತಿರುವ ಬಿಸಿಲಿನ ಝಳದ ಗಂಭೀರತೆಯನ್ನು ತೆರೆದಿಟ್ಟಿದೆ. ಜತೆಗೆ ನೋಡುಗರ ತುಟಿಯಂಚಿನಲ್ಲಿ ಕಿರುನಗೆ ಅರಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

ಮಂಗಗಳು ಈಜುಕೊಳದಲ್ಲಿ ಈ ರೀತಿ ನೀರಾಟವಾಡುತ್ತಿರುವ ಪ್ರಸಂಗ ಇದು ಮೊದಲೇನಲ್ಲ. ಹಿಂದೆಯೂ ಇದೇ ರೀತಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಮನೆಯೊಂದರ ಬಾಲ್ಕನಿಯಲ್ಲಿ ಮಂಗವೊಂದು ಕುಳಿತಿರುತ್ತದೆ. ಸ್ವಲ್ಪ ಹೊತ್ತು ಆಚೆ-ಈಚೆ ನೋಡುವ ಅದು ಬಳಿಕ ಆ ಕಟ್ಟಡದ ಕೆಳಭಾಗದಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದು ಈಜಾಡುತ್ತದೆ. ʼಯಾಕೆ ಎಲ್ಲ ಸಂತೋಷವನ್ನು ಮನುಷ್ಯ ಮಾತ್ರ ಅನುಭವಿಸಬೇಕು? ಪ್ರಾಣಿಗಳಿಗೂ ಈಜಲು ಬರುತ್ತೆʼ ಎನ್ನುವ ಅರ್ಥಪೂರ್ಣ ಕ್ಯಾಪ್ಶನ್‌ ನೀಡಿ ಈ ವಿಡಿಯೊವನ್ನು ಶೇರ್‌ ಮಾಡಲಾಗಿತ್ತು. ಇದು ಕೂಡ ಲಕ್ಷಾಂತರ ಮಂದಿಯ ಗಮನ ಸೆಳೆದಿತ್ತು. ಮಂಗನ ಬುದ್ಧಿವಂತಿಕೆಗೆ ಹಲವರು ತಲೆದೂಗಿದ್ದರು.

Exit mobile version