Site icon Vistara News

Viral Video: ʼಇರುವೆʼ ಜ್ಯೂಸ್‌ನಲ್ಲೂ ನೀ ಇರುವೆ; ಪಾನೀಯ ತಯಾರಿಕೆಗೆ ಕಪ್ಪಿರುವೆ ಬಳಕೆ!

cocktail

cocktail

ಮುಂಬೈ: ಕೆಲವು ಕಡೆಗಳಲ್ಲಿ ಕೆಂಪಿರುವೆಯ ಚಟ್ನಿ ಮಾಡಿ ಸೇವಿಸುತ್ತಾರೆ ಎನ್ನುವುದು ನಮಗೆ ಗೊತ್ತು. ಆದರೆ ಕಪ್ಪಿರುವೆಯ ಪಾನೀಯ ಮಾಡುವುದುದನ್ನು ಕೇಳಿದ್ದೀರಾ? ಹೌದು, ಅಚ್ಚರಿಯಾದರೂ ಇದು ಸತ್ಯ. ಮುಂಬೈಯ ಬಾರ್‌ ಒಂದರಲ್ಲಿ ಕಪ್ಪಿರುವೆಯ ಕಾಕ್‌ಟೇಲ್‌ ಬಹಳ ಜನಪ್ರಿಯ. ಸದ್ಯ ವಿಶೇಷ ಕಾಕ್‌ಟೇಲ್‌ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ (Viral Video).

ಮುಂಬೈ ಮೂಲದ ಈ ರೆಸ್ಟೋರೆಂಟ್‌ನಲ್ಲಿ ಕಪ್ಪು ಇರುವೆಗಳನ್ನು ಪಾನೀಯದಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಮುಂಬೈಯ ಬಾಂದ್ರಾದ ಹಿಲ್ ರಸ್ತೆಯಲ್ಲಿರುವ ಸೀಫಾ ರೆಸ್ಟೋರೆಂಟ್‌ನಲ್ಲಿ ಈ ವಿಶೇಷ ಕಾಕ್‌ಟೇಲ್‌ ಲಭಿಸುತ್ತದೆ. ವೈರಲ್‌ ಆದ ವಿಡಿಯೊದಲ್ಲಿ ವ್ಲಾಗರ್ ಪಾನೀಯವನ್ನು ಆನಂದಿಸುವುದಲ್ಲದೆ ಅದನ್ನು ʼರುಚಿಕರʼ ಎಂದು ಕರೆದಿದ್ದಾರೆ. ಬಳಿಕ ಮೆನು ಕಾರ್ಡ್‌ ಅನ್ನು ತೋರಿಸುತ್ತಾರೆ. ಅದರಲ್ಲಿ ಈ ಕಾಕ್‌ಟೇಲ್‌ ಹೆಸರನ್ನು ಕಂಡು ಬರುತ್ತದೆ. ‘ದಿ ಆಂಟ್ಜ್’ (The Antz) ಹೆಸರಿನ ಈ ಪಾನೀಯವನ್ನು ಮೆಜ್ಕಲ್, ಟಕಿಲಾ ಬ್ಲಾಂಕೊ, ದ್ರಾಕ್ಷಿಹಣ್ಣು, ವೆಟಿವರ್, ಕಪ್ಪು ಇರುವೆಯನ್ನು ಬಳಸಿ ತಯಾರಿಸಲಾಗುತ್ತದೆ. ʼಇರುವೆಯ ಕಾಕ್‌ಟೇಲ್‌. ನೀವೂ ಒಮ್ಮೆ ಟ್ರೈ ಮಾಡಿ. ಕಾಕ್‌ಟೇಲ್‌ ಇಷ್ಟ ಪಡುವ ಸ್ನೇಹಿತರಿಗೆ ಇದನ್ನು ತಿಳಿಸಿʼ ಎಂದು ಕ್ಯಾಪ್ಶನ್‌ ಬರೆಯಲಾಗಿದೆ. ʼʼಇರುವೆಗಳು ರುಚಿಕರ ಮತ್ತು ಗರಿಗರಿ” ಎಂದು ಉಲ್ಲೇಖಿಸಿರುವ ವ್ಲಾಗರ್, ವಿಶಿಷ್ಟ ರೀತಿಯ ಪಾನೀಯ ಮತ್ತು ಅದರ ಅಲಂಕಾರವನ್ನು ಶ್ಲಾಘಿಸಿದ್ದಾರೆ. ಸದ್ಯ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.

ನಟ್ಟಿಗರು ಏನು ಹೇಳುತ್ತಾರೆ?

ಈ ಕಾಕ್‌ಟೇಲ್‌ ವಿಡಿಯೊಗೆ ಹಲವರು ನೆಗೆಟಿವ್‌ ಕಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಇರುವೆಗಳನ್ನು ಹುರಿದು ಬಳಸುತ್ತಾರೆಯೇ ಅಥವಾ ಅಲಂಕಾರಕ್ಕಾಗಿ ಮಾತ್ರ ಬಳಸುತ್ತಾರೆಯೇ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ. “ಹುಳಗಳು, ಕೀಟಗಳು ಮತ್ತು ನೊಣಗಳನ್ನು ತಿನ್ನುವ ಈ ವಿಲಕ್ಷಣ ಸಂಸ್ಕೃತಿಯಿಂದ ಭಾರತವು ಪ್ರಭಾವಿತವಾಗುತ್ತಿದೆ. ಇದು ಕಳವಳಕಾರಿ ಬೆಳವಣಿಗೆ. ಇಂತಹ ಸಾಂಸ್ಕೃತಿಕ ಆಘಾತವು ಭಾರತೀಯತೆಯ ಅನನ್ಯತೆ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇತರ ದೇಶಗಳಿಂದ ಉತ್ತಮ ಜೀವನ ವಿಧಾನವನ್ನು ಅಳವಡಿಸಿಕೊಳ್ಳಬೇಕೇ ಹೊರತು ಇಂತಹ ವಿಕೃತಿಯನ್ನಲ್ಲʼʼ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಪಾನೀಯದಲ್ಲಿ ಇರುವೆಗಳನ್ನು ಬಳಸುವುದು ಸಲ್ಲ. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಿʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಶಿಷ್ಟ ಪಾನೀಯದ ಬಗ್ಗೆ ನೆಟ್ಟಿಗರು ಅಸಮಾಧಾನ ಸೂಚಿಸಿದ್ದಾರೆ.

ಇಲ್ಲಿ ಇರುವೆಗಳನ್ನು ಕೇವಲ ಅಲಂಕಾರಕ್ಕಾಗಿ ಬಳಸಿದರೆ ಕೆಲವು ಕಡೆಗಳಲ್ಲಿ ಹಾವುಗಳು ಮತ್ತು ಹಸಿರು ಇರುವೆಗಳಿಂದ ಪಾನೀಯಗಳನ್ನು ತಯಾರಿಸಲಾಗುತ್ತದೆ. ವಿಯೆಟ್ನಾಮ್‌ನಲ್ಲಿ ವಿಶಿಷ್ಟ ಪಾನೀಯವಿದೆ. ಇದನ್ನು ಇಡೀ ಹಾವನ್ನು ವೈನ್‌ನಲ್ಲಿ ಮುಳುಗಿಸುವ ಮೂಲಕ ತಯಾರಿಸಲಾಗುತ್ತದೆ. ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ತಯಾರಾಗುವ ಆಂಟ್ ಜಿನ್ ಎಂದು ಕರೆಯಲ್ಪಡುವ ಮತ್ತೊಂದು ಪಾನೀಯ ಜನಪ್ರಿಯವಾಗಿದೆ. ಇದನ್ನು ಹಸಿರು ಇರುವೆಗಳಿಂದ ತಯಾರಿಸಲಾಗುತ್ತದೆ. ಇನ್ನು ಹಲವೆಡೆ ಜಿರಳೆ, ಇಲಿ, ನಾಯಿ ಮುಂತಾದ ಜೀವಿಗಳನ್ನು ತಿನ್ನುವವರೂ ಇದ್ದಾರೆ.

ಇದನ್ನೂ ಓದಿ: Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್‌ ಮಿಕ್ಸ್ ಅಂದ್ರು ನೆಟ್ಟಿಗರು

Exit mobile version