ಮುಂಬೈ ಎಂದರೆ ಹಲವು ಅಚ್ಚರಿಗಳ ಮಹಾನಗರಿ. ಇಲ್ಲಿ ಎಲ್ಲವೂ (Viral Video) ಇದೆ. ಇಲ್ಲಿ ಕೋಟ್ಯಾಧಿಪತಿಗಳೂ ಇದ್ದಾರೆ. ಏನೂ ಇಲ್ಲದೆ ದಿನಗೂಲಿಯಿಂದ ದಿನ ತಳ್ಳುವವರೂ ಇದ್ದಾರೆ. ಹಗಲು ರಾತ್ರಿಯೆನ್ನದೆ ಝಗಮಗಿಸುವ ಈ ನಗರಿಯಲ್ಲಿ ರಸ್ತೆಬದಿಯ ತಿಂಡಿಗಳಿಗೆ ಶ್ರೀಮಂತ ಬಡವರೆನ್ನದೆ ಎಲ್ಲರೂ ಮುಗಿ ಬೀಳುತ್ತಾರೆ. ಬೀದಿ ಬದಿಯ ಥರಹೇವಾರಿ ಚಾಟ್‌ಗಳೂ, ವಡಾಪಾವ್‌ಗಳೂ, ಸಮೋಸಾಗಳೂ, ದೋಸೆ, ಪರಾಠಾಗಳು ಹಲವರ ಹೊಟ್ಟೆಯನ್ನು ನಿತ್ಯವೂ ತುಂಬಿಸುತ್ತವೆ.
ಗಡಿ ದಾಟಿದ ದೋಸೆ
ದೋಸೆ ಎಂಬ ಬೆಳಗಿನ ಉಪಹಾರವೂ ಕೇವಲ ದಕ್ಷಿಣ ಭಾರತೀಯರ ಬೆಳಗಿನ ಉಪಹಾರವಾಗಿ ಉಳಿಯದೆ ದೇಶ ಗಡಿಗಳ ಹಂಗು ತೊರೆದು ಎಲ್ಲರನ್ನೂ ಆಕರ್ಷಿಸುತ್ತಿದೆ. ಸಂಜೆಯ ಹೊತ್ತು ಬೀದಿಬದಿಯಲ್ಲಿ ಜನರನ್ನು ಆಕರ್ಷಿಸುವ ತಿನಿಸುಗಳ ಪೈಕಿ ಇಂದು ದೋಸೆಗೆ ಅಗ್ರಗಣ್ಯ ಸ್ಥಾನವಿದೆ. ಉತ್ತರ ಭಾರತದ ಮಹಾನಗರಿಗಳಲ್ಲೂ ಇದೀಗ ದೋಸೆ ಎಲ್ಲರ ಪ್ರಿಯವಾದ ತಿನಿಸಾಗಿ ಮಾರ್ಪಡುತ್ತಿದೆ. ಇದೀಗ ಮುಂಬೈನ ಬೀದಿಬದಿಯ ದೋಸೆ ಸ್ಟಾಲ್ ಒಂದು ಭಾರೀ ಸುದ್ದಿಯನ್ನೇ ಮಾಡುತ್ತಿದೆ. ರಜನೀಕಾಂತ್ ಸ್ಟೈಲ್‌ನ ದೋಸೆ ಎಂದೇ ವೈರಲ್ ಆಗುತ್ತಿರುವ ಈ ದೋಸೆಯ ವಿಶೇಷತೆ ಏನು ಎಂದು ಅರ್ಥ ಮಾಡಿಕೊಳ್ಳಬೇಕಾದರೆ ನೀವು ಆ ವಿಡಿಯೋವನ್ನು ನೋಡಬೇಕು.
ದಾದರ್ ನ ಬೀದಿಯಲ್ಲಿ
ಮುಂಬೈನ ದಾದರ್‌ನಲ್ಲಿ ಬೀದಿ ಬದಿಯಲ್ಲಿ ತನ್ನ ದೋಸೆ ಗಾಡಿಯನ್ನಿಟ್ಟುಕೊಂಡು ದೋಸೆ ಮಾರುವ ಈತನ ದೋಸೆ ಮಾಡುವ ಶೈಲಿಯನ್ನೊಮ್ಮೆ ನೋಡಬೇಕು. ಚಕಾಚಕ್ ಎಂದು ಪಟಪಟನೆ ದೋಸೆ ಹೊಯ್ಯುವುದೂ ಅಲ್ಲದೆ, ಅದನ್ನು ತೆಗದು ತಟ್ಟೆಗೆ ಹಾಕುವ ಶೈಲಿಯೂ ವಿಶೇಷವಾದದ್ದೇ. ದೂರದಲ್ಲಿ ನಿಂತಿರುವ ದೋಸೆ ಸಪ್ಲೈ ಮಾಡುವಾತನ ತಟ್ಟೆಗಳಿಗೆ ಒಂದೊಂದಾಗಿ ಹಾರಿಕೊಂಡು ಹೋಗುವ ದೋಸೆಗಳನ್ನು ನೋಡುವುದೇ ಒಂದು ಮಜಾ. ದೋಸೆಯನ್ನು ಮಗುಚಿ ಎಸೆದರೆ ದೂರದಲ್ಲಿರುವ ಸಪ್ಲೈಯರ್ ಅದನ್ನು ತಟ್ಟೆಯಲ್ಲೇ ಕ್ಯಾಚ್ ಹಿಡಿದು ಗ್ರಾಹಕರಿಗೆ ನೀಡುತ್ತಾನೆ. ಈ ಇಬ್ಬರ ಕೌಶಲ್ಯದ ಜಾದೂ ನೋಡುವುದೇ ಅಲ್ಲಿಗೆ ದೋಸೆ ತಿನ್ನಲು ಬಂದವರಿಗೆ ಹಬ್ಬ. ಕಣ್ಣು ಬಾಯಿ ಬಿಟ್ಟುಕೊಂಡು ಕ್ರಿಕೆಟ್ ನೋಡುವಂತೆ ಈ ದೋಸೆ ಪ್ರದರ್ಶನವನ್ನು ವೀಕ್ಷಿಸುವ ಜೊತೆಗೆ ತಿಂದು ಹೊಟ್ಟೆ ತುಂಬಿಸಿಕೊಂಡು ಹೋಗುತ್ತಾರೆ.
ದೋಸಾ ಕಾರ್ನರ್
ಮುತ್ತು ದೋಸಾ ಕಾರ್ನರ್ ಎಂಬ ಹೆಸರಿನ ದಾದರ್‌ನಲ್ಲಿರುವ ದೋಸೆ ಗಾಡಿ ರಜನೀಕಾಂತ್ ಸ್ಟೈಲ್ ದೋಸಾವಾಲಾ ಎಂದೇ ಫೇಮಸ್ಸು. ಈತನ ದೋಸೆ ಎಸೆಯುವ ಸ್ಟೈಲ್ ನೋಡಲೆಂದೇ ಈತನ ಸ್ಟಾಲ್ ಹುಡುಕಿಕೊಂಡು ಬರುವುದುಂಟು. ಅಷ್ಟು ವೇಗವಾಗಿ ದೋಸೆ ಮಾಡುವುದೂ ಅಲ್ಲದೆ, ಅಷ್ಟೇ ವೇಗವಾಗಿ ತನ್ನದೇ ಆದ ಸ್ಟೈಲ್‌ನೊಂದಿಗೆ ದೋಸೆ ಗಾಳಿಯಲ್ಲಿ ಹಾರಿಸಿ ಅದು ನೇರವಾಗಿ ತಟ್ಟೆಗೆ ಬೀಳಿಸುವ ಕೌಶಲ್ಯ ಮಾತ್ರ ವಿನೂತನವಾದದ್ದು. ಅದಕ್ಕಾಗಿಯೇ ಈತ ರಜನೀಕಾಂತ್ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾರೆ.
ಸಪ್ಲಯರ್ ಕೌಶಲ್ಯ
ಹೀಗೆ ದೋಸೆ ಮಾಡು ಎಸೆಯುವಾಗ ಅದು ತಪ್ಪಿಯೂ ಬೇರೆಲ್ಲಿಯೋ ಹೋಗಿ ಬೀಳದು. ನೇರವಾಗಿ ಅದನ್ನು ತಟ್ಟೆಗೆ ಬೀಳುವಂತೆ ಮಾಡುವ ಸಪ್ಲಯರ್ ಕೌಶಲ್ಯವೂ ಇಲ್ಲಿ ಮೆಚ್ಚುವಂಥದ್ದೇ. ಈ ದೋಸೆ ವಿಡಿಯೋ ಇದೀಗ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಮಾಡಿದ್ದು ನೋಡುಗರೆಲ್ಲರೂ ಈತನ ಕಲೆಗೆ, ಕೌಶಲ್ಯಕ್ಕೆ ತಲೆದೂಗಿದ್ದಾರೆ. ಜನರು ಥರಹೇವಾರಿ ಕಮೆಂಟುಗಳನ್ನೂ ಮಾಡುತ್ತಿದ್ದಾರೆ. ಒಬ್ಬ ನೋಡುಗ, ಹೀಗೆ ದೋಸೆಯನ್ನು ನೇರವಾಗಿ ತಟ್ಟೆಗೆ ಕ್ಯಾಚ್ ಮಾಡುವಾತನನ್ನು ಭಾರತೀಯ ಕ್ರಿಕೆಟ್ ಟೀಮ್‌ನಲ್ಲಿ ಕ್ಯಾಚ್ ಹಿಡಿಯಲು ಕಳುಹಿಸಬಹುದು ಎಂದಿದ್ದಾರೆ!
ಇದನ್ನೂ ಓದಿ: Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ