Site icon Vistara News

Viral video: ಟೋಲ್‌ ಪ್ಲಾಜಾದಲ್ಲಿ ಬಂದೂಕುಧಾರಿಗಳ ದಾಳಿ; ಬಾವಿಗೆ ಬಿದ್ದು ಇಬ್ಬರು ಸಾವು; ವಿಡಿಯೋ ಇದೆ

viral video tolla assault

ಭೋಪಾಲ್: ಮಧ್ಯಪ್ರದೇಶದ ಒಂದು ಟೋಲ್ ಪ್ಲಾಜಾದಲ್ಲಿ (Toll Plaza) ರಾತ್ರಿ ಅಪರಿಚಿತ ಬಂದೂಕುಧಾರಿ ಮುಸುಕುಧಾರಿಗಳು ದಾಳಿ (Assault Case) ನಡೆಸಿದ್ದು, ಅವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಓಡಿದ ಇಬ್ಬರು ಟೋಲ್‌ ಸಿಬ್ಬಂದಿ ತೆರೆದ ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಕೃತ್ಯದ ದೃಶ್ಯಗಳು ಟೋಲ್‌ ಸಿಸಿಟಿವಿ (Viral video) ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಟೋಲ್ ಪಾವತಿ ವಿವಾದಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ತಮ್ಮನ್ನು ರಕ್ಷಿಸಿಕೊಳ್ಳಲು ಓಡಿದ ಆಗ್ರಾದ ಶ್ರೀನಿವಾಸ್ ಪರಿಹಾರ್ ಮತ್ತು ನಾಗ್ಪುರದ ಶಿವಾಜಿ ಕಂಡೆಲೆ ಎಂಬವರು ಬಾವಿಗೆ ಬಿದ್ದು ಮೃತರಾಗಿದ್ದಾರೆ. ಅವರ ಶವಗಳನ್ನು ನಿನ್ನೆ ಬಾವಿಯಿಂದ ಹೊರತೆಗೆಯಲಾಯಿತು.

ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ- 44ರಲ್ಲಿರುವ ದಗ್ರೈ ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಆತಂಕಕಾರಿ ದೃಶ್ಯಗಳು ಸೆರೆಯಾಗಿವೆ. ನಾಲ್ಕು ಬೈಕ್‌ಗಳಲ್ಲಿ ಮುಸುಕುಧಾರಿ ವ್ಯಕ್ತಿಗಳು ಟೋಲ್ ಬೂತ್‌ಗಳ ಬಳಿ ಬಂದು ಏಕಾಏಕಿ ಟೋಲ್ ಕೌಂಟರ್‌ಗಳ ಬಾಗಿಲುಗಳನ್ನು ಒದ್ದು ಮುರಿದರು. ಬೂತ್‌ಗಳ ಒಳಗೆ ನುಗ್ಗಿ ಕಂಪ್ಯೂಟರ್‌ಗಳನ್ನು ಹಾನಿಗೊಳಿಸಿದರು. ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಥಳಿಸಿ ಅವರನ್ನು ಹೊರಗೆ ಎಳೆದು ಹಾಕಿದರು.

ದಾಳಿಕೋರರು ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದಾಗ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಪಕ್ಕದ ಹೊಲದತ್ತ ಓಡಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಓಡುತ್ತಿದ್ದಾಗ ಪರಿಹಾರ್ ಮತ್ತು ಕಂಡೆಲೆ ಅವರು ಕಚೇರಿಯ ಹಿಂಭಾಗದ ತೆರೆದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದರು.

ಝಾನ್ಸಿ ಮತ್ತು ಗ್ವಾಲಿಯರ್ ನಡುವಿನ ಟೋಲ್ ಪ್ಲಾಜಾದ ಒಪ್ಪಂದವು ಏಪ್ರಿಲ್ 1ರಂದು ಬದಲಾಗಿತ್ತು. ಅದು ಹೊಸ ಗುತ್ತಿಗೆದಾರನಿಗೆ ಹಸ್ತಾಂತರಿಸಲ್ಪಟ್ಟಿತ್ತು. ಕೆಲವು ಸ್ಥಳೀಯರು, ಹಿಂದಿನ ಗುತ್ತಿಗೆದಾರರೊಂದಿಗೆ ಅಕ್ರಮ ಒಪ್ಪಂದ ಮಾಡಿಕೊಂಡಿದ್ದು, ತಮ್ಮ ವಾಹನಗಳು ಪಾವತಿ ಮಾಡದೆ ಟೋಲ್ ಬೂತ್‌ನಲ್ಲಿ ಹೋಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಹೊಸ ಗುತ್ತಿಗೆದಾರರು ಹೀಗೆ ಮಾಡಲು ನಿರಾಕರಿಸಿದ್ದರು. ಇದು ಕೆಲವು ಸ್ಥಳೀಯ ಪುಂಡರನ್ನು ಸಿಟ್ಟಿಗೆಬ್ಬಿಸಿದ್ದು, ಹೊಸ ಗುತ್ತಿಗೆದಾರರನ್ನು ಭಯಭೀತಗೊಳಿಸಲು ದಾಳಿಯನ್ನು ಯೋಜಿಸಿದ್ದರು ಎನ್ನಲಾಗಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೋಲ್ ತೆರಿಗೆಯು ಕೆಲವು ಎಕ್ಸ್‌ಪ್ರೆಸ್‌ವೇಗಳು, ಸುರಂಗಗಳು, ಸೇತುವೆಗಳು ಇತ್ಯಾದಿಗಳನ್ನು ಬಳಸಲು ವಾಹನ ಮಾಲೀಕರು ಪಾವತಿಸಬೇಕಾದ ಶುಲ್ಕವಾಗಿದೆ. ಮೊತ್ತವನ್ನು ದುರಸ್ತಿ ಮತ್ತು ನಿರ್ವಹಣೆಗಾಗಿ ಬಳಸಲಾಗುತ್ತದೆ. ವಾಹನದ ಗಾತ್ರವನ್ನು ಅವಲಂಬಿಸಿ ಶುಲ್ಕಗಳು ಬದಲಾಗುತ್ತವೆ.

ಇದನ್ನೂ ಓದಿ: Viral News: ಬಡಪಾಯಿ ರೋಗಿಯ ಮೇಲೆ ಪೌರುಷ ತೋರಿದ ಸೆಕ್ಯುರಿಟಿ ಗಾರ್ಡ್;‌ ಹಲ್ಲೆಯ ವಿಡಿಯೊ ನೀವೂ ನೋಡಿ

Exit mobile version