ನವದೆಹಲಿ: ದೇಶದಲ್ಲಿ ಮದುವೆ ಋತು ಆರಂಭವಾಗಿದೆ. ಈ ಮದುವೆಗಳ ಪೈಕಿ ಕೆಲವೊಂದು ತನ್ನ ಅದ್ಧೂರಿತನದಿಂದ ಗಮನ ಸೆಳೆದರೆ, ಇನ್ನು ಹಲವು ಸರಳವಾಗಿ ನೆರವೇರುತ್ತವೆ. ಈ ಮಧ್ಯೆ ಮದುವೆ ಮನೆಗಳಲ್ಲಿ ನಡೆಯುವ ಗಲಾಟೆ, ವಾಗ್ವಾದಗಳು ಕೂಡ ನೆಟ್ಟಿಗರ ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ ಅಡುಗೆಯಲ್ಲಿ ನೆಚ್ಚಿನ ಖಾದ್ಯ ಇಲ್ಲವೆಂದೋ, ಅಡುಗೆ ಪ್ರಮಾಣ ಕಡಿಮೆ ಆಗಿದೆಯೆಂದೋ ಗಲಾಟೆ ನಡೆಯುತ್ತವೆ. ಇಲ್ಲೂ ಆಗಿರುವುದು ಕೂಡ ಅದೇ. ಮದುವೆ ಮನೆಯಲ್ಲಿ ಮಾಡಿದ ಖಾದ್ಯದಲ್ಲಿ ಪನೀರ್ ಇಲ್ಲವೆನ್ನುವ ಕಾರಣಕ್ಕೆ ಅತಿಥಿಗಳು ಪರಸ್ಪರ ಹೊಡೆದಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ವಿಡಿಯೊದಲ್ಲಿ ವ್ಯಕ್ತಿಗಳು ಪರಸ್ಪರ ಕುರ್ಚಿ, ಪ್ಲೇಟ್‌ಗಳನ್ನು ಎಸೆಯುವುದು ಕಂಡು ಬರುತ್ತದೆ. ಮದುವೆ ಮನೆ ಎನ್ನುವುದನ್ನು ಮರೆತು ಪರಸ್ಪರ ಜಗಳದಲ್ಲಿ ತೊಡಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಮದುವೆ ಸಮಯದಲ್ಲಿ ಬಡಿಸಿದ ‘ಮಾತರ್ ಪನೀರ್’ನಲ್ಲಿ ಪನೀರ್ ತುಂಡುಗಳು ಕಡಿಮೆ ಇವೆ ಎನ್ನುವ ಕಾರಣಕ್ಕೆ ಮದುವೆ ಮನೆ ರಣಾಂಗಣವಾಗಿ ಬದಲಾಗಿದೆ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.
Kalesh b/w groom side and bride side people's during marriage over no pieces of paneer inside matar paneer
— Ghar Ke Kalesh (@gharkekalesh) December 20, 2023
pic.twitter.com/qY5sXRgQA4
ನೆಟ್ಟಿಗರು ಏನಂದ್ರು?
ವಿಡಿಯೊವನ್ನು ಈಗಾಗಲೇ ಸಾವಿರಾರು ಮಂದಿ ನೋಡಿದ್ದಾರೆ. ಸಹಜವಾಗಿಯೇ ನೆಟ್ಟಿಗರು ತಮಾಷೆಯ ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. “ಮೂರನೇ ಮಹಾಯುದ್ಧವು ಪನೀರ್‌ಗಾಗಿ ನಡೆಯುತ್ತದೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ʼʼಪನೀರ್ ಇಲ್ಲದಿದ್ದರೆ ಮದುವೆ ಇಲ್ಲʼʼ ಎಂದು ಅಭಿಪ್ರಾಯಪಟ್ಟಿದ್ದಾರೆ. ʼʼಬಿಹಾರಿಗಳಿಂದ ಇದಕ್ಕಿಂತ ಹೆಚ್ಚಿನದ್ದು ನಿರೀಕ್ಷಿಸಲು ಸಾಧ್ಯವೇ?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ʼʼಉತ್ತಮ ಕಾರಣಕ್ಕೆ ಗಲಾಟೆ ನಡೆದಿದೆʼʼ ಎಂದು ಮಗದೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಇದು ಉತ್ತರ ಪ್ರದೇಶದಲ್ಲಿ ನಡೆದಿರಬೇಕುʼʼ ಎನ್ನುವ ಊಹೆ ಮತ್ತೊಬ್ಬರದ್ದು. ʼʼಇವರು ವಧು-ವರರನ್ನು ಆಶೀರ್ವದಿಸಲು ಬಂದಿದ್ದಾರೆಯೇ ಅಥವಾ ಖಾದ್ಯ ಸೇವಿಸಲು ಬಂದಿದ್ದಾರೆಯೇ?ʼʼ ಎನ್ನುವ ಗೊಂದಲ ಮತ್ತೆ ಕೆಲವರದ್ದು. ʼʼಇದೇ ಕಾರಣಕ್ಕೆ ನಾನು ಮಾಂಸಹಾರಿಯಾಗಿದ್ದುʼʼ ಎಂದಿದ್ದಾರೆ ನೆಟ್ಟಿಗರೊಬ್ಬರು. ಒಟ್ಟಿನಲ್ಲಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದೆ. ಮದುವೆ ಮನೆಯ ಸಂಭ್ರಮವನ್ನು ಹಾಳು ಮಾಡುವ ಇಂತಹ ಪ್ರವೃತ್ತಿಗೆ ಬ್ರೇಕ್ ಹಾಕಲೇ ಬೇಕು ಎಂದು ಹಲವರು ಧ್ವನಿ ಎತ್ತಿದ್ದಾರೆ. ಮದುವೆಯಲ್ಲಿ ನಡೆಯುವ ಇಂತಹ ಘಟನೆ ಮನೆಯವರಿಗೆ ಯಾವ ರೀತಿಯ ಘಾಸಿ ಮಾಡುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ವಿವೇಚನೆಯಿಂದ ವರ್ತಿಸಿ ಎಂದು ಕೆಲವರು ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ: Viral Video: ಒಳಗೆ ಸೇರಿದರೆ ಗುಂಡು, ಬೆಕ್ಕೂ ಆಗುವುದು ಗಂಡು!
ಸಿಹಿತಿಂಡಿಗಳ ಕೊರತೆಯಿಂದ ಕೊಲೆ!
ನವೆಂಬರ್ 19ರಂದು ಉತ್ತರ ಪ್ರದೇಶದ ಆಗ್ರಾದ ಮದುವೆ ಮನೆಯೊಂದರಲ್ಲಿ ರಸಗುಲ್ಲಾ ಕಡಿಮೆಯಾಗಿದೆ ಎನ್ನುವ ವಿಚಾರಕ್ಕೆ ನಡೆದ ಗಲಾಟೆಯಿಂದ ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿತ್ತು. ಬ್ರಿಜ್ಭಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬರು ರಸಗುಲ್ಲಾ ಕೊರತೆ ಬಗ್ಗೆ ಕಮೆಂಟ್ ಮಾಡಿದ್ದರು. ಇದರಿಂದ ಜಗಳ ಆರಂಭವಾಗಿತ್ತು. ಅಲ್ಲದೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಎತ್ಮಾದ್‌ಪುರದಲ್ಲಿ ನಡೆದ ಮದುವೆಯೊಂದರಲ್ಲಿ ಸಿಹಿತಿಂಡಿಗಳ ಕೊರತೆ ಬಗ್ಗೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ