ಬಾಯಿ ಮುಚ್ಚಿ ಕೂತವ ಎಂದೂ ಮಾರಾಟ ಮಾಡುವ ಕೆಲಸಕ್ಕೆ ಲಾಯಕ್ಕಿಲ್ಲ ಎಂಬ ಮಾತಿದೆ. ಅದು ಸತ್ಯ ಕೂಡಾ. ಓದಿ ವಿದ್ಯಾವಂತನಲ್ಲದಿದ್ದರೂ ಗ್ರಾಹಕರನ್ನು ತನ್ನತ್ತ ಸೆಳೆಯಲು ಮಾರಾಟದ ತಂತ್ರಗಳು ಗೊತ್ತಿದ್ದರೆ ಸಾಕು, ಎಂಥ ಜಾಗದಲ್ಲಿದ್ದರೂ ಆತ/ಕೆ ಹೊಟ್ಟೆ ಹೊರೆದುಕೊಳ್ಳುವುದಂತೂ ಸತ್ಯವೇ. ಬೆಡ್‌ಶೀಟು, ಡ್ರೆಸ್ ಮೆಟೀರಿಯಲ್, ಕತ್ತರಿ ಹರಿತ ಮಾಡುವವರು,ಥವಾ ಇನ್ಯಾವುದೋ ಮ್ಯಾಜಿಕ್ ಉಪಕರಣಗಳನ್ನು ಹಿಡಿದು ಮನೆಮನೆಗೆ ಮಾರಾಟ ಮಾಡಲು ಬರುವವರು ಮಾತಿನಿಂದ ಎದುರಿಗಿರುವ ಗ್ರಾಹಕರನ್ನು ಸೆಳೆಯಲು ಗೊತ್ತಿರಬೇಕು. ಇಲ್ಲದಿದ್ದರೆ ಬರಿಗೈಯೇ ಗತಿಯಾದೀತು!
ಪಶ್ಚಿಮ ಬಂಗಾಳದ ಹಳ್ಳಿ ಮೂಲೆಯೊಂದರಲ್ಲಿ ನೆಲಗಡಲೆ ಮಾರುವಾತನ ʻಕಚ್ಚಾ ಬಾದಾಮ್ʼ ಹಾಡು ಎಲ್ಲೆಡೆ ಸಂಚಲನ ಮೂಡಿಸಿ ಮತ್ತೊಂದು ಹಾಡಿನ ಹುಟ್ಟಿಗೆ ಪ್ರೇರಣೆ ನೀಡಿದಂತೆ ಇದೀಗ ಭೋಪಾಲ್‌ನ ಕುರುಕಲು ಮಾರಾಟಗಾರನ ಹಾಡೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿ ಎಲ್ಲರನ್ನು ಸೆಳೆಯುತ್ತಿದೆ.
ಭೋಪಾಲದ ಬೀದಿಗಳಲ್ಲಿ ಮನೆಮನೆಗೆ ಬಗೆಬಗೆಯ ಖಾರಾ ಸೇವ್, ಮಿಕ್ಸ್ಚರುಗಳನ್ನು ತನ್ನ ಹಳೇ ಸ್ಕೂಟರಿನಲ್ಲಿ ಏರಿ ಕೊಂಡೊಯ್ದು ಮಾರಾಟ ಮಾಡುವ ಹಿರಿಯ ವ್ಯಾಪಾರಿಯೊಬ್ಬರು ತಮ್ಮದೇ ಹಾಡಿನ ಮೂಲಕ ಜನರು ಮನೆ ಬಾಗಿಲು ತೆರೆದು ಹೊರಬಂದು ಇಣುಕುವಂತೆ ಮಾಡಿದ್ದಾರೆ. ಇಣುಕಿದ ಮೇಲೆ ಆತನ ಹಾಡಿಗೆ ಮನಸೋ ಇಚ್ಛೆ ನಕ್ಕು ಒಮ್ಮೆ ಟ್ರೈ ನೋಡೋಣ ಎಂದು ಈತನ ಬಳಿ ಕೊಂಡುಕೊಂಡಿದ್ದಾರೆ ಕೂಡಾ. ಒಮ್ಮೆ ಕೊಂಡವರು ಇಷ್ಟವಾದರೆ ಮತ್ತೆ ಕೊಳ್ಳುತ್ತಾರೆ ಎಂಬುದು ನಿಜವೇ ಆದರೂ, ಮೊದಲು ಈತನ ಬಳಿ ಕೊಳ್ಳಬೇಕು ಎಂದು ಅನಿಸುವಂತೆ ಮಾಡುವುದೇ ವ್ಯಾಪಾರಿಯ ತಾಕತ್ತು. ಆ ನಿಟ್ಟಿನಲ್ಲಂತೂ ಈ ವ್ಯಾಪಾರಿಗೆ ೧೦೦ಕ್ಕೆ ೧೦೦ ಅಂಕ.
ಸುಮಾರು ೪೪ ಸೆಕೆಂಡುಗಳ ಈ ವಿಡಿಯೋ ತುಣುಕೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ತನ್ನ ಹಳೆಯ ಬಜಾಜ್ ಸ್ಕೂಟರಿನಲ್ಲಿ ಕೂತು ಮನೆಯೊಂದರ ಮುಂದೆ ಹಾಡು ಹಾಡುತ್ತಾ ಗ್ರಾಹಕರನ್ನು ಈತ ಸೆಳೆಯುತ್ತಾನೆ. ಈತನ ಹಾಡು, ʻನಮ್ ನಮ್ ನಮ್ ನಮ್ ನಮ್ಕೀನ್ ಕೇ ಪ್ಯಾಕೆಟ್ ಔರ್ ತೀ ತೀ ತೀ ತೀ ತೀಸ್ ರುಪಯೀ ಕೇʼ ಎಂದು ರಾಗವಾಗಿ ಪ್ರಾಸಬದ್ಧವಾಗಿ ಗಟ್ಟಿಯಾಗಿ ಹಾಡುವ ಈತನ ಹಾಡನ್ನು ಎಂಥವರಿಗಾದರೂ ಒಮ್ಮೆ ತಿರುಗಿ ನೋಡಬೇಕು ಎಂದು ಅನಿಸದೆ ಇರದು.
ಇದನ್ನೂ ಓದಿ | Viral Video | ಶಾರುಖ್ ಅಭಿನಯದ ಸಿನಿಮಾ ಹಾಡು ಹಾಡಿದ ಅಮೆರಿಕ ನೌಕಾಪಡೆ ಅಧಿಕಾರಿಗಳು, ನೀವೂ ಕೇಳಿ!
೪೪ ಸೆಕೆಂಡುಗಳ ಈ ವಿಡಿಯೋ ಟ್ವಿಟರಿನಲ್ಲಿ ಒಬ್ಬರು, ʻಭೋಪಾಲಿ ನಮ್ಕೀನ್ ವಾಲಾ! ಭೋಪಾಲಿನಲ್ಲಿ ಪ್ರತಿಭೆಗೆ ಕೊರತೆಯೇ ಇಲ್ಲʼ ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದ್ದಾರೆ. ಇದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಾವಿರಾರು ಮಂದಿ ಈತನ ಹಾಡನ್ನು, ರಾಗವನ್ನೂ ಮೆಚ್ಚಿಕೊಂಡಿದ್ದಾರೆ.
ಈತನ ಮಾರಾಟದ ಕ್ರಿಯೇಟಿವ್ ತಂತ್ರಕ್ಕೆ ಫಿದಾ ಆಗಿರುವ ಕೆಲವರು ಈತನಿಗೆ ʻಸೇಲ್ಸ್‌ಮ್ಯಾನ್ ಆಫ್ ದಿ ಯೀಯರ್ʼ ಬಿರುದುಗಳನ್ನೂ ನೀಡಿದ್ದು, ಮಾರಾಟ ಹೇಗೆ ಮಾಡಬೇಕೆಂದು ಈತನ ಬಳಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದಿದ್ದಾರೆ. ಹಲವರು ಈತನ ಈ ಹಾಡು ಕೂಡಾ ಖಂಡಿತವಾಗಿಯೂ ಕಚಾ ಬಾದಾಮ್ ಹಾಡಿನ ಹಾಗೆ ಸಂಗೀತ ನಿರ್ದೇಶಕರೊಬ್ಬರ ಕೈಗೆ ಸಿಕ್ಕು ಆಲ್ಬಮ್ ರೂಪದಲ್ಲಿ ಹೊರಬರಲು ಹೇಳಿ ಮಾಡಿಸಿದಂತಿದೆ ಎಂದಿದ್ದಾರೆ ಕೂಡಾ. ಸಂಗೀತ ನಿರ್ದೇಶಕ ಯಶ್‌ರಾಜ್ ಮುಖಾಟೆ ಕೈಗೇನಾದರೂ ಈ ಹಾಡು ಸಿಕ್ಕರೆ ಖಂಡಿತವಾಗಿಯೂ ಕಚ್ಚಾ ಬಾದಾಮ್ ಹಾಡಿನಂತೆಯೇ ಇದರ ರೀಮಿಕ್ಸ್ ವರ್ಷನ್ ಹೊರಬಂದೀತು, ಅವರ ಕೈಗೆ ಆದಷ್ಟು ಬೇಗ ಸಿಗಲಿ ಎಂದು ಹಲವರು ಆಶಿಸಿದ್ದಾರೆ ಕೂಡಾ. ಬರೋಬ್ಬರಿ ಶುಲ್ಕಗಳನ್ನು ಪಡೆಯುವ ದೇಶದ ಬ್ಯುಸಿನೆಸ್ ಸ್ಕೂಲುಗಳಲ್ಲೇನಾದರೂ ಇಂಥ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಸಲಿಕ್ಕಿಲ್ಲ ಎಂದೂ ಈತನ ಮಾರ್ಕೆಟಿಂಗ್ ತಂತ್ರಕ್ಕೆ ಬಹುಪರಾಕ್ ಕೂಗಿದ್ದಾರೆ.
ಇದನ್ನೂ ಓದಿ | Fan Fever: ಕಚ್ಚಾ ಬದಾಮ್ ಹಾಡಿದ ಭುವನ್‌ಗೆ ಅಭಿಮಾನಿಯಿಂದ ಐಫೋನ್ ಉಡುಗೊರೆ