Site icon Vistara News

Viral Video: ಎಲ್ಲೇ ಇಲ್ಲದ ವಿಕೃತಿ; ಈ ಯುವಕರ ಕೃತ್ಯಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿರೋದ್ಯಾಕೆ?

viral news

viral news

ಜೈಪುರ: ಪ್ರಾಣಿಗಳಿಗೆ ಹಿಂಸೆ ನೀಡಿ ಖುಷಿ ಪಡುವ ವಿಕೃತ ಮನೋಭಾವ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಕು ಪ್ರಾಣಿಗಳಿಗೆ ಮದ್ಯ ಕುಡಿಸಿ ಅದರ ವಿಡಿಯೊ ಮಾಡುವುದು, ಪ್ರಾಣಿಗಳ ಮೇಲೆ ಪಟಾಕಿ ಎಸೆಯುವುದು, ಹಗ್ಗದಲ್ಲಿ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗುವುದು… ಹೀಗೆ ನಾನಾ ರೀತಿಯ ಹಿಂಸೆ ನೀಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ವಿಕೃತ ಆನಂದ ಪಡುವವರು ಅನೇಕರಿದ್ದಾರೆ. ಇದೀಗ ಅಂತಹದ್ದೇ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಚಿಕ್ಕ ನಾಯಿಮರಿಗೆ ಮದ್ಯ ಕುಡಿಸಿ ಯುವಕರ ಗುಂಪೊಂದು ವಿಕೃತಿ ಮೆರೆದಿದೆ. ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಈ ವಿಡಿಯೊ ವೈರಲ್‌ ಆಗಿದೆ (Viral Video).

ವಿಡಿಯೊದಲ್ಲೇನಿದೆ?

ಪ್ಲಾಸ್ಟಿಕ್ ಕಪ್‌ನಲ್ಲಿ ಮದ್ಯ ತುಂಬಿ ಯುವಕರ ಗುಂಪು ಅದನ್ನು ನಾಯಿ ಮರಿಯ ಮುಂದಿರಿಸಿ ಕುಡಿಯುವಂತೆ ಮಾಡುತ್ತಾರೆ. ಬಳಿಕ ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾರೆ. ಜತೆಗೆ ಕ್ಯಾಂಪ್‌ ಫೈರ್‌ ಹಾಕಿ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊವನ್ನು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅನಿಮಲ್ ವೆಲ್‌ಫೇರ್‌ ಬೋರ್ಡ್ ಆಫ್ ಇಂಡಿಯಾದ (Animal Welfare Board of India) ಪ್ರತಿನಿಧಿ ಪೂನಂ ಬಾಗ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾನೂನು ಜಾರಿ ಅಧಿಕಾರಿಗಳು, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ ಮತ್ತು ಇತರ ಪ್ರಮುಖ ನಾಯಕರನ್ನು ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ʼʼಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಡಿತ ಹೆಚ್ಚಾಗಲು ಇದೂ ಒಂದು ಕಾರಣ. ಕೆಲವರು ಶ್ವಾನಗಳಿಗೆ ಈ ರೀತಿ ಮದ್ಯ ಕುಡಿಸಿ ವಿಕೃತಿ ಮೆರೆಯುತ್ತಾರೆ. ಇಂತಹವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಇಂತಹವರಿಂದಲೇ ನಮ್ಮ ಜತೆಗೆ ಸುತ್ತಮುತ್ತಲಿನ ಪ್ರಾಣಿಗಳ ಜೀವನ ದುಸ್ತರವಾಗುತ್ತಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ ಅವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಯುವಕನೊಬ್ಬನ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಶೇರ್‌ ಮಾಡಿಕೊಂಡಿದ್ದಾರೆ. ʼʼಈ ನಾಯಿಮರಿ ತುಂಬಾ ಚಿಕ್ಕದಾಗಿದೆ. ಹೀಗಾಗಿ ಅದರ ಜೀವಕ್ಕೆ ಅಪಾಯವಿದೆ. ದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿʼʼ ಎಂದು ಆಗ್ರಹಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಪೊಲೀಸ್ ಹೆಲ್ಪ್‌ ಡೆಸ್ಕ್‌ ಎಕ್ಸ್‌ನಲ್ಲಿ ಸವಾಯಿ ಮಾಧೋಪುರ ಪೊಲೀಸ್ ಠಾಣೆಯ ಖಾತೆಯನ್ನು ಟ್ಯಾಗ್ ಮಾಡಿದೆ. ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಯೋಜಿತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರತಿಕ್ರಿಯಿಸಿದೆ. ಪೆಟ್ ಪಾಯಿಸನ್ ಹೆಲ್ಪ್‌ಲೈನ್‌ ಪ್ರಕಾರ, ʼಆಲ್ಕೋಹಾಲ್ ಸೇವನೆಯು ನಾಯಿಗಳಿಗೆ ಹಾನಿಕಾರಕ. ಇದು ಸಾವಿಗೂ ಕಾರಣವಾಗಬಹುದು. ಆಲ್ಕೋಹಾಲ್ ಸೇವಿಸಿದ ಶ್ವಾನಗಳಲ್ಲಿ ವಾಂತಿ, ಹೈಪರ್ಸಲೈವೇಶನ್, ನಡುಕ, ಸೆಳೆತ, ಉಸಿರಾಟದ ತೊಂದರೆಗಳು ಮತ್ತು ನಿರ್ಜಲೀಕರಣ ಮುಂತಾದ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದುʼ ಎಂದು ಎಚ್ಚರಿಸಿಕೆ ನೀಡಿದೆ.

ಸದ್ಯ ನೆಟ್ಟಿಗರು ಯುವಕರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಪ್ರವೃತ್ತಿಗೆ ನಿಯಂತ್ರಣ ಹೇರಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: Viral Video: ಒಳಗೆ ಸೇರಿದರೆ ಗುಂಡು, ಬೆಕ್ಕೂ ಆಗುವುದು ಗಂಡು!

Exit mobile version