Site icon Vistara News

Viral Video : ಅಳುತ್ತಲೇ ವರದಿ ಮಾಡಿದ ಪತ್ರಕರ್ತೆ; ಕ್ಷಮಿಸಿ ಬಿಡಿ ಎಂದು ಕೇಳಿಕೊಂಡ ವಿಡಿಯೊ ವೈರಲ್

#image_title

ಬೆಂಗಳೂರು: ಪತ್ರಕರ್ತರ ಬದುಕು ಸುಲಭದ್ದಲ್ಲ. ಮನಕಲಕುವ ಸ್ಥಳಗಳಿಗೂ ಹೋಗಿ ಧೈರ್ಯವಾಗಿ ವರದಿ ಮಾಡಬೇಕಾದ ಪರಿಸ್ಥಿತಿ ಅವರದ್ದು. ಫ್ಲೋರಿಡಾದಲ್ಲಿ ಪತ್ರಕರ್ತರ ಮೇಲೆ ನಡೆದ ಗುಂಡಿನ ದಾಳಿ ಅದೆಷ್ಟೋ ಪತ್ರಕರ್ತರು ಕಣ್ಣೀರಿಡುವಂತೆ ಮಾಡಿದೆ. ಸ್ಥಳದಲ್ಲಿದ್ದ ಪತ್ರಕರ್ತೆಯೊಬ್ಬರು ಅಳುತ್ತಾ, ಕಣ್ಣೀರು ಒರೆಸಿಕೊಂಡು ವರದಿ ಮಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral News : ಬಂಗಾಳದ ಕಬಾಬ್ ರೆಸಿಪಿ ಕಲಿತಿದ್ದ ಬ್ರಿಟಿಷ್ ದಂಡ ನಾಯಕ; ಇಲ್ಲಿದೆ 1784ರ ಡೈರಿಯ ಪುಟ!
ಇತ್ತೀಚೆಗೆ ಫ್ಲೋರಿಡಾದಲ್ಲಿ ಪತ್ರಕರ್ತರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದರಲ್ಲಿ ಸ್ಪೆಕ್ಟ್ರಮ್ ನ್ಯೂಸ್ 13 ವಾಹಿನಿಯ 24 ವರ್ಷದ ವರದಿಗಾರ ಡ್ಯಾಲನ್ ಲಯಾನ್ಸ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಾಗೆಯೇ ಛಾಯಾಗ್ರಾಹಕ ಜೆಸ್ಸೆ ವಾಲ್ಡೆನ್ ಅವರಿಗೂ ಗುಂಡು ತಗುಲಿದ್ದು, ಗಂಭೀರ ಗಾಯಾಳುವಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಬಗ್ಗೆ ವರದಿ ಮಾಡಲು ಹೋಗಿದ್ದ ಪತ್ರಕರ್ತೆಯೊಬ್ಬರು ಕ್ಯಾಮೆರಾ ಮುಂದೆಯೇ ಕಣ್ಣೀರಿಟ್ಟಿದ್ದಾರೆ.

“ಕ್ಷಮಿಸಿ, ಇದು ವರದಿ ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ಕ್ಯಾಮೆರಾವನ್ನು ಆಕಡೆ ತಿರುಗಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಆ ವರದಿಗಾರ ಹಲವಾರು ಜನರಿಗೆ ಗೊತ್ತಿರುವಂತವರು. ಈಗ ನಾವು ಮಾಧ್ಯಮದವರೆಲ್ಲರೂ ಒಟ್ಟಾಗಬೇಕಿದೆ” ಎಂದು ಆಕೆ ಹೇಳಿದ್ದಾರೆ. ಈ ಸಮಯದಲ್ಲಿ ಅವರ ಕಣ್ಣಲ್ಲಿ ನೀರಿಳಿಯುತ್ತಿದ್ದು, ಅದನ್ನು ಒರೆಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.


ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಹಲವಾರು ಮಂದಿ ಆ ಪತ್ರಕರ್ತೆಗೆ ಧೈರ್ಯ ತುಂಬುವ ಕಾಮೆಂಟ್ ಮಾಡಲಾರಂಭಿಸಿದ್ದಾರೆ.

Exit mobile version