Site icon Vistara News

Viral Video: ರಷ್ಯಾ ಯೂಟ್ಯೂಬರ್‌ಗೆ ದೆಹಲಿಯಲ್ಲಿ ಕಿರುಕುಳ; ಕ್ಷಮೆ ಯಾಚಿಸಿದ ನೆಟ್ಟಿಗರು

delhi

delhi

ನವ ದೆಹಲಿ: ʼಅತಿಥಿ ದೇವೋಭವʼ ಎಂದು ಪರಿಗಣಿಸುವ ಸಂಸ್ಕೃತಿ ನಮ್ಮದು. ಅಂದರೆ ಭಾರತೀಯರ ಪಾಲಿಗೆ ಅತಿಥಿಗಳು ದೇವರ ಸಮಾನ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತಕ್ಕೆ ಆಮಿಸುವ ವಿದೇಶಿ ಪ್ರವಾಸಿಗರಿಗೆ ಕಿರುಕುಳ ನೀಡುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಸದ್ಯ ಇಂತಹದ್ದೇ ಇನ್ನೊಂದು ಘಟನೆ ನವ ದೆಹಲಿಯಲ್ಲಿ ಇತ್ತೀಚೆಗೆ ಜರುಗಿದೆ. ಈ ಬಾರಿ ರಷ್ಯಾದ ಮಹಿಳಾ ಪ್ರವಾಸಿಗರೊಬ್ಬರು ವ್ಲಾಗ್‌ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬ ತೊಂದರೆ ನೀಡಿದ್ದಾನೆ. ಸದ್ಯ ಈ ದೃಶ್ಯ ಇದೀಗ ವೈರಲ್‌ (Viral Video) ಆಗಿದೆ ಮತ್ತು ಆ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ʼಕೊಕೊ ಇನ್‌ ಇಂಡಿಯಾʼ (Koko in India) ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್‌ ದೆಹಲಿಯ ಪ್ರಸಿದ್ಧ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ವಿಡಿಯೊ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ವ್ಲಾಗ್‌ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಬಳಿಗೆ ಬರುತ್ತಾನೆ. ಬಳಿಕ ತನ್ನೊಂದಿಗೆ ಗೆಳೆತನ ಬೆಳೆಸುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆಕೆ ನಿರಾಕರಿಸುತ್ತಾಳೆ. ಆದರೂ ಆಕೆಯನ್ನು ಆತ ಹಿಂಬಾಲಿಸುತ್ತಾನೆ. ಇದು ಆಕೆಗೆ ತೀವ್ರ ಮುಜುಗರ ತರಿಸುತ್ತದೆ. ಇದು ವಿಡಿಯೊದಲ್ಲಿ ದಾಖಲಾಗಿದೆ.

ಗೆಳೆತನ ಬೆಳೆಸಲು ಪಟ್ಟು ಹಿಡಿದ ವ್ಯಕ್ತಿ

ಮಾರುಕಟ್ಟೆಗೆ ಆಗಮಿಸಿದ ಕೊಕೊ ಅಲ್ಲಿಂದ ಲೈವ್‌ ವಿಡಿಯೊ ಆರಂಭಿಸುತ್ತಾಳೆ. ಆಗ ಆ ಯುವಕ “ನೀವು ನನ್ನ ಸ್ನೇಹಿತನಾಗಬಹುದೇ?” ಎಂದು ಕೇಳುತ್ತಾನೆ. ಜತೆಗೆ ರಷ್ಯಾದ ಹುಡುಗಿಯೊಂದಿಗೆ ಸ್ನೇಹ ಬೆಳೆಸುವುದು ತನ್ನ ಬಹು ದಿನಗಳ ಕನಸು ಎಂದು ಹೇಳುತ್ತಾನೆ. ಬಳಿಕ ಆಕೆಗೆ ಮುಜುಗರವಾಗುವಂತೆ ʼʼನೀವು ತುಂಬಾ ಸೆಕ್ಸಿ. ನನ್ನ ಸ್ನೇಹಿತೆಯಾಗುತ್ತೀರಾ?ʼʼ ಎನ್ನುತ್ತಾನೆ. ಕೊಕೊ ಇದಕ್ಕೆ ʼʼಆದರೆ ನೀನು ನನಗೆ ಅಪರಿಚಿತʼʼ ಎಂದು ನಿರ್ಲಕ್ಷಿಸಲು ಮುಂದಾಗುತ್ತಾಳೆ. ಪಟ್ಟು ಬಿಡದ ಆತ ʼʼನಾವು ಸ್ನೇಹಿತರಾದ ಬಳಿಕ ಒಬ್ಬರನ್ನೊಬ್ಬರು ತಿಳಿದುಕೊಳ್ಳಬಹುದುʼʼ ಎನ್ನುತ್ತಾನೆ. ಇದೆಲ್ಲ ಕೊಕೊ ಮಾಡುತ್ತಿದ್ದ ವಿಡಿಯೊದಲ್ಲಿ ಸೆರೆಯಾಗಿದ್ದು, ಆಕೆಯ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಇದನ್ನೂ ಓದಿ: Viral Video: ದುಡ್ಡಿನ ಗಿಡ ನೆಟ್ಟಿದಿಯಾ ಎಂದವರಿಗೆ ಹೂಂ ಎಂದುಬಿಡಿ; ಯಾವುದಕ್ಕೂ ಈ ವಿಡಿಯೊ ನೋಡಿ

ನೆಟ್ಟಿಗರ ಆಕ್ರೋಶ

ರಷ್ಯಾ ಮಹಿಳೆಗೆ ಕಿರಿಕಿರಿ ಉಂಟುಮಾಡಿದ ಆ ವ್ಯಕ್ತಿಯ ವಿರುದ್ಧ ನೆಟ್ಟಿಗರು ಕೆಂಡ ಕಾರಿದ್ದಾರೆ. ʼʼಓರ್ವ ಭಾರತೀಯನಾಗಿ ನಾನು ಆ ವ್ಯಕ್ತಿಯ ವರ್ತನೆಗೆ ಕ್ಷಮೆ ಯಾಚಿಸುತ್ತೇನೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಭಾರತೀಯನಾಗಿ, ನಾಚಿಕೆ ಇಲ್ಲದ ಆ ಹತಾಶ ವ್ಯಕ್ತಿಗಾಗಿ ನಾನು ವಿಷಾದಿಸುತ್ತೇನೆ. ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳಿದ್ದಾರೆ ಎನ್ನುವುದು ಅವಮಾನದ ಸಂಗತಿ. ನಿಮ್ಮ ಧೈರ್ಯಕ್ಕೆ ಮತ್ತು ನೀವು ಆ ವ್ಯಕ್ತಿಯನ್ನು ನಿರ್ಲಕ್ಷಿಸಿದ ರೀತಿಗೆ ನಾನು ನಮಸ್ಕರಿಸುತ್ತೇನೆʼʼ ಎಂದು ಮತ್ತೊಬ್ಬರು ಕೊಕೊ ಅವರಿಗೆ ಬೆಂಬಲ ಸೂಚಿಸಿದ್ದಾರೆ. ʼʼಅತಿಥಿಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಅದಕ್ಕೆ ವಿರುದ್ಧವಾಗಿ ಈ ವ್ಯಕ್ತಿ ನಡೆದುಕೊಂಡಿದ್ದು, ಆತನಿಗೆ ಧಿಕ್ಕಾರʼʼ ಎಂದು ಮಗದೊಬ್ಬರು ಆಕ್ರೋಶಭರಿತವಾಗಿ ಕಮೆಂಟ್‌ ಮಾಡಿದ್ದಾರೆ. ಮಾತ್ರವಲ್ಲ ಇನ್ನೂ ಅನೇಕರು ಆ ವ್ಯಕ್ತಿಯ ವಿರುದ್ಧ ಹಾರಿ ಹಾಯ್ದಿದ್ದಾರೆ. ಸುಮಾರು 68,000ಕ್ಕೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version