Site icon Vistara News

Rahul Gandhi: ನಾಯಿ ಪ್ಲೇಟ್‌ನಿಂದ ಬಿಸ್ಕೆಟ್‌ ತೆಗೆದು ಕಾಂಗ್ರೆಸ್‌ ಕಾರ್ಯಕರ್ತನಿಗೆ ಕೊಟ್ಟ ರಾಹುಲ್‌ ಗಾಂಧಿ!

rahul gandhi viral video

ಹೊಸದಿಲ್ಲಿ: ಕಾಂಗ್ರೆಸ್‌ ಕಾರ್ಯಕರ್ತರೊಬ್ಬರಿಗೆ ರಾಹುಲ್‌ ಗಾಂಧಿ (Rahul Gandhi) ತಮ್ಮ ಭಾರತ್‌ ಜೋಡೋ ನ್ಯಾಯ ಯಾತ್ರೆಯ (Bharat Jodo Nyay Yatra) ಸಂದರ್ಭದಲ್ಲಿ ಬಿಸ್ಕೆಟ್‌ ನೀಡುತ್ತಿರುವ ವಿಡಿಯೋವನ್ನು ಬಿಜೆಪಿಗರು ಸೋಶಿಯಲ್‌ ಮೀಡಿಯಾದಲ್ಲಿ (Social media) ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral video) ಆಗುತ್ತಿದೆ.

ವಿಡಿಯೋದಲ್ಲಿ, ಮೊದಲು ಪ್ಯಾಕೆಟ್‌ನಿಂದ ತೆಗೆದ ಬಿಸ್ಕತ್ತನ್ನು ರಾಹುಲ್‌ ಗಾಂಧಿ ಅವರು ನಾಯಿಯ ಮುಂದೆ ಹಿಡಿಯುತ್ತಾರೆ. ಆದರೆ ನಾಯಿ ಅದನ್ನು ತೆಗೆದುಕೊಂಡಿಲ್ಲ. ರಾಹುಲ್‌ ಅವರು ಆ ಬಿಸ್ಕೆಟನ್ನು ನಂತರ ಕಾರ್ಯಕರ್ತನಿಗೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೋಮವಾರ ತಡರಾತ್ರಿ ಈ ವೀಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು, ಪಕ್ಷದ ಬೂತ್ ಏಜೆಂಟ್‌ಗಳನ್ನು ನಾಯಿಗಳಿಗೆ ಹೋಲಿಸಿದ್ದರು. ಮತ್ತು ಇಲ್ಲಿ ರಾಹುಲ್ ಗಾಂಧಿ ನಾಯಿಗೆ ಬಿಸ್ಕತ್ ತಿನ್ನಿಸುತ್ತಿದ್ದು, ನಾಯಿ ತಿನ್ನದೇ ಇದ್ದಾಗ ಅದೇ ಬಿಸ್ಕೆಟ್ ಅನ್ನು ತನ್ನ ಕಾರ್ಯಕರ್ತನಿಗೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷರು ಮತ್ತು ಯುವರಾಜರು ತಮ್ಮ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಂಡರೆ, ಅಂತಹ ಪಕ್ಷ ನಾಶವಾಗುವುದು ಸಹಜ.”

ಈ ವಿಡಿಯೋ ಶೇರ್‌ ಮಾಡಿಕೊಂಡಿರುವ ಬಿಜೆಪಿಯ ಮತ್ತೊಬ್ಬ ನಾಯಕಿ ಪಲ್ಲವಿ ಸಿಟಿ, ರಾಹುಲ್‌ ಅವರನ್ನು “ನಾಚಿಕೆಯಿಲ್ಲದ ವ್ಯಕ್ತಿ” ಎಂದಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗಿನ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು “ರಾಹುಲ್ ಗಾಂಧಿಯವರ ಮುದ್ದಿನ ನಾಯಿಯಾದ ಪಿಡಿಯ ಅದೇ ಪ್ಲೇಟ್‌ನಿಂದ ಬಿಸ್ಕೆಟ್‌ಗಳನ್ನು ತಿನ್ನುವಂತೆ ಮಾಡಿದ” ದಿನಗಳನ್ನು ನೆನಪಿಸಿಕೊಂಡಿದ್ದಾರೆ. “ಮತ್ತು ಈಗ ಶೆಹಜಾದಾ (ರಾಜಕುಮಾರ) ಪಕ್ಷದ ಕಾರ್ಯಕರ್ತನಿಗೆ ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡುತ್ತಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ?” ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ, “ಪಲ್ಲವಿ ಜೀ, ರಾಹುಲ್ ಗಾಂಧಿ ಮಾತ್ರವಲ್ಲ ಅವರ ಇಡೀ ಕುಟುಂಬ ಕೂಡ ಆ ಬಿಸ್ಕೆಟ್ ಅನ್ನು ನನಗೆ ತಿನ್ನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ನಾನು ಅದನ್ನು ತಿನ್ನಲು ನಿರಾಕರಿಸಿದೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ” ಎಂದಿದ್ದಾರೆ.

ಬಿಜೆಪಿ ನಾಯಕ ಹರೀಶ್ ಖುರಾನಾ, “ಆ ಹಳೆಯ ಪಕ್ಷದಲ್ಲಿ ಅದ್ಭುತ ಸಂಸ್ಕೃತಿ ಇದೆ. ಇದೇ ನಿಜವಾದ ಕಾಂಗ್ರೆಸ್” ಎಂದಿದ್ದಾರೆ.

ಇದನ್ನೂ ಓದಿ: Narendra Modi : ರಾಹುಲ್‌ ಗಾಂಧಿಗೆ ಲೋಕಸಭೆಯಲ್ಲಿ ಮೋದಿ ಕೊಟ್ಟ ಟಾಂಗ್‌ ಏನೇನು ನೋಡಿ!

Exit mobile version