Site icon Vistara News

Viral video: ಅಮೆಜಾನ್‌ ಕಂಪನಿಯ ಪಾರ್ಸೆಲ್‌ನಲ್ಲಿ ಬಂತು ಜೀವಂತ ನಾಗರ! ಗೇಮಿಂಗ್‌ ಬಾಕ್ಸ್‌ ಜೊತೆ ಹಾವು ಫ್ರೀ!

viral video snake in amazon box

ಬೆಂಗಳೂರು: ಅಮೆಜಾನ್‌ ಇ-ಕಾಮರ್ಸ್‌ (Amazon E commerce) ಮಳಿಗೆಯ ಮೂಲಕ ಗೇಮಿಂಗ್‌ ಬಾಕ್ಸ್‌ (gaming box) ತರಿಸಿದ ಯುವತಿ ಪಾರ್ಸೆಲ್‌ (parcel) ಓಪನ್‌ ಮಾಡುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ಕಾರಣ, ಅದರ ಒಳಗೆ ವಿಲವಿಲ ಎನ್ನುತ್ತಿದ್ದ ಜೀವಂತ ನಾಗರ ಹಾವು (snake) ! ಇದನ್ನು ನೋಡಿ ಬೆಚ್ಚಿಬಿದ್ದ ಯುವತಿ, ವಿಡಿಯೋ ಮಾಡಿ Xನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್‌ (viral video) ಆಗುತ್ತಿದೆ.

ಬೆಂಗಳೂರಿನ ಸರ್ಜಾಪುರದಲ್ಲಿ ವಾಸ ಮಾಡುವ ಯುವತಿ, ಗೇಮಿಂಗ್ ಆಡಲು ಬಳಕೆ ಮಾಡುವ X BOX ಕಂಟ್ರೋಲರ್ ಅನ್ನು ಎರಡು ದಿನದ ಹಿಂದೆ ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಆರ್ಡರ್ ತಲುಪಿದ ಕೆಲ ನಿಮಿಷಗಳಲ್ಲಿ ಬಾಕ್ಸ್ ಓಪನ್ ಮಾಡಿದ್ದರು. ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಹಾವು ಭುಸ್‌ ಎಂದು ಹೊರಗೆ ತಲೆ ಹಾಕಿತ್ತು!

ಬಾಕ್ಸ್ ಓಪನ್ ಮಾಡುತ್ತಿದ್ದ ಹಾಗೇ ತಲೆ ಎತ್ತಿದ ಹಾವನ್ನು ಕಂಡು ಯುವತಿ ಬೆಚ್ಚಿ ಬಿದ್ದಿದ್ದಾರೆ. ಪುಣ್ಯವಶಾತ್‌ ಬಾಕ್ಸ್‌ ಒಳಗೆ ಕೈ ಹಾಕದೆ ಇದ್ದುದರಿಂದ ಹಾವು ಕಡಿತಕ್ಕೊಳಗಾಗುವ ಅಪಾಯದಿಂದ ಯುವತಿ ಪಾರಾಗಿದ್ದಾಳೆ. ಇದು ವಿಷಪೂರಿತ ನಾಗರಹಾವಾಗಿದೆ. ಹಾವು ಬಾಕ್ಸ್‌ನಿಂದ ಹೊರ ಬರಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕಾರಣವೆಂದರೆ ಪಾರ್ಸೆಲ್‌ನ್ನು ಪ್ಯಾಕ್‌ ಮಾಡಿದ್ದ ಗಟ್ಟಿ ಗಮ್‌ಟೇಪ್‌ಗೆ ಅದರ ಶರೀರ ಅಂಟಿಕೊಂಡಿತ್ತು. ಆದರೆ ರಾತ್ರಿ ಈ ಘಟನೆ ನಡೆದಿರುವುದರಿಂದ ಕುಟುಂಬ ಇಡೀ ರಾತ್ರಿ ಭಯದಲ್ಲಿಯೇ ಕಳೆದಿದೆ.

ಹಾವು ಕಡಿತದಿಂದ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಯಾರು ಹೊಣೆ? ಇದು ಅಮೆಜಾನ್ ಕಂಪನಿಯ ನಿರ್ಲಕ್ಷ್ಯ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದಾರೆ. ಕೂಡಲೇ ಈ ವಿಚಾರವನ್ನು ಅಮೆಜಾನ್‌ ಕಂಪನಿಗೆ ಮಹಿಳೆ ತಿಳಿಸಿದ್ದಾರೆ. ಅಮೆಜಾನ್‌ ಕಂಪನಿ ಕ್ಷಮೆ ಯಾಚಿಸಿದ್ದು, ಬಾಕ್ಸ್‌ನ ಸಂಪೂರ್ಣ ಹಣ ಮರು ಪಾವತಿ ಮಾಡಿದೆ. ಆದರೆ ಈ ದುಬಾರಿ ನಿರ್ಲಕ್ಷ್ಯದ ವಿರುದ್ಧ ಕಾನೂನು ಸಮರ ಸಾರಲು ಯುವತಿ ತಯಾರಿ ನಡೆಸಿದ್ದಾರೆ.

“ಕಂಪನಿ ಸಂಪೂರ್ಣ ಮರುಪಾವತಿಯನ್ನು ಮಾಡಿದ್ದಾರೆ. ಅದನ್ನು ಅವರು ಹೇಗಾದರೂ ಮಾಡಲೇಬೇಕು. ಆದರೆ ಈ ಕುರಿತು ನಾವು ಯಾವುದೇ ಪರಿಹಾರ ನೀಡಿಲ್ಲ ಅಥವಾ ಅಧಿಕೃತ ಕ್ಷಮೆಯಾಚನೆಯನ್ನು ಅವರು ಮಾಡಿಲ್ಲ. ʼನಾವು ನಿಮಗೆ ಉಂಟಾದ ಅನನುಕೂಲತೆಗಾಗಿ ವಿಷಾದಿಸುತ್ತೇವೆʼ ಎಂಬ ಮಾತನ್ನು ನಾನು ನಂಬುವುದಿಲ್ಲ. ಇದು ಎಲ್ಲ ರೀತಿಯಿಂದಲೂ ಅಮೆಜಾನ್ ಗ್ರಾಹಕರಾಗಿ ನಮಗೆ ಮತ್ತು ಅವರ ವಿತರಣಾ ಪಾಲುದಾರರಿಗೆ ಸುರಕ್ಷತೆಯ ಸ್ಪಷ್ಟ ಉಲ್ಲಂಘನೆ” ಎಂದು ಯುವತಿ ಆಕ್ರೋಶಿಸಿದ್ದಾರೆ.

ಇದನ್ನು ನೋಡಿದ ಎಕ್ಸ್‌ ಬಳಕೆದಾರರು, ಅಮೆಜಾನ್ ಕಂಪನಿಯ ದಿವ್ಯ ನಿರ್ಲಕ್ಷ್ಯ ಕಂಡು ದಂಗಾಗಿದ್ದಾರೆ. ಹಲವರು ಅಮೆಜಾನ್‌ ಕಂಪನಿಯ ವಿರುದ್ಧ ಕಿಡಿ ಕಾರಿದ್ದಾರೆ. ಇದು ಉದ್ದೇಶಪೂರ್ವಕ ಮಾಡಿದ ಕೃತ್ಯವೇ ಎಂದು ಕೂಡ ಸಂಶಯಿಸಿದ್ದಾರೆ. ಒಬ್ಬರು ʼಇದು ಅಮೆಜಾನ್‌ ಫಾರೆಸ್ಟ್‌ನಿಂದ ಬಂದ ಪಾರ್ಸೆಲ್‌ʼ ಎಂದು ವಿನೋದವಾಡಿದ್ದಾರೆ.

“ಅಮೆಜಾನ್‌ ಕಂಪನಿಯು ಬಳಕೆದಾರರ ಸುರಕ್ಷತೆಯನ್ನು ಪ್ರಾಥಮಿಕ ಆದ್ಯತೆಯಾಗಿ ಪರಿಗಣಿಸುತ್ತದೆ. ಈ ಪ್ರಕರಣವನ್ನು ಗಂಭೀರ ಆದ್ಯತೆಯಾಗಿ ಪರಿಗಣಿಸಿ ನಾವು ತನಿಖೆ ನಡೆಸಲಿದ್ದೇವೆ” ಎಂದು ಅಮೆಜಾನ್‌ ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Exit mobile version