Site icon Vistara News

Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

Viral Video

ಲಖನೌ: ಇತ್ತೀಚೆಗಷ್ಟೇ ಶಿಕ್ಷಕಿಗೆ ವಿದ್ಯಾರ್ಥಿಯೊಬ್ಬ ಕಪಾಳಮೋಕ್ಷ ಮಾಡಿದ ವಿಡಿಯೊ ವೈರಲ್ ಆಗಿದೆ. ಈಗ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಾಡಿದ ಅವಾಂತರದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಮಕ್ಕಳಿಗೆ ವಿದ್ಯೆ ಕಲಿಸಿ ಬುದ್ದಿ ಹೇಳಬೇಕಾಗಿರುವ ಶಿಕ್ಷಕರಿಯೊಬ್ಬರು ಶಾಲೆಯಲ್ಲಿ ಫೇಶಿಯಲ್ ಮಾಡಿಕೊಂಡ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಒಳ್ಳೆಯ ಗುರುವಿದ್ದರೆ ಮಕ್ಕಳ ಭವಿಷ್ಯ  ಒಳ್ಳೆಯದಾಗಿರುತ್ತದೆ ಎಂಬ ನಂಬಿಕೆ ಪೋಷಕರದ್ದು. ನಮ್ಮ ಮಗು ಶಾಲೆಗೆ ಹೋಗುತ್ತಿದೆ. ಏನಾದರೂ ಕಲಿತು ನಾಳೆ ನಮ್ಮ ಕಷ್ಟವನ್ನು ನಿಭಾಯಿಸುತ್ತದೆ ಎಂದು ಸಾಲ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಅಲ್ಲಿ ಅವರಿಗೆ ವಿದ್ಯೆಯನ್ನು ಧಾರೆ ಎರೆಯುವವರೇ ಸರಿ ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಗತಿಯೇನು? ವಿದ್ಯೆ ಕಲಿಸುವ ಗುರುಗಳೇ ಬೇರೆ ಕೆಲಸದಲ್ಲಿ ತೊಡಗಿಕೊಂಡು ಉಳಿದ ಶಿಕ್ಷಕರನ್ನು ತಲೆ ತಗ್ಗಿಸುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ.

ಏಪ್ರಿಲ್ 18ರಂದು ಬೆಳಿಗ್ಗೆ ಉತ್ತರ ಪ್ರದೇಶದ ಬಿಘಾಪುರ ಬ್ಲಾಕ್ ನ ದಂಡಮಾವು ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಮಕ್ಕಳಿಗೆ ಪಾಠ ಮಾಡುವ ಬದಲು ತನ್ನ ಮುಖದ ಸೌಂದರ್ಯ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಫೇಶಿಯಲ್ ಮಾಡಿಸಿಕೊಳ್ಳುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರಿಂದ ಆ ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಶಾಲಾ ಮುಖ್ಯೋಪಾಧ್ಯಾಯಿನಿ ಸಂಗೀತಾ ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡ ಶಿಕ್ಷಕಿ.  ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ಅನಮ್ ಖಾನ್ ಅವರು ಇದನ್ನು ವಿಡಿಯೊ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಂಗೀತಾ ಸಿಂಗ್, ಅನಮ್ ಖಾನ್ ಅವರನ್ನು ಹಿಗ್ಗಾಮುಗ್ಗಾ  ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಇನ್ನು ಸಂಗೀತ ಸಿಂಗ್ ಹಲ್ಲೆ ಮಾಡಿದ ವಿಡಿಯೊ ಹಾಗೂ ಫೇಶಿಯಲ್ ಮಾಡಿದ ವಿಡಿಯೊಗಳನ್ನು ಅನಮ್ ಖಾನ್ ಪೋಸ್ಟ್ ಮಾಡಿದ್ದಾರೆ. ಇವೆರಡು ವಿಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ಈ ವಿಡಿಯೊ ನೋಡಿದ ಬ್ಲಾಕ್ ನ ಶಿಕ್ಷಣಾಧಿಕಾರಿ ಸಂಗೀತಾ ಸಿಂಗ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಶಿಕ್ಷಕಿ ಅನಮ್ ಖಾನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಸಂಗೀತಾ ಸಿಂಗ್ ವಿರುದ್ಧ ಬಿಘಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಂಡಮಾವು ಗ್ರಾಮದ ಶಾಲಾ ಮುಖ್ಯ ಶಿಕ್ಷಕಿ ಶಾಲಾ ಆವರಣದಲ್ಲೇ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದು, ಸಿಕ್ಕಿಬಿದ್ದಿದ್ದಕ್ಕಾಗಿ ಥಳಿಸಿದ್ದಾರೆ ಎಂದು ಶಾಲಾ ಸಹಾಯಕ ಶಿಕ್ಷಕಿಯಿಂದ ದೂರು ಬಂದಿದೆ. ಈ ಬಗ್ಗ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಘಾಪುರ ವೃತ್ತಾಧಿಕಾರಿ ಮಾಯಾ ರೈ ತಿಳಿಸಿದ್ದಾರೆ.

ಇದನ್ನೂ ಓದಿ:  ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಬದಲು ಶಿಕ್ಷಕರು ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ. ಇದಕ್ಕೆ ಕಾರಣ ಸರ್ಕಾರದ ನಿರ್ಲಕ್ಷ್ಯ ಎನ್ನಬಹುದು. ಯಾಕೆಂದರೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ  ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರದ ಕಾರಣ ಶಿಕ್ಷಕರು ಮನಬಂದಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಇದನ್ನು ಗಮನಿಸಿದ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹಣವಿಲ್ಲದಿದ್ದರೂ ಸಾಲ ಮಾಡಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಂಡರೆ ಒಳಿತು.

Exit mobile version