Site icon Vistara News

Viral Video: ವಾಕಿಂಗ್‌ ಮಾಡುತ್ತ ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ; ಅಧಿಕಾರಿಯ ವಿಡಿಯೊ ವೈರಲ್‌

ifs

ifs

ಬೆಂಗಳೂರು: ಪ್ರಸ್ತುತ ಪ್ಲಾಸ್ಟಿಕ್‌ ಎಲ್ಲ ಕಡೆ ವ್ಯಾಪಿಸಿದೆ. ಅದರಲ್ಲೂ ರಸ್ತೆ ಬದಿ, ಗುಡ್ಡ, ಕಾಡು, ನದಿ, ತೊರೆ, ಕೆರೆ, ಸಮುದ್ರ ಹೀಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಅನ್ನು ಎಸೆಯಲಾಗುತ್ತಿದೆ. ಎಷ್ಟು ಜಾಗೃತಿ ಮೂಡಿಸಿದರೂ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎನ್ನುವುದು ಬಹು ದೊಡ್ಡ ದುರಂತ. ಈ ಮಧ್ಯೆ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ತಂಡದ ಜತೆಗೆ ಕಾಡಿನ ರಸ್ತೆಯ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ. ಈ ತಂಡ ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಬರೋಬ್ಬರಿ ಎರಡು ಟ್ರಕ್ ಲೋಡ್ ಪ್ಲಾಸ್ಟಿಕ್ ಸಂಗ್ರಹಿಸಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ʼʼಸಾವಯವ ವಸ್ತುಗಳಿಂದ ಆವೃತವಾಗಬೇಕಾದ ಅರಣ್ಯ ಪ್ರದೇಶವು ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿಕೊಂಡಿದೆ. ವನ್ಯ ಜೀವಿಗಳು ಮತ್ತು ಸಾಕು ಪ್ರಾಣಿಗಳು ಆಹಾರವೆಂದು ಭಾವಿಸಿ ಈ ಪ್ಲಾಸ್ಟಿಕ್ ತುಂಡುಗಳನ್ನು ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅವುಗಳ ಪ್ರಾಣಕ್ಕೂ ಸಂಚಾಕಾರ ತರುತ್ತವೆʼʼ ಎಂದು ಪರ್ವೀನ್ ಕಸ್ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಕಾಡಂಚಿನ ರಸ್ತೆಯಲ್ಲಿ ಹಲವು ಜನರನ್ನೊಳಗೊಂಡ ಗುಂಪು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಟ್ರಕ್‌ಗೆ ತುಂಬಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ʼʼವಾಕಿಂಗ್‌ / ಜಾಗಿಂಗ್‌ ಮಾಡುತ್ತ ತ್ಯಾಜ್ಯ ಸಂಗ್ರಹಿಸುವ ಪ್ಲಾಗಿಂಗ್ ಇದು. ಕಾಡಂಚಿನ ರಸ್ತೆಯಿಂದ ಇಂದಿನ 7 ಕಿ.ಮೀ. ವಾಕಿಂಗ್‌/ ಜಾಗಿಂಗ್ ಮೂಲಕ ಎರಡು ಟ್ರಕ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಮಾನವ ಎಂದಿಗೂ ಬುದ್ಧಿ ಕಲಿಯುವುದೇ ಇಲ್ಲ. ಎಲ್ಲೆಂದರಲ್ಲಿ ಕಸ ಎಸೆದು ಅನಾಗರಿಕರಂತೆ ವರ್ತಿಸುವುದನ್ನು ನಿಲ್ಲಿಸುವುದೇ ಇಲ್ಲ. ನೀವು ಯಾವಾಗ ಪ್ಲಾಗಿಂಗ್‌ ಕೈಗೊಳ್ಳುತ್ತೀರಿ?ʼʼ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.

“ಈ ಪ್ಲಾಸ್ಟಿಕ್‌ಗಳನ್ನು ಪ್ರಾಣಿಗಳು ತಿನ್ನುತ್ತವೆ ಮತ್ತು ಅವು ಸಾಯುತ್ತವೆ. ಪ್ಲಾಸ್ಟಿಕ್ ತುಂಬಿದ ಕಾಡು ಪ್ರಾಣಿಗಳ ಸಗಣಿಯನ್ನು ನಾವು ಗಮನಿಸಿದ್ದೇವೆ. ಜೀರ್ಣವಾಗದ ದೊಡ್ಡ ತುಂಡುಗಳು ಇದರಲ್ಲಿ ಕಂಡು ಬರುತ್ತವೆ. ಪ್ರಕೃತಿ ವೀಕ್ಷಣೆಗೆ ಬರುವ ಪ್ರವಾಸಿಗರು ತಮ್ಮ ಗುರುತಿಗಾಗಿ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಎಸೆದು ಹೋಗುತ್ತಾರೆ. ಇದು ಅತ್ಯಂತ ಕೆಟ್ಟ ಅಭ್ಯಾಸʼʼ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಅಯ್ಯೋ ರಾವುಲ್ಲಾ… 95 ವರ್ಷದ ಅಜ್ಜಿ ಕಾರ್ ಓಡಿಸುತ್ತಿದ್ದಾಳೆ ನೋಡ್ಲಾ…!

ನೆಟ್ಟಿಗರು ಏನಂದ್ರು?

ಸದ್ಯ ಪರ್ವೀನ್ ಕಸ್ವಾನ್ ಶೇರ್‌ ಮಾಡಿರುವ ಈ ಪೋಸ್ಟ್‌ ಅನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ ಜಾಗೃತಿ ಅಭಿಯಾನಕ್ಕೆ ಪೊಲೀಸರು, ವಿದ್ಯಾರ್ಥಿಗಳು, ಸ್ಥಳೀಯ ಎನ್‌ಜಿಒಗಳು ಕೂಡ ಕೈ ಜೋಡಿಸಿವೆ. ಈ ಮಾದರಿ ಕಾರ್ಯಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಕೇವಲ ಪ್ಲಾಸ್ಟಿಕ್‌ ಕವರ್‌ ನಿಷೇಧಿಸುವುದರಿಂದ ಏನೂ ಪ್ರಯೋಜನವಿಲ್ಲ. ಎಲ್ಲ ರೀತಿಯ ಪ್ಲಾಸ್ಟಿಕ್‌ಗಳನ್ನೂ ಬ್ಯಾನ್‌ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ʼʼಪರ್ವೀನ್ ಕಸ್ವಾನ್ ಮತ್ತು ಅವರ ತಂಡದ್ದು ಮಾದರಿ ನಡೆ. ಇಂತಹ ಜಾಗೃತಿ ಅಭಿಯಾನ ನಿರಂತರ ನಡೆಯುತ್ತಿರಲಿʼʼ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version