Site icon Vistara News

Viral Video: ಗೂಳಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಬೇಕೆ? ಈತನ ತಂತ್ರ ಫಾಲೋ ಮಾಡಿ!

bull and bike

bull and bike

ಬೆಂಗಳೂರು: ದ್ವಿಚಕ್ರ ವಾಹನ, ಕಾರಿನಲ್ಲಿ ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದನ್ನು ನೋಡಿದ್ದೇವೆ. ಕೆಲವು ಬಾರಿ ಸಾಕು ನಾಯಿಯೇ ಹಾರಿ ಬೈಕ್‌ ಮೇಲೆ ಕುಳಿತುಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಗೂಳಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ ಈ ವಿಡಿಯೊ ನೋಡಿ. ವ್ಯಕ್ತಿಯೊಬ್ಬ ಗೂಳಿಯನ್ನು ಬೈಕ್‌ ಮುಂದೆ ಕೂರಿಸಿಕೊಂಡು ಸಾಗುತ್ತಿರುವ ದೃಶ್ಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ (Viral Video).

ವಿಡಿಯೊದಲ್ಲಿ ಆತ ಗೂಳಿಯನ್ನು ಮುಂದೆ ಕೂರಿಸಿ ಸಾಗುವ ದೃಶ್ಯ ಸೆರೆಯಾಗಿದೆ. ಆದರೆ ಆತ ಹೇಗೆ ಗೂಳಿಯನ್ನು ಬೈಕ್‌ನ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಾನೆ? ಆತ ಬೈಕ್‌ನ ಹಿಂದಿನ ಸೀಟಿನಲ್ಲಿ ತನ್ನನ್ನು ಹೇಗೆ ಸಮತೋಲನಗೊಳಿಸುತ್ತಾನೆ? ಎನ್ನುವುದು ವಿಡಿಯೊದಲ್ಲಿ ಕಂಡು ಬರುತ್ತಿಲ್ಲ. ಆತ ಗೂಳಿಯ ಬೆನ್ನಿನ ಮೇಲಿನಿಂದ ಕೈಗಳನ್ನು ಚಾಚಿ ಹ್ಯಾಂಡಲ್ ಅನ್ನು ಬ್ಯಾಲೆನ್ಸ್‌ ಮಾಡುವ ರೀತಿಯೇ ಅಮೋಘ. ಅಲ್ಲದೆ ಆತನ ಮುಂಭಾಗ ಗೂಳಿ ಕುಳಿತಿರುವುದರಿಂದ ಎದುರಿನ ರಸ್ತೆ ಕಾಣಿಸದಿದ್ದರೂ ಆತ ಹೇಗೆ ಬೈಕ್‌ ರೈಡ್‌ ಮಾಡುವ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಅಪಾಯಕಾರಿ ಸಾಹಸವನ್ನು ಬೈಕ್‌ನ ಪಕ್ಕದಲ್ಲೇ ಚಲಿಸುತ್ತಿದ್ದ ಕಾರಿನ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ. ವಿಡಿಯೊವನ್ನು ಯಾವಾಗ ಮತ್ತು ಎಲ್ಲಿ ಶೂಟ್‌ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 12 ಸೆಕೆಂಡ್‌ಗಳ ಈ ಪುಟ್ಟ ವಿಡಿಯೊವನ್ನು ಈಗಾಗಲೇ 2 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼಗೂಳಿಯೊಂದಿಗೆ ಪ್ರಯಾಣಿಸುವುದು ಹೀಗೆʼ ಎನ್ನುವ ಕ್ಯಾಪ್ಶನ್‌ನೊಂದಿಗೆ ವಿಡಿಯೊ ಹಂಚಲಾಗಿದೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊ ವೀಕ್ಷಿಸಿದ ಮಂದಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ನಮ್ಮ ಮಂದಿ ಕಠಿಣವಾಗಿ ಕೆಲಸ ಮಾಡುವುದರ ಜತೆಗೆ ಸೃಜನಾತ್ಮಕವಾಗಿಯೂ ಆಲೋಚಿಸುತ್ತಾರೆ ಎನ್ನುವುದು ಇದಕ್ಕೇನೆʼʼ ಎಂದು ಒಬ್ಬರು ಹೇಳಿದ್ದಾರೆ. “ಜಗತ್ತು ನಾವು ಊಹಿಸಿದ್ದಕ್ಕಿಂತ ತುಂಬಾ ವಿಶಾಲವಾಗಿದೆ, ವಿಭಿನ್ನವಾಗಿದೆ” ಎಂದಿದ್ದಾರೆ ಮತ್ತೊಬ್ಬರು. ಈ ದೃಶ್ಯ ತಮಾಷೆಯಾಗಿ ಕಂಡರೂ ವ್ಯಕ್ತಿ ಮತ್ತು ಗೂಳಿಗೆ ಅಪಾಯ ತಪ್ಪಿದ್ದಲ್ಲ ಎಂದು ಅನೇಕ ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. “ಇದು ತಮಾಷೆಯಲ್ಲ. ಯಾವುದೇ ವಾಹನವು ಮುಂಭಾಗದಿಂದ ಬಂದರೆ ಅಪಘಾತವಾಗುವ ಸಾಧ್ಯತೆ ಇದೆʼʼ ಎಂದು ಒಬ್ಬರು ಹೇಳಿದ್ದಾರೆ. “ಗೂಳಿಯ ಬಗ್ಗೆ ನನಗೆ ವಿಷಾದವಿದೆʼʼ ಎಂದು ಇನ್ನೊಬ್ಬರು ಅನುಕಂಪ ಸೂಚಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿರುವುದಂತೂ ಸತ್ಯ.

ಗೂಳಿಯೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. ಕೆಲವು ತಿಂಗಳ ಹಿಂದೆ ಉತ್ತರಾಖಂಡದ ಹೃಷಿಕೇಶದ ಬೀದಿಗಳಲ್ಲಿ ಎತ್ತಿನ ಮೇಲೆ ವ್ಯಕ್ತಿಯೊಬ್ಬ ಕುಳಿತು ಸವಾರಿ ಮಾಡುತ್ತಿರುವ 16 ಸೆಕೆಂಡುಗಳ ವಿಡಿಯೊ ಸಂಚಲನ ಮೂಡಿಸಿತ್ತು. ಅಲ್ಲದೆ ಇತ್ತೀಚೆಗೆ ಕುಡುಕನೊಬ್ಬ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಗೂಳಿಯನ್ನು ಕೆಣಕಿ ಕಾಲು ಕೆರೆದು ಜಗಳಕ್ಕೆ ಇಳಿದಿದ್ದ. ಕೊನೆಗೆ ರೊಚ್ಚಿಗೆದ್ದ ಗೂಳಿ ಕೊಂಬಿನಿಂದ ಆತನನ್ನು ಎತ್ತಿ ದೂರಕ್ಕೆ ಎಸೆದಿತ್ತು. ಇದರಿಂದ ಆತನ ನಶೆ ಎಲ್ಲ ಇಳಿದು ಹೋಗಿತ್ತು. ಈ ವಿಡಿಯೊ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದರು.

ಇದನ್ನೂ ಓದಿ: Viral Video: ವಿಶೇಷ ಕುದುರೆ ಏರಿದ ವರ; ನೆಟ್ಟಿಗರಿಗೆ ಅಚ್ಚರಿಯೋ ಅಚ್ಚರಿ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version