Site icon Vistara News

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Viral Video

ಮುಂಬೈ: ಸ್ನೇಹಿತರೊಂದಿಗೆ ಮೋಜಿನಲ್ಲಿ ತೊಡಗಿದ್ದ ಮಹಿಳೆಯೊಬ್ಬಳು ಅಚಾನಕ್ಕಾಗಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದಿದೆ. ಮುಂಬೈಯ ದೋಂಬಿವಿಲ್‌ನ ವಿಕಾಸ್‌ ನಾಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಗುಡಿಯಾ ದೇವಿ ಎಂದು ಗುರುತಿಸಲಾಗಿದೆ. ಆಕೆಯ ಜೊತೆಗಿದ್ದ ವ್ಯಕ್ತಿಯೂ ಬೀಳಲಿದ್ದ. ಆದರೆ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಇನ್ನು ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ವಿಕಾಸ್‌ ನಾಕಾ ಪ್ರದೇಶದಲ್ಲಿರುವ ಗ್ಲೋಬ್‌ ಸ್ಟೇಟ್‌ ಎಂಬ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ. ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್‌ ಆತ ಪಾರಾಗಿದ್ದಾನೆ.

ಇನ್ನು ನೆಲಕ್ಕೆ ಬೀಳುತ್ತಿದ್ದಂತೆ ಗುಡಿಯಾ ತಲೆಗೆ ಗಂಭೀರವಾದ ಏಟು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಮನ್ಪದಾ ಪೊಲೀಸರು ದೌಡಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇಂತಹದ್ದೇ ಒಂದು ಘಟನೆ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವಾಗ ಮಹಿಳೆಯೊಬ್ಬರ ಕಾಲು ಜಾರಿದ್ದು ಆಯತಪ್ಪಿ 5ನೇ ಮಹಡಿಯಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಖುಷ್ಬು ಅಶೀಷ್ ತ್ರಿವೇದಿ (31) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಖುಷ್ಬು ಅವರು ಮನೆಯೊಳಗಿದ್ದ ಟೇಬಲ್‌ ಮೇಲೆ ನಿಂತು ಕಿಟಕಿ ಬಳಿಯಿದ್ದ ಧೂಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ಕಾಲು ಜಾರಿದೆ ಅಷ್ಟೇ ಅದೇ ಕಿಟಕಿಯಿಂದ ಕೆಳಗೆ ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಆದರೆ ಆದಾಗಲೇ ಖಷ್ಬು ಮೃತಪಟ್ಟಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಗೆ ಕಿಟಕಿಗೆ ಗ್ರಿಲ್ ಅಳವಡಿಸದೇ ಇರುವುದೇ ಕಾರಣ ಎಂದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಸಂಬಂಧ ಸಾಮಾಜಿಕ ಹೋರಾಟಗಾರ ಸುಭಾಷ್‌ ಎಂಬುವವರು ದೂರು ದಾಖಲಿಸಿದ್ದಾರೆ. ಕಾಡುಗೋಡಿ ದೊಡ್ಡಬನಹಳ್ಳಿ ರಸ್ತೆಯಲ್ಲಿರುವ ಬಿ.ಡಿ.ಎ ವಿಧ್ಯಾಗಿರಿ ವಸತಿ ಸಮುಚ್ಚಯದಲ್ಲಿ 18 ಮಹಡಿಗಳಲ್ಲಿ ಸುಮಾರು 750 ಪ್ಲಾಟ್‌ಗಳನ್ನು ಹೊಂದಿದೆ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ತುರ್ತು ನಿರ್ಗಮನ, ಪ್ರಥಮ ಚಿಕಿತ್ಸೆ, ಫೈರ್ ಸೇಫ್ಟಿ, ಸೇಫ್ಟಿ ಮೇಸ್ ಇತ್ಯಾದಿ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೇ ಇದ್ದರೂ, ಸಾರ್ವಜನಿಕರಿಗೆ ವಾಸ ಮಾಡಲು ಹಂಚಿಕೆ ಮಾಡಿದ್ದಾರೆ.

ಇತ್ತೀಚೆಗೆ ನವ ವಿವಾಹಿತೆ ಖುಷ್ಬು ಎಂಬುವವರು 5 ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದಾರೆ. ಇದಕ್ಕೆಲ್ಲಾ ವಿಧ್ಯಾಗಿರಿ ವಸತಿ ಸಮುಚ್ಚಯದ ಅಸೋಶಿಯೇಟ್ ನಾರಾಯಣಸ್ವಾಮಿ, ಅಧಿಕಾರಿಗಳಾದ ಎ.ಇ.ಇ ಉದಯ ಕುಮಾರ್, ಇ.ಇಮೋಹನ್, ಎ.ಇ ಸುನೀಲ್‌ ನೇರ ಹೊಣೆ ಆಗಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ:Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Exit mobile version