Site icon Vistara News

Viral Video: ಒಳಗೆ ಸೇರಿದರೆ ಗುಂಡು, ಬೆಕ್ಕೂ ಆಗುವುದು ಗಂಡು!

viral cat

viral cat

ಚೆನ್ನೈ: ಇಂಟರ್‌ನೆಟ್‌ನಲ್ಲಿ ಪ್ರತಿದಿನ ಒಂದಲ್ಲ ಒಂದು ಪ್ರಾಣಿಗಳ ವಿಡಿಯೊ ವೈರಲ್‌ ಆಗುತ್ತಿರುತ್ತದೆ. ಸದ್ಯ ವೈರಲ್‌ ಆಗುವ ಸರದಿ ಈ ಬೆಕ್ಕಿನದ್ದು. ಇದು ಮಾದಕ ವ್ಯಸನಿಯಂತೆ ಓಲಾಡುತ್ತ ನಡೆಯುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).

ʼದಿ ರಿಯಲ್ ಜಸ್ಸಿʼ ಎನ್ನುವ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊದಲ್ಲಿ ಬೆಕ್ಕು ರಸ್ತೆಯುದ್ದಕ್ಕೂ ಓಲಾಡಿಕೊಂಡು ಓಡಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಬೆಕ್ಕಿನ ಅನಿಯಮಿತ ನಡಿಗೆಯು ನಶೆಯಿಂದ ರಸ್ತೆಯುದ್ದಕ್ಕೂ ಓಲಾಡಿಕೊಂಡು ಹೆಜ್ಜೆ ಹಾಕುವ ಮಾದಕ ವ್ಯಸನಿಯನ್ನು ನೆನಪಿಸುವಂತಿದೆ. ವಿಡಿಯೊದ ಹಿನ್ನೆಲೆಯಲ್ಲಿ ತಮಿಳುನಾಡು ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಕಂಡು ಬರುತ್ತಿದ್ದು, ಈ ವಿಡಿಯೊವನ್ನು ತಂಜಾವೂರು ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಅನೇಕರು ಊಹಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಗ್ರಾಮೀಣ ಪ್ರದೇಶದ ಹಿನ್ನೆಲೆಯೊಂದಿಗೆ ವಿಡಿಯೊ ಆರಂಭವಾಗುತ್ತದೆ. ಅಲ್ಲಿ ಮದ್ಯದಂಗಡಿಯೊಂದು ಕಂಡು ಬರುತ್ತದೆ. ಕೆಲವರು ಅಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಇವರ ಮಧ್ಯೆ ಬಿಳಿ ಬೆಕ್ಕೊಂದು ಅಡ್ಡಾಡುತ್ತದೆ. ಬೆಕ್ಕಿನ ಅಸ್ಥಿರ ನಡಿಗೆಯು ಮದ್ಯದ ಪ್ರಭಾವದಲ್ಲಿರುವ ವ್ಯಕ್ತಿಯನ್ನು ಹೋಲುತ್ತಿದ್ದು ಹಲವರ ಗಮನ ಸೆಳೆದಿದೆ. ಬೆಕ್ಕಿನ ಈ ವರ್ತನೆಗೆ ನಿಖರ ಕಾರಣ ತಿಳಿದಿಲ್ಲ. ಬಹುಶಃ ಅನಾರೋಗ್ಯವೂ ಇದಕ್ಕೆ ಕಾರಣ ಇರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಡಿಸೆಂಬರ್ 12ರಂದು ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 50,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಕಮೆಂಟ್‌ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನನಗೆ ಕುಡಿಯಲು ಇಷ್ಟವಿಲ್ಲ; ಆದರೆ ನನ್ನ ದುಃಖಗಳನ್ನು ಮರೆಯಲು ನಾನು ಕುಡಿಯುತ್ತೇನೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, “ಇಂತಹ ಮುಗ್ಧ ಪ್ರಾಣಿಗಳಿಗೆ ಮದ್ಯವನ್ನು ನೀಡಿದವರಿಗೆ ಮನುಷ್ಯತ್ವವೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼನಾಯಿ, ಬೆಕ್ಕುಗಳಿಗೆ ಮದ್ಯ ಕುಡಿಸುವುದು ತಮಾಷೆಯ ವಿಷಯವಲ್ಲʼʼ ಎಂದು ಮತ್ತೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ʼʼಈ ಪಾಪದ ಜೀವಿಗೆ ಮದ್ಯ ನೀಡಿದ ಪಾಪಿ ಯಾರು?ʼʼ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿ, ʼʼಇನ್ನೊಬ್ಬರಿಗೆ ತೊಂದರೆ ನೀಡಿ ಖುಷಿ ಪಡುವುದು ಕ್ರೂರತೆಯ ಸಂಕೇʼʼ ಎಂದು ಖೇದ ಪ್ರಕಟಿಸಿದ್ದಾರೆ. ʼʼಮಾನವೀಯತೆಗೆ ಬೆಲೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆʼʼ ಎಂದು ಹಲವರು ಹೇಳಿದ್ದಾರೆ. ಹಲವು ನಗುವ ಎಮೋಜಿಗಳನ್ನು ಬಳಸಿದ್ದಾರೆ.

ಈ ರೀತಿಯ ವಿಡಿಯೊ ವೈರಲ್‌ ಆಗುತ್ತಿರುವುದು ಇದು ಮೊದಲ ಸಲವಲ್ಲ. ಹಿಂದೆಯೂ ಹಲವು ಬಾರಿ ಇದೇ ಮಾದರಿಯ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಕೆಲವು ದಿನಗಳ ಹಿಂದೆ ಜ್ಯಾಕ್ ಎಂಬ ಹೆಸರಿನ ನಾಯಿಯ ವಿಡಿಯೊ ವೈರಲ್ ಆಗಿತ್ತು. ನಾಯಿ ಅಮಲಿನಲ್ಲಿ ತೇಲಾಡುತ್ತಿರುವ ದೃಶ್ಯ ಅದಾಗಿತ್ತು. ಅಲ್ಲದೆ ಇತ್ತೀಚೆಗೆ ನಾಯಿಯೊಂದು ನೀರು ತುಂಬಿದ ಗ್ಲಾಸ್‌ ಅನ್ನು ಹಣೆಯ ಮೇಲೆ ಇಟ್ಟು ಬ್ಯಾಲೆನ್ಸ್‌ ಮಾಡಿಕೊಂಡು ನಡೆಯುವ ವಿಡಿಯೊ ಹಲವರ ಗಮನ ಸೆಳೆದಿತ್ತು. ಬಾಲಿವುಡ್‌ನ ʼಅನಿಮಲ್‌ʼ ಚಿತ್ರದ ದೃಶ್ಯವನ್ನು ಇದು ನೆನಪಿಸಿತ್ತು.

ಇದನ್ನೂ ಓದಿ: Viral Video: ವಿಭಿನ್ನವಾಗಿ ಕಾರು ಓಡಿಸಿದ ʼಆಲ್ಟೊ ಅಂಕಲ್‌ʼ; ಇದು ಹೊಸ ಮಾದರಿ ಎಂದ ನೆಟ್ಟಿಗರು

Exit mobile version