Site icon Vistara News

Viral Video: ಈಗೇಕೆ ಬಂದಿದ್ದೀರಿ? ನೆರೆ ಬಂದಾಗ ಕ್ಷೇತ್ರ ನೆನಪಾದ ಶಾಸಕನ ಕಪಾಳಕ್ಕೆ ಏಟು ಕೊಟ್ಟ ಮಹಿಳೆ!

Woman Slaps MLA In Haryana

Viral Video: Woman slaps Haryana MLA over floods, asks 'Why have you come now?'

ಚಂಡೀಗಢ: ಭಾರಿ ಮಳೆಗೆ ಉತ್ತರ ಭಾರತ ನಲುಗಿ ಹೋಗಿದೆ. ಹಿಮಾಚಲ ಪ್ರದೇಶ, ಪಂಜಾಬ್‌, ಚಂಡೀಗಢ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಸೇರಿ ಹಲವೆಡೆ ಸುರಿದ ಭಾರಿ ಮಳೆಯಿಂದ ಜನ ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ. ಹರಿಯಾಣದಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿದ್ದು, ಮಳೆ ಸಂಬಂಧಿತ ಅವಘಡಗಳಿಂದಾಗಿ ಇದುವರೆಗೆ 11 ಜನ ಮೃತಪಟ್ಟಿದ್ದಾರೆ. ಇನ್ನು, ಪ್ರವಾಹದ ಸಂದರ್ಭದಲ್ಲಿ ಜನರ ರಕ್ಷಣೆಗೆ ಮುಂದಾಗದ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಹರಿಯಾಣದಲ್ಲಿ ಕ್ಷೇತ್ರ ವೀಕ್ಷಣೆಗೆ ತೆರಳಿದ ಶಾಸಕರೊಬ್ಬರಿಗೆ ಮಹಿಳೆಯು ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಹೌದು, ಪ್ರವಾಹದ ಹಿನ್ನೆಲೆಯಲ್ಲಿ ಘುಲ ಪ್ರದೇಶದಲ್ಲಿ ವೀಕ್ಷಣೆಗೆ ತೆರಳಿದ ಜನನಾಯಕ ಜನತಾ ಪಕ್ಷದ (JJP) ಶಾಸಕ ಈಶ್ವರ್‌ ಸಿಂಗ್‌ ಅವರ ಕಪಾಳಕ್ಕೆ ಮಹಿಳೆಯೊಬ್ಬರು ಏಟು ಕೊಟ್ಟಿದ್ದಾರೆ. “ಪ್ರವಾಹ ಬಂದಾಗ ಕ್ಷೇತ್ರ ನೆನಪಾಯಿತಾ? ಈಗೇಕೆ ಬಂದಿದ್ದೀರಿ” ಎಂದು ಈಶ್ವರ್‌ ಸಿಂಗ್‌ ಅವರಿಗೆ ತರಾಟೆ ತೆಗೆದುಕೊಂಡ ಮಹಿಳೆ, ಹಾಗೆಯೇ ಕಪಾಳಕ್ಕೆ ಏಟು ಕೊಟ್ಟಿದ್ದಾರೆ. ಇದಾದ ಬಳಿಕ ಶಾಸಕ ಸುಮ್ಮನೆ ಹಿಂತಿರುಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, ಜೆಜೆಪಿಯು ಹರಿಯಾಣ ಬಿಜೆಪಿ ಸರ್ಕಾರದ ಭಾಗವಾಗಿದೆ.

ಘಗ್ಗರ್‌ ನದಿಯ ನೀರು ಉಕ್ಕಿ ಹರಿಯುತ್ತಿರುವ ಕಾರಣ ಘುಲ ಪ್ರದೇಶದಲ್ಲಿರುವ ಸಣ್ಣದೊಂದು ಡ್ಯಾಮ್‌ಗೆ ಹೆಚ್ಚಿನ ನೀರು ಹರಿಬಿಡಲಾಗಿದೆ. ಇದರಿಂದಾಗಿ ಡ್ಯಾಮ್‌ ಒಡೆದಿದ್ದು, ನೀರು ಗ್ರಾಮಗಳಿಗೆ ನುಗ್ಗಿದೆ. ಇದರಿಂದ ಗ್ರಾಮಗಳ ಜನರು ನಿರಾಶ್ರಿತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕ ಕ್ಷೇತ್ರ ವೀಕ್ಷಣೆಗೆ ಹೋಗಿದ್ದು, ಹೆಚ್ಚಿನ ಜನ ಈಶ್ವರ್‌ ಸಿಂಗ್‌ ಅವರನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ‘ಧರ್ಮ ಮನೆಯಲ್ಲಿರಲಿ’; ಮುಸ್ಲಿಂ ಟೋಪಿ ಹಾಕಿ ಡ್ಯೂಟಿ ಮಾಡುತ್ತಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಮಹಿಳೆ ಕ್ಲಾಸ್

ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಸಿಂಗ್‌, “ನಾನು ಕ್ಷೇತ್ರದ ಜನರ ಸಂಕಷ್ಟ ಕೇಳಲು ಹೋಗಿದ್ದೆ. ಆದರೆ, ಒಂದಷ್ಟು ಜನ ನನ್ನನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು. ನೈಸರ್ಗಿಕ ವಿಕೋಪ ಸಂಭವಿಸುತ್ತಲೇ ಇರುತ್ತವೆ. ಭಾರಿ ಮಳೆಯಾದ ಕಾರಣ ಡ್ಯಾಮ್‌ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದು ಮಹಿಳೆಗೆ ಮನವರಿಕೆ ಮಾಡಲು ಯತ್ನಿಸಿದೆ. ಆದರೆ, ಅವರು ಯಾರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ” ಎಂದು ಹೇಳಿದ್ದಾರೆ. ಇನ್ನು ವಿಡಿಯೊ ವೈರಲ್‌ ಆಗುತ್ತಲೇ ಜಾಲತಾಣಗಳಲ್ಲಿ ಹಲವು ಜನ ವಿವಿಧ ರೀತಿ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರ, ಜನರನ್ನು ನಿರ್ಲಕ್ಷಿಸುವ ರಾಜಕಾರಣಿಗಳಿಗೆ ತಕ್ಕ ಶಾಸ್ತಿ ಮಾಡಿದ್ದೀರಿ ಎಂದು ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version