Site icon Vistara News

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

ಬೆಂಗಳೂರು: ಮದುವೆಯಾದ ಬಳಿಕ ಪತಿ-ಪತ್ನಿ ಮಧ್ಯೆ ಒಮ್ಮತ ಮೂಡದಿದ್ದರೆ, ಸರಸಕ್ಕಿಂತ ವಿರಸವೇ ಹೆಚ್ಚಾದರೆ ವಿಚ್ಛೇದನ ಪಡೆಯುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಡಿವೋರ್ಸ್‌ ಪಡೆದುಕೊಳ್ಳಲೆಂದೇ ಮದುವೆ ಮಾಡಿಕೊಳ್ಳುತ್ತಿದ್ದಾಳ ಎನ್ನುವ ಅನುಮಾನ ಮೂಡುವಂತಾಗಿದೆ. ಯಾಕೆಂದರೆ ಇದೀಗ ಈಕೆಯ 7ನೇ ಡಿವೋರ್ಸ್ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಧೀಶರನ್ನೇ ಅಚ್ಚರಿಗೆ ದೂಡಿದೆ. ಈ ವಿಚಾರಣೆಯ ವಿಡಿಯೊ ಇದೀಗ ವೈರಲ್ ಆಗಿದೆ (Viral Video).

ಮದುವೆಯಾದ ನಂತರ ಮಹಿಳೆಯರು ತಮ್ಮ ಮನೆಗಳಿಂದ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಅನೇಕ ಪ್ರಕರಣಗಳು ನಡೆದಿವೆ. ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಅದಕ್ಕಿಂತ ಭಿನ್ನವಾಗಿ, ನ್ಯಾಯಾಧೀಶರನ್ನೇ ಬೆರಗುಗೊಳಿಸಿದ ಡಿವೋರ್ಸ್‌ ಪ್ರಕರಣ ಇದೀಗ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈ ಮಹಿಳೆ ಅದನ್ನೇ ಪ್ರವೃತ್ತಿ ಮಾಡಿಕೊಂಡಂತಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ ನಡೆಸಿ ಬಳಿಕ 6 ತಿಂಗಳಲ್ಲಿ ಪತಿ ವಿರುದ್ಧ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಸಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. 6 ಪ್ರಕರಣಗಳಲ್ಲಿಯೂ ಗಂಡಂದಿರಿಂದ ದುಬಾರಿ ಮೊತ್ತವನ್ನು ಪಡೆದಿದ್ದಾಳೆ. ಇದೀಗ ಈ ಮಹಿಳೆಯ ವಂಚನೆಯನ್ನು ಬಯಲಿಗೆಳೆಯಲು ಏಳನೇ ಪತಿ ಮುಂದಾಗಿದ್ದಾನೆ. ಹೀಗಾಗಿ ಪತ್ನಿಯ ವಿರುದ್ಧವೇ ಈತ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯ ಕೈಗೆತ್ತಿಕೊಂಡ ನ್ಯಾಯಾಧೀಶರು ಮಹಿಳೆಯ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಪತಿ ಪರ ವಕೀಲರು ವಾದ ಮಂಡಿಸಿ, “ವಿವಾಹಿತ ಮಹಿಳೆಯರ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಸೆಕ್ಷನ್ 498ಎ ಅಡಿಯಲ್ಲಿ ಎಲ್ಲ ಗಂಡಂದಿರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ ಆಕೆ ಜೀವನಾಂಶವನ್ನು ಆಗ್ರಹಿಸಿದ್ದಾಳೆʼʼ ಎಂದು ತಿಳಿಸಿದರು. ಇದಕ್ಕೆ ನ್ಯಾಯಾಧೀಶರು ʼʼಅವಳು ಪ್ರತಿ ಗಂಡನೊಂದಿಗೆ ಎಷ್ಟು ಸಮಯದಿಂದ ಇರುತ್ತಾಳೆ?ʼʼ ಎಂದು ಕೇಳಿದರು. ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವಳು ಪ್ರತಿ ಪತಿಯೊಂದಿಗೆ ಒಂದು ವರ್ಷದಿಂದ ಆರು ತಿಂಗಳವರೆಗೆ ವಾಸಿಸುತ್ತಿದ್ದಳು ಎಂದು ವಕೀಲರು ತಿಳಿಸಿದರು.

ಬಳಿಕ ನ್ಯಾಯಾಧೀಶರು ಮಹಿಳೆ ಕಾನೂನನ್ನು ತಿರುಚುತ್ತಿದ್ದಾರೆ ಎಂದು ಟೀಕಿಸಿದರು. ಆಕೆಯ ಪತಿಯ ವಕೀಲರು ಮದುವೆಯ ಎಲ್ಲ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮುಂದಿನ ವಿಚಾರಣೆಯಂದು ವಿವರವಾದ ಮಾಹಿತಿಯೊಂದಿಗೆ ಹಾಜರಾಗುವಂತೆ ಆಕೆಯ ಎಲ್ಲ ಪತಿಯಂದಿರಿಗೆ ಜಡ್ಜ್‌ ಸೂಚಿಸಿದರು. ಇದು ಕಾನೂನಿನ ದುರ್ಬಳಕೆ. ಇಲ್ಲಿ ಕಾನೂನು ಜತೆ ಆಟವಾಡುತ್ತಿದ್ದೀರಿ ಎಂದು ಮಹಿಳೆಗೆ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಈ ಪ್ರಕರಣ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Exit mobile version