Site icon Vistara News

Viral Video: ರಶ್‌ ಇರುವ ರೈಲಿನೊಳಗೆ ಹತ್ತೋದು ಹೇಗೆ?; ಈ ವಿಡಿಯೊ ನೋಡಿ

viral video

viral video

ಭೋಪಾಲ್‌: ಕೆಲವು ತಿಂಗಳ ಹಿಂದೆ ರಶ್‌ ಇದ್ದ ಕಾರಣ ಡ್ರೈವರ್ ಸೀಟಿನ ಬಾಗಿಲಿನಿಂದ ಮಹಿಳೆಯರು ಬಸ್‌ ಒಳಗೆ ಪ್ರವೇಶಿಸುತ್ತಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದು ವಿಡಿಯೊ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಮಹಿಳೆಯರಿಬ್ಬರು ಜನ ಸಂದಣಿ ನಡುವೆ ಕಿಟಕಿ ಮೂಲಕ ರೈಲಿನ ಒಳಗೆ ಪ್ರವೇಶಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆಗಿದೆ (Viral Video).

ವಿಡಿಯೊದಲ್ಲೇನಿದೆ?

ಭಾರತೀಯ ರೈಲ್ವೆ ಎಂದರೆ ತಕ್ಷಣ ಪ್ರಯಾಣಿಕರ ದಟ್ಟಣೆಯೂ ಕಣ್ಣ ಮುಂದೆ ಬರುತ್ತದೆ. ಬಹುತೇಕರು ಸಂಚಾರಕ್ಕಾಗಿ ರೈಲನ್ನು ಅವಲಂಬಿಸಿರುವುದರಿಂದ ರೈಲ್ವೆ ನಿಲ್ದಾಣ ಸದಾ ಜನರಿಂದ ಗಿಜಿಗುಡುತ್ತಿರುತ್ತದೆ. ಇದೀಗ ರೈಲಿನಲ್ಲಿ ಎಷ್ಟು ಜನ ದಟ್ಟಣೆ ಹೆಚ್ಚಾಗಿದೆ ಎಂದರೆ ಬಾಗಿಲು ಬಿಟ್ಟು ಕಿಟಕಿಗಳ ಮೂಲಕ ಹತ್ತುವ ಹಂತವನ್ನು ತಲುಪಿದೆ. ಉಜ್ಜಯಿನಿ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಈ ದೃಶ್ಯ ಕಂಡು ಬಂದಿದೆ.

ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನೂರಾರು ಮಂದಿ ಕಾಯುತ್ತಿರುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಹಳಿಗಳ ಪಕ್ಕದ ಜಾಗವನ್ನು ಬಿಡದಷ್ಟು ಜನ ಸಂದಣಿ ಅಲ್ಲಿ ಕಂಡು ಬಂದಿತ್ತು. ಕೊನೆಗೂ ರೈಲು ಬಂದೇ ಬಿಟ್ಟಿತು. ಆಗ ಶುರುವಾಯ್ತು ರೈಲಿನೊಳಗೆ ಹತ್ತಲಿರುವ ಪ್ರಯಾಣಿಕರ ಕಸರತ್ತು. ತಾ ಮುಂದು ನಾ ಮುಂದು ಎಂದು ಪ್ರಯಾಣಿಕರು ತಳ್ಳಾಡುತ್ತ ರೈಲಿನೊಳಗೆ ಪ್ರವೇಶಿಸತೊಡಗಿದರು. ಈ ಮಧ್ಯೆ ಮಹಿಳೆಯರಿಬ್ಬರು ಕಿಟಕಿ ಮೂಲಕ ರೈಲಿನೊಳಗೆ ಪ್ರವೇಶಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇಬ್ಬರು ಮಹಿಳೆಯರು ತಮ್ಮ ಪರಿಚಯಸ್ಥರ ನೆರವಿನಿಂದ ಒಬ್ಬೊಬ್ಬರಾಗಿ ಕಿಟಕಿ ಮೂಲಕ ರೈಲಿನ ಒಳ ಪ್ರವೇಶಿಸಿದ್ದಾರೆ. ಸದ್ಯ ಈ ವಿಡಿಯೊ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗಾಗಲೇ ಸಾವಿರಾರು ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಈ ನಂಬಲಸಾಧ್ಯ ದೃಶ್ಯವನ್ನು ನೆಟ್ಟಿಗರು ಅಚ್ಚರಿಯ ಕಣ್ಣುಗಳಿಂದ ನೋಡಿದ್ದಾರೆ. ಹೀಗೆ ಪ್ರವೇಶಿಸುವುದರಿಂದ ಎದುರಾಗುವ ಅಪಾಯದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಇಂತಹ ಘಟನೆಯ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. “ಸೀರೆ ಉಟ್ಟು ‘ಸಣ್ಣ ಬಾಗಿಲಿನ’ ಮೂಲಕ ಬೋಗಿ ಹತ್ತುವುದು ಗಮನಾರ್ಹ ಸಾಧನೆʼʼ ಎಂದು ಒಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. “ಇದನ್ನು ʼವಿಂಡೋಸ್ʼ ತರಬೇತಿ ಎಂದು ಕರೆಯಲಾಗುತ್ತದೆʼʼ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. “ತುರ್ತು ನಿರ್ಗಮನವು ತುರ್ತು ಪ್ರವೇಶದ್ವಾರವಾಗಿ ಮಾರ್ಪಟ್ಟಿದೆ” ಎನ್ನುವುದು ಮತ್ತೊಬ್ಬರ ಅಭಿಪ್ರಾಯ. “ಇಲ್ಲಿ ಏನು ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ.

ವರದಿಗಳ ಪ್ರಕಾರ ನೂತನ ‘ಹಿಟ್ ಅಂಡ್ ರನ್’ ಕಾನೂನಿನ ವಿರುದ್ಧ ಟ್ರಕ್ ಚಾಲಕರು ಪ್ರಾರಂಭಿಸಿದ ಮುಷ್ಕರದ ಪರಿಣಾಮವಾಗಿ ಉಜ್ಜಯಿನಿ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿತ್ತು. ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಒಮ್ಮೆಲೆ ಜನ ಪ್ರವಾಹ ರೈಲು ನಿಲ್ದಾಣದತ್ತ ಹರಿದು ಬಂತು ಎನ್ನಲಾಗಿದೆ.

ಇದನ್ನೂ ಓದಿ: Video Viral: ಉಚಿತ ಬಸ್‌ನಲ್ಲಿ ಹೆಚ್ಚಿದ ಮಹಿಳೆಯರ ʼಶಕ್ತಿʼ; ಡ್ರೈವರ್‌ ಸೀಟ್‌ನಿಂದಲೇ ಹತ್ತಿದ ನಾರಿಯರು!

Exit mobile version