Site icon Vistara News

Viral video: ಚಪ್ಪಲಿಯಲ್ಲಿ ಬಡಿದಾಡಿ ಬಟ್ಟೆ ಹರಿದುಕೊಂಡರು; ಪುಕ್ಕಟೆ ಬಸ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ!

viral video shakti scheme women fight

ಬೀದರ್‌: ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ (Shakthi scheme women fight) ಸೀಟಿಗಾಗಿ ಕೆಲವು ಮಹಿಳೆಯರು ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (viral video) ಆಗಿದೆ. ಒಂದು ಸೀಟಿಗಾಗಿ ಪರಸ್ಪರ ಮಾನ ಮರ್ಯಾದೆ ಬಿಟ್ಟು ಚಪ್ಪಲಿ ಹಿಡಿದು ಬಡಿದಾಡಿಕೊಂಡಿದ್ದಾರೆ. ಅಂಗಿ- ರವಿಕೆ ಹರಿದುಕೊಂಡಿದ್ದಾರೆ.

ಈ ಘಟನೆ ಬೀದರ್‌ನಿಂದ ಕಲಬುರಗಿಗೆ ತೆರಳುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ತಾನು ಕರ್ಚೀಫ್ ಹಾಕಿಟ್ಟಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದರಿಂದ ಸಿಟ್ಟಾದ ಮಹಿಳೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಸ್ಪಂದಿಸದೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಮಾತಿಗೆ ಮಾತು ಬೆಳೆದಿದೆ. ಅವಾಚ್ಯ ಬೈಗುಳಗಳು ವಿನಿಮಯ ಆಗಿದ್ದು, ಪರಸ್ಪರರ ಅಂಗಿ ಹಿಡಿದು ಎಳೆದಾಡಿಕೊಂಡಿದ್ದಾರೆ. ನಂತರ ಚಪ್ಪಲಿ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜೊತೆಗಿದ್ದ ಹಲವರು ಇವರ ಜಗಳ ಬಿಡಿಸಲು ಯತ್ನಿಸಿದರೆ, ಇನ್ನು ಹಲವರು ತಾವೂ ಎರಡು ಪಕ್ಷ ವಹಿಸಿ ಕಿತ್ತಾಡಿಕೊಂಡಿದ್ದಾರೆ!

ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ಫನ್ನೀ ಕಾಮೆಂಟ್‌ಗಳು ಇದಕ್ಕೆ ಬಂದಿವೆ. “ಜಡೆಗಳು ಕಿತ್ತುಬರುವುದೊಂದೇ ಬಾಕಿ” ಎಂದು ಒಬ್ಬರು, “ಇದು ಗ್ಯಾರಂಟಿ ಹೊಡೆದಾಟ” ಎಂದು ಇನ್ನು ಕೆಲವರು ವಿನೋದವಾಡಿದ್ದಾರೆ. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಜಾರಿಯ ಬಳಿಕ ಇಂಥ ಹಲವಾರು ಹೊಡೆದಾಟಗಳು ಸೋಶಿಯಲ್‌ ಮೀಡಿಯಾಗಳಲ್ಲಿ ದಾಖಲಾಗಿವೆ.

ಖಾಸಗಿ ಬಸ್‌ಗಳಿಗೂ ವಿಸ್ತರಣೆ?

ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ (Free Bus service) ಅವಕಾಶವನ್ನು ಒದಗಿಸಿರುವ ಶಕ್ತಿ ಯೋಜನೆ (Shakthi Scheme) ಖಾಸಗಿ ಬಸ್‌ಗಳಿಗೂ (Private Buses) ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಹತ್ವದ ಸೂಚನೆ ನೀಡಿದ್ದು, ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ನಿರ್ದೇಶನ ನೀಡಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ಅಲ್ಲಿನ ಜನರಿಗೂ ಯೋಜನೆಯ ಲಾಭ ದೊರೆಯುವಂತಾಗಲು ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ ಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕೆಲವು ಕಡೆ ಕೇಳಿಬಂದಿತ್ತು. ಖಾಸಗಿ ಬಸ್‌ ಮಾಲೀಕರೊಬ್ಬರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದಿಸಿದರು.

ಇದನ್ನೂ ಓದಿ: Electric Bus : ಶಕ್ತಿ ಯೋಜನೆ ಟೀಕಿಸುವ ಬಿಜೆಪಿಗೆ ಹೆಣ್ಮಕ್ಕಳೇ ಉತ್ತರ ಕೊಡಿ ಎಂದ ಸಿದ್ದರಾಮಯ್ಯ

Exit mobile version