ಅಜ್ಮೇರ್: ಯಾರ ಮನೆಯಲ್ಲಿ ಜಗಳ-ಮನಸ್ತಾಪ ಇರುವುದಿಲ್ಲ ಹೇಳಿ? ಆದರೆ ಅದನ್ನು ನಾಲ್ಕು ಗೋಡೆಯ ಮಧ್ಯೆಯೇ ಮುಗಿಸಬೇಕು ಹೊರತು ಬೀದಿ ಕಾಳಗಕ್ಕೆ ತಿರುಗಿಸಬಾರದು. ಯಾವ ಮನೆಯ ಜಗಳ ರಸ್ತೆಗೆ ಬರುತ್ತದೆಯೋ ಆ ಕುಟುಂಬದ ಮಾನ ಹೋದಂತೇ ಎಂಬ ಮಾತಿದೆ. ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಅದನ್ನೇ ಪುಷ್ಟೀಕರಿಸುತ್ತದೆ.
ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಶ್ರೀಮಂತ ಕುಟುಂಬವೊಂದರ ಇಬ್ಬರು ಸೊಸೆಯಂದಿರು, ಅದೇ ಕುಟುಂಬದ ಒಬ್ಬಳು ಮಗಳು ಪರಸ್ಪರ ಕಿತ್ತಾಡಿ, ಜಗಳವಾಡಿ ಬೀದಿಗೆ ಬಂದು ಚರಂಡಿಗೆ ಬಿದ್ದಿದ್ದಾರೆ. ಕೊಳಕಿರುವ ಚರಂಡಿಗೆ ಬಿದ್ದಾದ ಮೇಲಾದರೂ ಸುಮ್ಮನಿದ್ದಾರಾ? ಅದೂ ಇಲ್ಲ. ಅಲ್ಲಿಯೂ ಕುಳಿತು ಪರಸ್ಪರ ಕೂದಲು ಹಿಡಿದುಕೊಂಡು ತಳ್ಳಾಡಿದ್ದಲ್ಲದೆ, ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಮಹಿಳೆಯರು ಜಗಳವಾಡಿದ್ದು ಆಸ್ತಿಗಾಗಿ ಎಂದು ಹೇಳಲಾಗಿದೆ. ಚರಂಡಿಗೆ ಬಿದ್ದ ಮಹಿಳೆಯರಲ್ಲಿ ಒಬ್ಬಾಕೆಯ ಹೆಸರು ದೇವರಾಣಿ ಮತ್ತೊಬ್ಬಾಕೆ ಜೇತಾನಿ. ಇವರು ವರಸೆಯಲ್ಲಿ ಅತ್ತಿಗೆ-ನಾದಿನಿ ಆಗಬೇಕು. ಇವರಿಬ್ಬರೂ ಚರಂಡಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದರೆ, ಕುಟುಂಬದ ಇನ್ನೊಬ್ಬಳು ಸೊಸೆ ಮತ್ತು ಮತ್ತೊಬ್ಬಾತ ಬಂದು ಅವರಿಗ ಒದ್ದು, ಹೊಡೆದಿದ್ದಾರೆ. ಬಳಿಕ ಅವರೂ ಚರಂಡಿಗೆ ಇಳಿದಿದ್ದಾರೆ. ಇವೆಲ್ಲವನ್ನೂ ಅಪಾರ ಜನರು ಚರಂಡಿ ಸುತ್ತ ನಿಂತು ವೀಕ್ಷಿಸಿದ್ದಾರೆ. ವಿಡಿಯೋವನ್ನೂ ಮಾಡಿಕೊಂಡಿದ್ದಾರೆ. ಕೆಲವರು ಫೈಟ್ ನಿಲ್ಲಿಸುವಂತೆ ಕೂಗಿದ್ದಾರೆ.
ಈ ಮನೆಯ ಇಬ್ಬರು ಸಹೋದರರಲ್ಲಿ ಒಬ್ಬಾತ ಮೃತಪಟ್ಟಿದ್ದಾನೆ. ಇನ್ನೊಬ್ಬಾತನ ಹೆಸರು ನರೇಂದ್ರ ಕುಮಾವತ್ ಎಂದಾಗಿದ್ದು ಪೆಟ್ರೋಲ್ ಬಂಕ್‌ನ ಮಾಲೀಕ. ಇವನ ಸೋದರ ಮೃತಪಟ್ಟ ಮೇಲೆ ಆಸ್ತಿ ವಿವಾದ ತಾರಕಕ್ಕೆ ಏರಿತ್ತು. ಬಹುಕಾಲದಿಂದ ನಡೆದುಕೊಂಡು ಬರುತ್ತಿದ್ದ ಗಲಾಟೆ, ಗುರುವಾರ ಹೊಡೆದಾಟದ ಹಂತಕ್ಕೆ ತಲುಪಿತ್ತು. ಏಕಾಏಕಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ್ದ ಮೃತನ ಪತ್ನಿ (ವಿಧವೆ) ಸಂಗೀತಾ, ನರೇಂದ್ರ ಕುಮಾವತ್ ಪತ್ನಿಯೊಂದಿಗೆ ಗಲಾಟೆ ಶುರು ಮಾಡಿದ್ದರು. ಆಗ ಮನೆಯ ಮಗಳೂ ಅಲ್ಲಿಗೆ ಬಂದಿದ್ದಳು. ಎಲ್ಲ ಸೇರಿ ಸಿಕ್ಕಾಪಟೆ ಹೊಡೆದಾಡಿಕೊಂಡಿದ್ದಾರೆ. ನಂತರ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: Viral Video: ಎರಡು ಹುಲಿಗಳ ಜಾಲಿ ಮೂಡ್ ಆಟ; ಕಣ್ಣಿಗೆ ಹಬ್ಬವೆಂದ ನೆಟ್ಟಿಗರು