ವೆಡ್ಡಿಂಗ್ ಗೌನ್ ಎಂದಾಕ್ಷಣ ಬಿಳಿ ಬಣ್ಣದ ಉದ್ದನೆಯ ಡ್ರೆಸ್ ನಿಮ್ಮ ಕಣ್ಣ ಮುಂದೆ ಬಂದುಬಿಡುತ್ತದೆ. ಚಂದದ ಬಟ್ಟೆಗೆ ಎಂಬ್ರಾಯಿಡರಿ ಮಾಡಿದ ಗೌನ್‌ಗಳು ಮುಟ್ಟಿದರೂ ಕೊಳೆಯಾಗಿಬಿಡುತ್ತದೆಯೇನೋ ಎನಿಸುವಂತಿರುತ್ತದೆ. ಆದರೆ ಈ ಗೌನ್ ಅನ್ನು ಕೇವಲ ಮುಟ್ಟುವುದು ಮಾತ್ರವಲ್ಲ, ತಿನ್ನಲೂಬಹುದು! ಅಂಥದ್ದೊಂದು ವಿಚಿತ್ರ ವೆಡ್ಡಿಂಗ್ ಗೌನ್ ಕೇಕ್ ಇದು.
ಇದನ್ನೂ ಓದಿ: Viral video: ಕೋಂಗಾ ನೃತ್ಯ ಮಾಡಿ ಗಿನ್ನಿಸ್ ದಾಖಲೆ ಬರೆದ 14 ನಾಯಿಗಳ ತಂಡ!
ಸ್ವಿಝರ್ಲೆಂಡ್‌ನಲ್ಲಿ ಸ್ವೀಟಿ ಕೇಕ್ಸ್ ಹೆಸರಿನ ಕೇಕ್ ಶಾಪ್ ಇಟ್ಟುಕೊಂಡಿರುವ ನತಾಶಾ ಕೊಯ್ನೆ ಕಿಮ್ ಫಾಹ್ ಲೀ ಫಾಕ್ಸ್ ಈ ರೀತಿಯ ವಿಶೇಷ ಗೌನ್ ಕೇಕ್ ಅನ್ನು ತಯಾರಿಸಿದ್ದಾರೆ. ಬರೋಬ್ಬರಿ 131.15 ಕೆ.ಜಿ ತೂಕವಿರುವ ಈ ಗೌನ್ ಅನ್ನು ತಾವೇ ತೊಟ್ಟು ಸ್ವಿಸ್ ವರ್ಲ್ಡ್ ವೆಡ್ಡಿಂಗ್ ಉತ್ಸವದಲ್ಲಿ ಫ್ಯಾಷನ್ ಶೋ ನಡೆಸಿದ್ದಾರೆ. ಈ ಕೇಕ್ ಕಂಡಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನವರು “ವಿಶ್ವದ ಅತಿ ದೊಡ್ಡ ಧರಿಸಬಹುದಾದ ಕೇಕ್” ಎನ್ನುವ ದಾಖಲೆಯನ್ನು ಇದಕ್ಕೆ ಕೊಟ್ಟಿದ್ದಾರೆ.
ವಿಶೇಷವೆಂದರೆ ನತಾಶಾ ಗೌನ್ ಕೇಕ್ ಧರಿಸಿಕೊಂಡು ಫ್ಯಾಷನ್ ಶೋ ಮಾಡಿದ ನಂತರ ಅದನ್ನು ವೇದಿಕೆಯ ಮೇಲೆಯೇ ಗಣ್ಯರು ಕತ್ತರಿಸಿಕೊಂಡು ತಿಂದಿದ್ದಾರೆ. ಆ ಫೋಟೋ ಹಾಗೂ ವಿಡಿಯೊಗಳನ್ನು ಗಿನ್ನಿಸ್ ರೆಕಾರ್ಡ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ಕೇಕ್‌ನ ಕೆಳಭಾಗವವನ್ನು ಅಲ್ಯುಮಿನಿಯಂ ಫ್ರೇಮ್ ಹಾಗೂ ಎರಡು ಮೆಟಲ್ ಬೋಲ್ಟ್‌ಗಳನ್ನು ಬಳಸಿ ಮಾಡಲಾಗಿದೆ. ಹಾಗೆಯೇ ಮೇಲ್ಭಾಗದಲ್ಲಿ ಸಕ್ಕರೆ ಪೇಸ್ಟ್ ಮತ್ತು ಫಾಂಡಂಟ್‌ನ ಮಿಶ್ರಣವಿದೆ. ಅಷ್ಟೊಂದು ಭಾರದ ಗೌನ್ ಕೇಕ್ ಅನ್ನು ಹಾಕಿಕೊಂಡು ನಡೆದಾಡುವುದಕ್ಕೆ ಸಾಧ್ಯವಾಗಬೇಕು ಎನ್ನುವ ಕಾರಣಕ್ಕೆ ಅದಕ್ಕೆ ಚಕ್ರಗಳನ್ನೂ ಅಳವಡಿಸಲಾಗಿತ್ತು.