ನವ ದೆಹಲಿ: 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿ ಎಂಟು ವರ್ಷದ ಬಳಿಕ ತನ್ನ ಪತಿಯ ನಿಜ ಸ್ವರೂಪ ತಿಳಿದು ದಂಗಾಗಿಹೋಗಿದ್ದಾರೆ. ಗುಜರಾತ್ನ ವಡೋದರಾದ ಮಹಿಳೆಯೊಬ್ಬರು ಅಲ್ಲಿನ ಗೋತ್ರಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ತಾನು ಪಕ್ಕಾ ಮೋಸ ಹೋದೆ ಎಂಬುದು ಆ ಮಹಿಳೆಯ ದೊಡ್ಡ ಅಳಲು ಮತ್ತು ನಿರಾಸೆ.
ಅಂದಹಾಗೇ, ಈ ಮಹಿಳೆ ಹೆಸರು ಶೀತಲ್. ಈಕೆಯ ಪತಿ 2011ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ 14 ವರ್ಷದ ಪುತ್ರಿಯೂ ಇದ್ದಳು. ಬದುಕು ಮುನ್ನಡೆಯಬೇಕಲ್ಲ..ಶೀತಲ್ ಇನ್ನೊಂದು ಮದುವೆಯಾಗಲು ನಿರ್ಧಾರ ಮಾಡಿದರು. ಹಾಗಾಗಿ ಮ್ಯಾಟ್ರಿಮೊನಿಯಲ್ ವೆಬ್ಸೈಟ್ ಮೂಲಕ ಸಂಗಾತಿ ಹುಡುಕಾಟ ಶುರು ಮಾಡಿದ್ದರು. ಆಗ ಅದರಲ್ಲಿ ಪರಿಚಯ ಆದವರು ವಿರಾಜ್ ವರ್ಧನ್. ಇವರಿಬ್ಬರೂ 2014ರಲ್ಲಿ ಮದುವೆ ಮಾಡಿಕೊಂಡರು. ಇಬ್ಬರ ಕುಟುಂಬದವರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಹಾರೈಸಿದರು.
ವಿವಾಹದ ಬಳಿಕ ದಂಪತಿ ಹನಿಮೂನ್ಗೆಂದು ಕಾಶ್ಮೀರಕ್ಕೆ ಕೂಡ ಹೋಗಿದ್ದರು. ಆದರೆ ವಿರಾಜ್ ಲೈಂಗಿಕ ಸಂಪರ್ಕಕ್ಕೆ ಒಪ್ಪುತ್ತಿರಲಿಲ್ಲ. ಶೀತಲ್ ಒತ್ತಾಯ ಮಾಡಿದರೂ ಆಗೋದಿಲ್ಲ ಎಂದೇ ಹೇಳುತ್ತಿದ್ದ. ಅದಕ್ಕೆ ಕಾರಣ ಕೇಳಿದಾಗ ‘ನನಗೆ ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಒಂದು ಅಪಘಾತವಾಯಿತು. ಆಗ ಆಗಿದ್ದ ಏಟಿನಿಂದಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕು ಎಂದು ವೈದ್ಯರು ಹೇಳಿದ್ದರು. ನಾನು ಸಂಪೂರ್ಣ ಗುಣಮುಖ ಆಗುವವರೆಗೂ ನೀನು ಸಹಕರಿಸು’ ಎಂದು ವಿರಾಜ್ ಹೇಳಿಕೊಂಡಿದ್ದ. ಹೀಗೆ ಮುಂದುವರಿದುಕೊಂಡೇ ಬಂದಿತ್ತು.
ಆದರೆ 2020ರಲ್ಲಿ ತಾನು ತೂಕ ಕಡಿಮೆ ಮಾಡಿಕೊಳ್ಳುವ ಸರ್ಜರಿಗೆ ಒಳಗಾಗುತ್ತೇನೆ ಎಂದು ಹೇಳಿ ವಿರಾಜ್ ಕೋಲ್ಕತ್ತಕ್ಕೆ ಹೋಗಿದ್ದ. ಅಲ್ಲಿಂದ ಬಂದ ಬಳಿಕ, ‘ತಾನು ಎಂಟು ವರ್ಷದ ಹಿಂದೆ ನಿನ್ನನ್ನು ಮದುವೆಯಾಗುವುದಕ್ಕೂ ಮುನ್ನ ಒಬ್ಬ ಮಹಿಳೆಯೇ ಆಗಿದ್ದೆ. ನಂತರ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ’ ಎಂಬ ಸತ್ಯವನ್ನು ನನಗೆ ಹೇಳಿದ. ಹಾಗೇ, ತನ್ನ ಹೆಸರು ವಿಜೇತಾ ಎಂದಾಗಿತ್ತು ಎಂಬುದನ್ನೂ ತಿಳಿಸಿದ. ಅಲ್ಲಿಂದ ಬಂದ ಬಳಿಕ ಅಸಹಜ ಲೈಂಗಿಕ ಕ್ರಿಯೆಗೆ ನನ್ನನ್ನು ಒತ್ತಾಯಿಸುತ್ತಿದ್ದ. ತೀರ ಅಸಹ್ಯವಾಗುತ್ತಿದೆ. ಆದರೆ 2020ರಲ್ಲಿ ಕೋಲ್ಕತ್ತದಲ್ಲಿ ಯಾವ ಸರ್ಜರಿ ನಡೆಯಿತು ಎಂಬುದು ನನಗೆ ಗೊತ್ತಾಗಲಿಲ್ಲ’ ಎಂದು ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನಾನು ಅವನಲ್ಲ ಅವಳು ಎಂದ ಎಲಾನ್ ಮಸ್ಕ್ ಕುಡಿ! ಲಿಂಗ ಪರಿವರ್ತನೆಗೆ ಮುಂದಾಗಿರೋದೇಕೆ?