Site icon Vistara News

ತನ್ನ ಪಾಲಿನ ಅನ್ನ ಪತಿಗೆ ಬಡಿಸುವ ಪತ್ನಿ! ಈ ವಿಡಿಯೊ ನೋಡಿ ನೆಟ್ಟಿಗರು ಬೈದಿದ್ಯಾಕೆ!

wife gives her food to husband

ಬೆಂಗಳೂರು: ಹಿಂದೊಂದು ಕಾಲದಲ್ಲಿ ಹೆಣ್ಣು ಮಕ್ಕಳು ಪತಿಗಾಗಿ ಪ್ರಾಣವನ್ನೂ ತ್ಯಾಗ ಮಾಡುವ ಕಾಲವಿತ್ತು. ಆದರೆ ಈಗ ಕಾಲ ಹಾಗಿಲ್ಲ. ಹೆಣ್ಣು ಗಂಡು ಇಬ್ಬರೂ ಸಮಾನರೆಂಬ ಕಾಲದಲ್ಲಿ ನಾವಿದ್ದೇವೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್‌ ಕ್ರಿಯೇಟರ್‌ ಒಬ್ಬರು ಪತಿಗೋಸ್ಕರ ತಮ್ಮ ಊಟವನ್ನೇ ತ್ಯಾಗ ಮಾಡುವ ರೀತಿಯಲ್ಲಿ ವಿಡಿಯೊ ಮಾಡಿದ್ದಾರೆ. ಆ ವಿಡಿಯೊ (Viral Video) ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಕೆಲವರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದರೆ ಹಲವಾರು ಜನರಿಂದ ವಿರೋಧಕ್ಕೆ ಗುರಿಯಾಗುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಟಿಮ್ಸಿ ಜೈನ್‌ ಹೆಸರಿನವರು ಇಂಥದ್ದೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಪತಿ ಮತ್ತು ಪತ್ನಿ ಮನೆಯ ಡೈನಿಂಗ್‌ ಟೇಬಲ್‌ ಮೇಲೆ ಊಟಕ್ಕೆ ಕುಳಿತಿರುತ್ತಾರೆ. ಪತ್ನಿಗಿಂತ ಮೊದಲೇ ಪತಿ ಊಟ ಆರಂಭಿಸಿರುತ್ತಾನೆ. ಆತ ಒಂದು ಕೈನಲ್ಲಿ ಮೊಬೈಲ್‌ ಹಿಡಿದುಕೊಂಡು ಅದನ್ನು ನೋಡುತ್ತ ಊಟ ಮಾಡುತ್ತಿರುತ್ತಾನೆ. ಪತ್ನಿ ಇನ್ನೇನು ಊಟ ಆರಂಭಿಸಬೇಕು ಎನ್ನುವಷ್ಟರಲ್ಲಿ ಪತಿ ಇನ್ನೂ ಸ್ವಲ್ಪ ಅನ್ನ ಹಾಕು ಎಂದು ಸನ್ನೆ ಮಾಡಿ, ಮೊಬೈಲ್‌ ನೋಡುವುದನ್ನು ಮುಂದುವರಿಸುತ್ತಾನೆ.

ಇದನ್ನೂ ಓದಿ: Viral News : ಇದರಲ್ಲಿರುವ ಮುತ್ತನ್ನು 30 ಸೆಕೆಂಡುಗಳೊಳಗೆ ಹುಡುಕಿ ನೋಡೋಣ!
ಪತ್ನಿ ಪತಿಗೆ ಅನ್ನ ಹಾಕಲೆಂದು ಹಾಟ್‌ ಬಾಕ್ಸ್‌ ತೆರೆದು ನೋಡುತ್ತಾಳೆ. ಆದರೆ ಅದರಲ್ಲಿ ಅನ್ನ ಖಾಲಿಯಾಗಿರುತ್ತದೆ. ಆದರೆ ಪತಿಗೆ ಅದನ್ನು ಹೇಳಲು ಇಚ್ಛಿಸದ ಆಕೆ, ನಿಧಾನವಾಗಿ ತನ್ನ ತಟ್ಟೆಯಲ್ಲಿದ್ದ ಅನ್ನವನ್ನೇ ಹಾಟ್‌ ಬಾಕ್ಸ್‌ಗೆ ಹಾಕಿ, ಅದರಿಂದ ಪತಿಗೆ ಅನ್ನ ಹಾಕುತ್ತಾಳೆ. ಆತ ಅದನ್ನು ಗಮನಿಸದೆ, ಯಥಾಪ್ರಕಾರ ಫೋನ್‌ ನೋಡುತ್ತ ಊಟ ಮುಂದುವರಿಸುತ್ತಾನೆ.
ಜುಲೈ 22ರಂದು ಟಿಮ್ಸಿ ಜೈನ್‌ ಅವರ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ರೀತಿಯ ವಿಡಿಯೊ ನೋಡುತ್ತಿದ್ದಂತೆ ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳು ಗಂಡನಿಗಾಗಿ ಈ ರೀತಿಯ ತ್ಯಾಗ ಮಾಡಲು ಸಿದ್ಧರಿರುತ್ತಾರೆ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೊಗೆ ಮೆಚ್ಚುಗೆಗಿಂತ ಹೆಚ್ಚಾಗಿ ವಿರೋಧವೇ ವ್ಯಕ್ತವಾಗಿದೆ.


ಈಗಿನ ಕಾಲದಲ್ಲಿ ಇಂತಹ ವಿಡಿಯೊಗಳು ಅಪ್ರಸ್ತುತ ಎಂದು ಜನರು ಹೇಳಲಾರಂಭಿಸಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಊಟ ಕಡಿಮೆ ಮಾಡಿಕೊಂಡು ಗಂಡನಿಗೆ ಹಾಕಬೇಕೆನ್ನುವುದೇನಿಲ್ಲ. ಇಬ್ಬರೂ ಸರಿ ಸಮಾನವಾಗಿ ಹಂಚಿಕೊಂಡ ಮೇಲೆ ಮತ್ತೆ ಅದರಲ್ಲಿ ತ್ಯಾಗ ಮಾಡುವ ಮಾತು ಬರಬಾರದು ಎಂದು ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೊ ಬಗ್ಗೆ ಟ್ವಿಟರ್‌ನಲ್ಲೂ ಭಾರೀ ಚರ್ಚೆ ನಡೆಯುತ್ತಿದೆ. ವಿಡಿಯೊ ಕೇವಲ ಲೈಕ್‌ ಮತ್ತು ಕಮೆಂಟ್‌ಗಳಿಗೋಸ್ಕರ ಮಾಡಲಾಗಿದೆ. ಇದು ಸರಿಯಲ್ಲ ಎಂದು ಜನರು ಹೇಳುತ್ತಿದ್ದಾರೆ. ಭಾರತೀಯ ಗಂಡು ಮಕ್ಕಳು ಹೆಣ್ಣು ಮಕ್ಕಳು ತಮ್ಮ ಊಟವನ್ನೇ ತ್ಯಾಗ ಮಾಡಿದರೂ ಗುರುತಿಸದೆ ಮೊಬೈಲ್‌ನಲ್ಲಿ ಬಿಜಿಯಾಗುತ್ತಾರೆ ಎಂದು ತೋರಿಸುವುದು ತಪ್ಪು ಎಂದು ಗಂಡು ಮಕ್ಕಳು ವಾದ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video : ಫೇರ್‌ವೆಲ್‌ ದಿನದಂದು ಸೀರೆಯುಟ್ಟು ಹುಚ್ಚೆಬ್ಬಿಸುವಂತೆ ಕುಣಿದ ಯುವತಿಯರು!
ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೆ ಜನ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ. ಅಂತೂ ಈ ಸುದ್ದಿ ಭಾರಿ ಸುದ್ದಿಯಲ್ಲಿದೆ.

Exit mobile version