Site icon Vistara News

Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ!

mother suicide

ಹೈದರಾಬಾದ್‌: ಮಕ್ಕಳು ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದಾದರೆ ಮಕ್ಕಳಿಗೆ ಬೈಯುವ, ಹೊಡೆಯುವ ಪೋಷಕರನ್ನು ನೀವು ನೋಡಿರುತ್ತೀರಿ. ಇಲ್ಲವೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿಕೊಂಡು ಕೂರುವವರನ್ನೂ ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ತಾಯಿ ತನ್ನ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ (Viral News) ಚರ್ಚೆ ನಡೆಯುತ್ತಿದೆ.

ಹೈದರಾಬಾದ್‌ನ ಗುಜುಲರಾಮ್‌ನ ಬಾಲಾಜಿ ನಗರ ಎನ್‌ಕ್ಲೇವ್‌ನಲ್ಲಿ ವಾಸವಿದ್ದ 41 ವರ್ಷದ ಪುಷ್ಪ ಜ್ಯೋತಿ ಹೆಸರಿನ ಮಹಿಳೆಗೆ ಇಬ್ಬರು ಗಂಡು ಮಕ್ಕಳು. ಆಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರೆ ಆಕೆ ಮನೆಯನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಳು. ಆಕೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಇತ್ತೀಚೆಗೆ ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಪರೀಕ್ಷೆಯನ್ನು ಬರೆದಿದ್ದ. ಆದರೆ ಆತನ ದುರಾದೃಷ್ಟವೆನ್ನುವಂತೆ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ಇದರಿಂದಾಗಿ ಆತ ಬೇಸರಗೊಂಡಿದ್ದಾನೆ. ಆದರೆ ಆತನಿಗಿಂತ ಹೆಚ್ಚಾಗಿ ಬೇಸರಗೊಂಡ ತಾಯಿ ಪುಷ್ಪ ಜ್ಯೋತಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಮಗನ ಭವಿಷ್ಯದ ಬಗ್ಗೆ ಚಿಂತೆಗೆ ಬಿದ್ದ ಆಕೆ ಬುಧವಾರದಂದು ಮನೆಯಲ್ಲಿನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ಕಚೇರಿಯಲ್ಲೇ ಟ್ರೈನಿ ಐಪಿಎಸ್‌ ಅಧಿಕಾರಿಯನ್ನು ಮದುವೆಯಾದ ಐಎಎಸ್‌ ಅಧಿಕಾರಿ!
ಈ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆತ್ಮಹತ್ಯೆ ಸ್ಥಳಕ್ಕೆ ಬಂದ ಪೊಲೀಸರು ಪುಷ್ಪ ಜ್ಯೋತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆತ್ಮಹತ್ಯೆ ವಿಚಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುಷ್ಪ ಜ್ಯೋತಿ ಅವರ ಆತ್ಮಹತ್ಯೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೀಡಾಗುತ್ತಿದೆ. ಮಕ್ಕಳಿಗೆ ಧೈರ್ಯ ಹೇಳಬೇಕಾದ ಪೋಷಕರೇ ಇಷ್ಟು ದುರ್ಬಲ ಮನಸ್ಥಿತಿಯನ್ನಿಟ್ಟುಕೊಂಡರೆ ಕಷ್ಟ ಎನ್ನುವ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ. ಸಿಎ ಪರೀಕ್ಷೆ ಕಬ್ಬಿಣದ ಕಡಲೆಯಿದ್ದಂತೆ. ಅದನ್ನು ಒಂದೇ ಪ್ರಯತ್ನದಲ್ಲಿ ಪಾಸ್‌ ಮಾಡುವುದು ಕಷ್ಟ ಸಾಧ್ಯ. ಅಷ್ಟೂ ಅರಿತುಕೊಳ್ಳದ ತಾಯಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು ಜನರು ಹೇಳುತ್ತಿದ್ದಾರೆ.

Exit mobile version