ಮೊದಲು ಐಸ್ಕ್ರೀಂ ಎಂದರೆ ಅದು ಹೊರಗೆ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಎಂಬ ಕಾಲವಿತ್ತು. ಆದರೆ ಈಗ ಫ್ರಿಜ್ ಇರುವ ಮನೆಗಳಲ್ಲೆಲ್ಲ ಸಾಮಾನ್ಯವಾಗಿ ಐಸ್ಕ್ರೀಂ ತಯಾರಿ ಮಾಡುತ್ತಾರೆ. ಅದೇನೇ ಇದ್ದರೂ, ಐಸ್ಕ್ರೀಂ ಮಾಡಲು ಫ್ರಿಜ್ ಅಂತೂ ಬೇಕೇಬೇಕು. ಆದರೆ ಫ್ರಿಜ್ ಇಲ್ಲದೆಯೂ ನಾನು ಐಸ್ಕ್ರೀಂ ತಯಾರಿ ಮಾಡುತ್ತೇನೆ ಎನ್ನುತ್ತಾರೆ ಈ ಮಹಿಳೆ. ಈಕೆಯ ಐಡಿಯಾ ನೋಡಿ ನೆಟ್ಟಿಗರು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ವಿಡಿಯೊ ಶೇರ್ (Viral Video) ಮಾಡಿಕೊಂಡಿದ್ದಾರೆ. ನೀವು ಒಮ್ಮೆ ನೋಡಿಬಿಡಿ.
ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್ ಕ್ಯಾನ್ಗೆ ಸುರಿಯುತ್ತಾರೆ. ಇಷ್ಟಾದ ಮೇಲೆ ಆಕೆ ಆ ಕ್ಯಾನ್ಗೆ ಮುಚ್ಚಲು ಹಾಕಿ, ಮತ್ತೊಂದು ದೊಡ್ಡದಾದ ಅಲ್ಯೂಮೀನಿಯಂ ಪಾತ್ರೆಯಲ್ಲಿ ಅದನ್ನು ಇಡುತ್ತಾರೆ ಮತ್ತು ಹಾಲಿನ ಮಿಶ್ರಣ ಇರುವ ಕ್ಯಾನ್ಗೆ ಇರುವ ಹಿಡಿಕೆಗೆ ಒಂದು ಹಗ್ಗ ಕಟ್ಟುತ್ತಾರೆ. ಇದಾದ ಮೇಲೆ ಆಕೆ ಅಲ್ಯೂಮಿನಿಯಂ ಪಾತ್ರೆಯಲ್ಲಿ, ಸ್ಟೀಲ್ ಕ್ಯಾನ್ ಸುತ್ತಲೂ ದೊಡ್ಡದೊಡ್ಡ ಐಸ್ ತುಂಡುಗಳನ್ನು ಹಾಕುತ್ತಾರೆ. ಅಷ್ಟಾದ ಮೇಲೆ ಫ್ಯಾನ್ ಸ್ವಿಚ್ ಆನ್ ಮಾಡುತ್ತಾರೆ. ಅರೆ, ಅವರೇಕೆ ಫ್ಯಾನ್ ಆನ್ ಮಾಡುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಅಲ್ಲೇ ಇರುವುದು ಟ್ವಿಸ್ಟ್…!
ಸ್ಟೀಲ್ ಕ್ಯಾನ್ ಹಿಡಿಕೆಗೆ ಕಟ್ಟಿರುವ ಹಗ್ಗದ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ಗೆ ಕಟ್ಟಲಾಗಿರುತ್ತದೆ. ಫ್ಯಾನ್ ತಿರುಗುತ್ತಿದ್ದಂತೆ ಇತ್ತ ಅಲ್ಯೂಮೀನಿಯಂ ಪಾತ್ರೆಯಲ್ಲಿರುವ ಸ್ಟೀಲ್ ಕ್ಯಾನ್ ಗಿರಗಿರನೆ ತಿರುಗುತ್ತದೆ. ಐಸ್ ತುಂಡುಗಳ ಮಧ್ಯೆ ಅದು ತಿರುಗುತ್ತಿದ್ದಂತೆ, ಅದರೊಳಗೆ ಇರುವ ಹಾಲಿನ ಮಿಶ್ರಣ ಐಸ್ಕ್ರೀಂ ಆಗಿ ಬದಲಾಗುತ್ತದೆ. ಮಹಿಳೆ ಕೆಲ ಹೊತ್ತು ಕ್ಯಾನ್ಗೆ ಮುಚ್ಚಳವನ್ನು ಹಾಕಿ ತಿರುಗಿಸಿ, ಮತ್ತೆ ಕೆಲ ನಿಮಿಷಗಳ ಕಾಲ ಮುಚ್ಚಳವನ್ನು ತೆಗೆದು ತಿರುಗಲು ಬಿಡುತ್ತಾರೆ. ಬಳಿಕ ಅದನ್ನು ಅಲ್ಲಿಂದ ತೆಗೆದು, ಐಸ್ ಕ್ರೀಂ ಎಂದು ಸರ್ವ್ ಮಾಡುತ್ತಾರೆ.
ವಿಡಿಯೊ ಶೇರ್ ಮಾಡಿಕೊಂಡ ಆನಂದ್ ಮಹೀಂದ್ರಾ ಅವರು, ‘ಮನಸ್ಸಿದ್ದಲ್ಲಿ ಮಾರ್ಗ. ಇದು ಹ್ಯಾಂಡ್ ಮೇಡ್ ಮತ್ತು ಫ್ಯಾನ್ ಮೇಡ್ ಐಸ್ ಕ್ರೀಂ. ಇದೆಲ್ಲ ಸಾಧ್ಯವಾಗುವುದು ಭಾರತದಲ್ಲಿ ಮಾತ್ರ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಾರ್ಚ್ 29ರಂದು ಈ ವಿಡಿಯೊವನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಇಲ್ಲಿಯವರೆಗೆ 1.1 ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನರು ಲೈಕ್ಸ್ ಕೊಟ್ಟಿದ್ದಾರೆ. ವಿಶ್ವದಲ್ಲೇ ಅತ್ಯುತ್ತಮವಾದ ಐಸ್ಕ್ರೀಂ ತಯಾರಿಸುವ ವಿಧಾನ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು, ಮಹಿಳೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.