Site icon Vistara News

Viral News : ಈ ಗೊಂಬೆಗಳನ್ನು ಹುಡುಕಿ ಕೊಡುವವರಿಗೆ 6 ಲಕ್ಷ ರೂ. ಬಹುಮಾನ! ನೀವೂ ಟ್ರೈ ಮಾಡಬಹುದು…

Woman offers Rs 6 lakh reward for missing toys

ಸಿಂಗಾಪುರ: ಹೆಣ್ಣು ಮಕ್ಕಳಿಗೆ ಗೊಂಬೆಗಳ ಮೇಲೆ ಪ್ರೀತಿ. ಗೊಂಬೆಗಳನ್ನು ತಮ್ಮ ನಿಜ ಸ್ನೇಹಿತರಂತೆ ಪ್ರೀತಿಸುವವರೂ ಇದ್ದಾರೆ. ಅದೇ ರೀತಿ ಗೊಂಬೆಗಳನ್ನು ತನ್ನ ಮಕ್ಕಳಂತೆ ಪ್ರೀತಿ ಮಾಡುತ್ತಿದ್ದ ಯುವತಿಯೊಬ್ಬಳು ಅವುಗಳನ್ನು ಕಳೆದುಕೊಂಡಿದ್ದು, ಇದೀಗ ಆ ಗೊಂಬೆಗಳನ್ನು ಹುಡುಕಿ ಕೊಡುವವರಿಗೆ ಆರು ಲಕ್ಷ ರೂ. ಅನ್ನು ಬಹುಮಾನವಾಗಿ ಕೊಡುವುದಕ್ಕೆ ಸಿದ್ಧಳಾಗಿದ್ದಾಳೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ವೈರಲ್‌ (Viral News) ಆಗಿದೆ ಕೂಡ.

ಹೌದು. ಇದು ಸತ್ಯವೇ. ಸಿಂಗಾಪುರದಲ್ಲಿರುವ ಯುವತಿ ಮತ್ತು ಆಕೆಯ ಬಾಯ್‌ಫ್ರೆಂಡ್‌ಗೆ ಗೊಂಬೆಗಳೆಂದರೆ ಪ್ರೀತಿಯಂತೆ. ಅದಕ್ಕಾಗಿ ಆಕೆ ಒಂದು ಬೂದು ಬಣ್ಣದ ಮೊಲದ ಗೊಂಬೆ, ಒಂದು ಚಿಕ್ಕ ಬಿಳಿ ಬಣ್ಣದ ಮೊಲದ ಗೊಂಬೆ ಹಾಗೂ ಒಂದು ಕೆಂಪು ಬಣ್ಣದ ಬಟ್ಟೆ ತೊಟ್ಟಿರುವ ಹ್ಯಾಮ್‌ಸ್ಟರ್‌ ಗೊಂಬೆಯನ್ನು ಇಟ್ಟುಕೊಂಡಿದ್ದಳು. ಆಕೆ ಎಲ್ಲಿಗೇ ಹೋಗುವುದಾದರೂ ಆ ಗೊಂಬೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಳಂತೆ. ಆದರೆ ಆಗಸ್ಟ್‌ 5ರಿಂದ ಆಗಸ್ಟ್‌ 7ರ ಅವಧಿಯಲ್ಲಿ ಆ ಗೊಂಬೆಗಳನ್ನು ಆಕೆ ಎಲ್ಲಿಯೋ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ: Viral Video : ಸೈಕಲ್‌ ಓಡಿಸುತ್ತಲೇ ಐ ಲವ್‌ ಮೈ ಇಂಡಿಯಾ ಹಾಡಿಗೆ ನೃತ್ಯ ಮಾಡಿದ ಯುವತಿ!
ಆ ಗೊಂಬೆಗಳಿಗಾಗಿ ಆಕೆ ಮತ್ತು ಆಕೆಯ ಬಾಯ್‌ಫ್ರೆಂಡ್‌ ಈಗಾಗಲೇ ಎಲ್ಲ ಕಡೆ ಹುಡುಕಾಟ ಮಾಡಿದ್ದಾರೆ. ಯುವತಿ ಹೋಗಿದ್ದ ಬಸ್ಸು, ಬಸ್ಸು ನಿಲ್ದಾಣ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಅವರು ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಆ ಗೊಂಬೆಗಳು ಅವರ ಕಣ್ಣಿಗೆ ಬಿದ್ದಿಲ್ಲ. ಹಾಗಾಗಿ ಗೊಂಬೆಗಳನ್ನು ಹುಡುಕಿಕೊಂಡು ಬರುವವರಿಗೆ ದೊಡ್ಡ ಮೊತ್ತದ ಹಣ ನೀಡುವುದಕ್ಕೆ ಅವರು ಮುಂದಾಗಿದ್ದಾರೆ.


ಕಳುವಾದ ಆ ಮೂರು ಗೊಂಬೆಗಳು ಯುವತಿ ಮತ್ತು ಆಕೆಯ ಬಾಯ್‌ಫ್ರೆಂಡ್‌ನ ನಡುವಿನ ಸಂಬಂಧಕ್ಕೆ ಸೇತುವೆಯಂತಿದ್ದವಂತೆ. ಅದರಲ್ಲೂ ಬೂದು ಬಣ್ಣದ ಮೊಲದ ಗೊಂಬೆಯಂತೂ ಯುವತಿಯ ಪ್ರೀತಿಯ ಮಗಳಾಗಿದ್ದಳಂತೆ. ಆಕೆ ಬಾಯ್‌ಫ್ರೆಂಡ್‌ ಜತೆ ಜಗಳ ಆಡಿದಾಗ ಇಲ್ಲವೇ ಯಾವುದೋ ಕಾರಣಕ್ಕೆ ಮುನಿಸಿಕೊಂಡಾಗ ಆಕೆಗೆ ಆ ಗೊಂಬೆಯೇ ಜತೆಯಾಗಿರುತ್ತಿತ್ತಂತೆ. ಹಾಗೆಯೇ ಯಾವುದಾದರೂ ಕಾರಣಕ್ಕೆ ನೋವಲ್ಲಿದ್ದರೆ ಆ ಗೊಂಬೆ ನೋಡಿದಾಗ ನೋವುಗಳೆಲ್ಲ ಮರೆತು ಹೋಗುತ್ತಿತ್ತಂತೆ. ಆ ಗೊಂಬೆಗಳು ಯುವತಿಯ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದವಾದ್ದರಿಂದ ಅವುಗಳನ್ನು ಹುಡುಕಿ ಕೊಡಿ ಎಂದು ಅವರು ಕೇಳಿಕೊಳ್ಳಲಾರಂಭಿಸಿದ್ದಾರೆ.

Exit mobile version