ಬೆಂಗಳೂರು: ವಯಸ್ಸು ಬರೀ ಸಂಖ್ಯೆಯಷ್ಟೇ ಎಂದು ಹೇಳಲಾಗುತ್ತದೆ. ಯಾವುದೇ ಸಾಧನೆ ಮಾಡುವುದಕ್ಕೆ ಯಾವ ವಯಸ್ಸಿನ ಮಿತಿಯೂ ಅಡ್ಡಬರಬಾರದು. ಆದರೆ ಇತ್ತೀಚಿನ ದಿನಗಳಲ್ಲಿ 20-30ರ ವಯಸ್ಸಿನವರೇ ಏನೇನೋ ಅನಾರೋಗ್ಯದಿಂದ ಬಳಲುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಅಮೆರಿಕದ ಈ ಒಬ್ಬ ವ್ಯಕ್ತಿ ಮಾತ್ರ 90ರ ವಯಸ್ಸಿನಲ್ಲಿದ್ದರೂ ಈಗಲೂ ಬಾಡಿ ಬಿಲ್ಡಿಂಗ್ ಮಾಡುತ್ತಾ, ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಬಗೆಗಿನ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಅಮೆರಿಕದ ಜಿಮ್ ಅರಿಂಗ್ಟನ್ ಅವರ ವಯಸ್ಸು 90. ಆದರೂ ಅವರು ಇಂದಿಗೂ ಪ್ರತಿನಿತ್ಯ ಜಿಮ್‌ಗೆ ಹೋಗಿ ವರ್ಕ್‌ಔಟ್ ಮಾಡುತ್ತಾರೆ. ಅಷ್ಟೇ ಏಕೆ, ಕಳೆದ ವರ್ಷ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು ಕೂಡ. ಇಳಿ ವಯಸ್ಸಿನಲ್ಲೂ ಸದೃಢ ದೇಹದೊಂದಿಗೆ ಬಾಡಿ ಬಿಲ್ಡರ್ ಆಗಿರುವ ಜಿಮ್ ಅವರ ಸಾಧನೆಯನ್ನು ಗುರುತಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಅವರಿಗೆ ವಿಶ್ವದ ಅತ್ಯಂತ ಹಿರಿಯ ಬಾಡಿ ಬಿಲ್ಡರ್ ಎನ್ನುವ ದಾಖಲೆಯನ್ನೂ ನೀಡಿದೆ.
ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್ ಎಂದ ಮಗಳು! ಭಾವುಕರಾದ ತಂದೆ!
ಜಿಮ್ ಅವರ ಬಗ್ಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಜಿಮ್ ಅವರು ತಮ್ಮ ಸಾಧನೆಯ ಕುರಿತಾಗಿ ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಅವರು ವರ್ಕ್‌ಔಟ್ ಮಾಡುವ ದೃಶ್ಯಗಳು, ಕಿರಿಯ ಬಾಡಿ ಬಿಲ್ಡರ್‌ಗಳಿಗೆ ಸಲಹೆ ನೀಡುವ ದೃಶ್ಯಗಳನ್ನೆಲ್ಲವನ್ನೂ ವಿಡಿಯೊದಲ್ಲಿ ಸೇರಿಸಲಾಗಿದೆ.
ಈ ವಿಡಿಯೊವನ್ನು ಜುಲೈ 19ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಸಾವಿರಾರು ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ನೂರಾರು ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. “ನಾನು ಎಷ್ಟೋ ವರ್ಷಗಳಿಂದ ಈ ಜಿಮ್ ಅವರ ವಿಡಿಯೊ ನೋಡುತ್ತಿದ್ದೇನೆ. ನನಗೆ ಅವರೇ ಸ್ಫೂರ್ತಿ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ನಾನು ಅವರಿಂದ ಕಲಿತಿದ್ದೇನೆ”, “ಇವರು ಅದ್ಭುತ ವ್ಯಕ್ತಿ. ಇವರು ಈಗಿನ ಸಮಾಜದ ಅನೇಕರಿಗೆ ಸ್ಫೂರ್ತಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.