Site icon Vistara News

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Yamuna Bridge

Yamuna Bridge

ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆ (Railways Ministry) ಆಗಾಗ ತನ್ನ ಕಾಮಗಾರಿಗಳ ವಿವರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತದೆ. ಸ್ವೇಷನ್‌, ಸೇತುವೆ ನಿರ್ಮಾಣ ಕಾಮಗಾರಿ, ಹೊಸ ಯೋಜನೆಗಳ ಮಾಹಿತಿಯನ್ನು ನೀಡುತ್ತಿರುತ್ತದೆ. ಇದೀಗ ರೈಲ್ವೆ ಸಚಿವಾಲಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗ್ರಾದಲ್ಲಿನ ಯಮುನಾ ರೈಲ್ವೆ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ರೈಲ್ವೆ ಹಂಚಿಕೊಂಡಿರುವ, ಡ್ರೋನ್‌ ಸೆರೆಹಿಡಿರುವ ಈ ಚಿತ್ರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ ಸೇತುವೆಯ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದ್ದು, ನೆಟ್ಟಿಗರು ಮನ ಸೋತಿದ್ದಾರೆ (Viral News).

“ಆಗ್ರಾದಲ್ಲಿನ ಯಮುನಾ ಸೇತುವೆಯ ಪಕ್ಷಿ ನೋಟ. ಸೇತುವೆಯ ಹಿನ್ನೆಲೆಯಲ್ಲಿ ಭವ್ಯವಾದ ತಾಜ್ ಮಹಲ್ ಅನ್ನೂ ಕಾಣಬಹುದುʼʼ ಎಂದು ಫೋಟೊಕ್ಕೆ ಕ್ಯಾಪ್ಶನ್‌ ನೀಡಲಾಗಿದೆ. ಫೋಟೊ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. 200ಕ್ಕೂ ಹೆಚ್ಚು ಶೇರ್‌ ಆಗಿದೆ. ಯಮುನೆಯ ಸೌಂದರ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ನೆಟ್ಟಿಗರು ಏನಂದ್ರು?

ʼʼವಾವ್‌ ತಾಜ್‌ʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಜೈ ಭಾರತ್‌, ಜೈ ಭಾರತಿʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼವಿಹಂಗಮ ದೃಶ್ಯʼʼ ಎಂದು ಮಗದೊಬ್ಬರು ಉದ್ಘರಿಸಿದ್ದಾರೆ. ʼʼನಿಜವಾಗಿಯೂ ಈ ಫೋಟೊ ಮನಮೋಹಕವಾಗಿದೆʼʼ ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಯಮುನೆಯ ಒನಪು, ಸೇತುವೆಯ ಗಾಂಭೀರ್ಯ, ತಾಜ್‌ ಮಹಲ್‌ನ ಸೌಂದರ್ಯ ಹಲವರ ಗಮನ ಸೆಳೆದಿದ್ದು ಸುಳ್ಳಲ್ಲ.

ಶತಮಾನಗಳ ಇತಿಹಾಸ

ವಿಶೇಷವೆಂದರೆ ಭಾರತೀಯ ರೈಲ್ವೆಯ ಪ್ರಮುಖ ಜೀವನಾಡಿಯಾದ ಈ ಸೇತುವೆ 1875ರಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ಆಗ್ರಾ ಈಸ್ಟ್ ಬ್ಯಾಂಕ್ ನಿಲ್ದಾಣ ಮತ್ತು ಆಗ್ರಾ ಕೋಟೆ ನಿಲ್ದಾಣವನ್ನು ಇದು ಸಂಪರ್ಕಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ಯಮುನಾ ಸೇತುವೆಯ ಸಮೀಪದ ಆಗ್ರಾ ರೈಲ್ವೆ ನಿಲ್ದಾಣವು ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಪ್ರಯಾಣಿಕರು ಮತ್ತು ಸರಕುಗಳೆರಡಕ್ಕೂ ಪ್ರಮುಖ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಆಗ್ರಾವನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಜನರೊಂದಿಗೆ ನಿರಂತರ ಸಂಪರ್ಕ

ರೈಲ್ವೆ ಸಚಿವಾಲಯವು ರೈಲುಗಳು ಮತ್ತು ಅವುಗಳ ಸೇವೆಗಳ ಬಗ್ಗೆ ಆಗಾಗ ಆಸಕ್ತಿದಾಯಕ ಸಂಗತಿಗಳು ಮತ್ತು ಮಾಹಿತಿಯನ್ನು ಹಂಚಿಕೊಂಡು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಕೆಲವು ವಾರಗಳ ಹಿಂದೆ ಸಚಿವಾಲಯವು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ನಿರ್ಮಿಸಲಾದ ಗುಜರಾತ್‌ನ ಔರಂಗ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿತ್ತು. ವಲ್ಸಾದ್ ಜಿಲ್ಲೆಯ ಔರಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಕಾಮಗಾರಿ 2023ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿತ್ತು. ಜತೆಗೆ ಪಶ್ಚಿಮ ಘಟ್ಟದ ಹಸಿರಿನ ನಡುವೆ, ಗುಡ್ಡಗಳ ಮಧ್ಯೆ ಚಲಿಸುವ ರೈಲಿನ ವಿಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ʼʼಸ್ವರ್ಗ ಸದೃಶ ಪಶ್ಚಿಮ ಘಟ್ಟದ ಸೌಂದರ್ಯವನ್ನು ಭಾರತೀಯ ರೈಲ್ವೆಯೊಂದಿಗೆ ಆನಂದಿಸಿʼʼ ಎನ್ನುವ ಶೀರ್ಷಿಕೆಯಡಿ ಹಂಚಿಕೊಂಡ ಈ ಪೋಸ್ಟ್‌ಗೂ ನೂರಾರು ಲೈಕ್‌ಗಳು ಸಂದಿವೆ.

ಇದನ್ನೂ ಓದಿ: India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Exit mobile version