ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರಿಗೂ ಯೂಟ್ಯೂಬರ್ ಧ್ರುವ ರಾಥಿ ಗೊತ್ತು. ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿತ ವಿಡಿಯೊಗಳನ್ನು ಮಾಡುವ ಮೂಲಕ ಇವರು ಖ್ಯಾತರಾಗಿದ್ದಾರೆ. ಆದರೆ ಇವರ ಪ್ರೀತಿ, ಪ್ರೇಮ, ಪ್ರಣಯದ ಕತೆ ನಿಮಗೆ ಗೊತ್ತೆ? ಯೂಟ್ಯೂಬರ್ ಧ್ರುವ ರಾಥಿ (YouTuber Dhruv Rathee) ತಮ್ಮ ಪ್ರೇಮ ಕಥೆಯನ್ನು (Love story) ಹಂಚಿಕೊಂಡಿದ್ದಾರೆ. ಜರ್ಮನ್‌ನ (Germany) ಜೂಲಿ ಎಲ್ಬ್ರ್ (Juli Lbr) ಅವರೊಂದಿಗಿನ ಮೊದಲ ಭೇಟಿ, ಯಾವಾಗ ಪ್ರೀತಿಯಾಯಿತು, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಾಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.
ಧ್ರುವ ಅವರ ವೃತ್ತಿಪರ ಜೀವನ ಮತ್ತು ವ್ಲಾಗ್‌ಗಳ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿದ್ದರೂ ಅವರ ಜರ್ಮನ್ ಪತ್ನಿ ಜೂಲಿ ಎಲ್ಬ್ರ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. 2021ರಲ್ಲಿ ಧ್ರುವ ಮತ್ತು ಜೂಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ವಿವಾಹವಾದರು. ಅದೂ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ. ಆದರೂ ಅವರು ತಮ್ಮ ಸಂಬಂಧವನ್ನು ಮಾಧ್ಯಮದಿಂದ ಮತ್ತು ಅಭಿಮಾನಿಗಳ ಊಹಾಪೋಹಗಳಿಂದ ದೂರವಿಟ್ಟಿದ್ದರು. 2022ರಲ್ಲಿ ಅವರು ಹಿಂದೂ ಸಂಸ್ಕೃತಿಯಂತೆ ಮತ್ತೆ ವಿವಾಹವಾದರು.
ಜೂಲಿ ಎಲ್ಬ್ರ್ ಅವರೊಂದಿಗೆ ಮೊದಲ ಭೇಟಿ
ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಧ್ರುವ, 2014ರಲ್ಲಿ ಜೂಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಜೂಲಿ ಅವರನ್ನು ಭೇಟಿಯಾಗಿದ್ದರು. ಆಗ ತಮ್ಮಿಬ್ಬರಿಗೂ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು. ಧ್ರುವ ತಮ್ಮ ಇಂಟರ್ನ್‌ಶಿಪ್‌ಗಾಗಿ ರೈಲು ಮೂಲಕ ಹೋಗುತ್ತಿದ್ದಾಗ ಜೂಲಿ ಶಾಲೆಗೆ ಹೋಗುತ್ತಿದ್ದರು. ಅವರು ಪ್ರತಿದಿನ ರೈಲಿನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಮಾತನಾಡಲು ಪ್ರಾರಂಭಿಸಿದರು. ಧ್ರುವ ಅವರು ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದ್ದು ಅದೇ ವರ್ಷ ಎಂದು ಹೇಳಿದ್ದಾರೆ.
ಕನಸಿನಂತೆ ಮದುವೆ
2021ರ ನವೆಂಬರ್ 24ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಧ್ರುವ ಅವರು ತಮ್ಮ ದೀರ್ಘಕಾಲದ ಗೆಳತಿ ಜೂಲಿಯನ್ನು ವಿವಾಹವಾದರು. ಈ ಕುರಿತು ಇನ್ ಸ್ಟಾ ಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಅದು ಭಾರೀ ವೈರಲ್ ಆಗಿತ್ತು. ಜೂಲಿ ಅವರು ಬಿಳಿ ಗೌನ್ ಧರಿಸಿದ್ದು, ಧ್ರುವ ನೇವಿ ಬ್ಲೂ ಧಿರಿಸಿನಲ್ಲಿ ಮಿಂಚಿದ್ದರು.
ಕೋವಿಡ್ ಸಾಂಕ್ರಾಮಿಕದ ಸಮಯವಾದ್ದರಿಂದ ಇವರ ಮದುವೆಯಲ್ಲಿ ಕೇವಲ 22 ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು. ಮದುವೆಯ ಅನಂತರ ದಂಪತಿ ಕೆಲ ಕಾಲ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ತಮ್ಮ ಜೀವನದ ಕೆಲವೊಂದು ಸುಂದರ ಕ್ಷಣಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಹಿಂದೂ ಸಂಸ್ಕೃತಿಯಂತೆ ವಿವಾಹ
ಧ್ರುವ ಅವರು ಪತ್ನಿ ಜೂಲಿಯೊಂದಿಗೆ 2022ರಲ್ಲಿ ಭಾರತಕ್ಕೆ ಬಂದರು. ಬಳಿಕ ಇಲ್ಲಿ ದಂಪತಿ ಹಿಂದೂ ಸಂಪ್ರದಾಯಗಳ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು. ಈ ಕುರಿತು ಧ್ರುವ ಅವರು ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಜೂಲಿ ಅವರು ಭಾರವಾದ ಕಸೂತಿ ಇರುವ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಚೋಕರ್, ಕಿವಿಯೋಲೆ ಮತ್ತು ಮೂಗುತಿ ಯೊಂದಿಗೆ ಹಿಂದೂ ವಧುವಿನಂತೆ ಕಂಗೊಳಿಸಿದ್ದಾರೆ. ಮತ್ತೊಂದೆಡೆ ಧ್ರುವ ಅವರು ಪೇಟದೊಂದಿಗೆ ಶೇರ್ವಾನಿ ಧರಿಸಿದ್ದರು.
ಇದನ್ನೂ ಓದಿ: MS Dhoni Fan: ಪ್ಯಾರಿಸ್ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ
ಜೂಲಿಗೆ ಹಿಂದಿ ಗೊತ್ತು
ಧ್ರುವ ದಂಪತಿ ಪರಸ್ಪರರ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಧ್ರುವ ಅವರು ಜರ್ಮನ್ ಭಾಷೆ ತಿಳಿದಿದ್ದು, ಅವರ ಪತ್ನಿ ಜೂಲಿ ಹಿಂದಿ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಧ್ರುವ ಅವರು ತಮ್ಮ ಪತ್ನಿ ಜೂಲಿಗಿಂತ ಉತ್ತಮವಾಗಿ ಜರ್ಮನ್ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಜೂಲಿ ಅವರಿಗೆ ಹಿಂದಿ ಸ್ವಲ್ಪ ಕಠಿಣವೆಂದು ಪರಿಗಣಿಸಿದ್ದಾರೆ.
ಧ್ರುವ ರಾಥಿ ಅವರ ಆಸ್ತಿ ಎಷ್ಟು?
ಧ್ರುವ ರಾಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.