Site icon Vistara News

Chicken Shawarma: ಬೀದಿ ಬದಿ ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು; ಚಿಕನ್‌ ಪ್ರಿಯರೇ ಎಚ್ಚರ!

Chicken Shawarma

1 Dead, 5 Admitted Due To Food Poisoning After Eating Chicken Shawarma In Mumbai

ಮುಂಬೈ: ಬೀದಿ ಬದಿಯ ಆಹಾರವನ್ನು (Road Side Food) ಸೇವಿಸುವುದು, ಜಂಕ್‌ಫುಡ್‌ಗಳನ್ನು ಹೆಚ್ಚಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೂ, ಬಾಯಿಚಪಲ ತಾಳದೆ ತುಂಬ ಜನ ರೋಡ್‌ ಸೈಡ್‌ ತಿಂಡಿಗಳನ್ನು ಸೇವಿಸುತ್ತಾರೆ. ಹೀಗೆ, ಮಹಾರಾಷ್ಟ್ರದಲ್ಲಿ (Maharashtra) ಬೀದಿ ಬದಿಯಲ್ಲಿ ಚಿಕನ್‌ ಶವರ್ಮಾ (Chicken Shawarma) ತಿಂದ 19 ವರ್ಷದ ಯುವಕನು ಮೃತಪಟ್ಟಿದ್ದಾನೆ. ಇನೂ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿದೆ. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಬಳಿಕ ಆತನು ಎಂದಿನಂತೆ ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಮರುದಿನವೇ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನು ಮಂಗಳವಾರ (ಮೇ 7) ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕೊಳೆತ ಮಾಂಸ ಬೆರೆಸಿದ್ದೇ ಕಾರಣ?

ಬೀದಿ ಬದಿ ಅಂಗಡಿ ಮಾಲೀಕರು ಚಿಕನ್‌ ಶವರ್ಮಾ ತಯಾರಿಸುವಾಗ ಅದಕ್ಕೆ ಕೊಳೆತ ಮಾಂಸವನ್ನು ಬೆರೆಸಿದ್ದೇ ಯುವಕ ಮೃತಪಟ್ಟು, ಐವರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿದೆ. ಈಗಲೂ ಐವರು ಅಸ್ವಸ್ಥರು ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಥಮೇಶ್‌ ಭೋಕ್ಸೆ ಸಾವಿನ ಬಳಿಕ ಅಂಗಡಿ ಮಾಲೀಕರ ವಿರುದ್ಧ ಆತನ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಇಬ್ಬರು ಅಂಗಡಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.

“ಕೊಳೆತ ಮಾಂಸವನ್ನು ಚಿಕನ್‌ ಶವರ್ಮಾಗೆ ಬೆರೆಸಿದ ಕಾರಣ ಸೇವಿಸಿದವರಿಗೆ ಅನಾರೋಗ್ಯ ಉಂಟಾಗಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಥಮೇಶ್‌ ಮಾತ್ರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆರೋಪಿಗಳ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಆನಂದ್‌ ಕಾಂಬ್ಳೆ ಹಾಗೂ ಮೊಹಮ್ದ್‌ ಶೇಖರ್‌ ರಾಜಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Exit mobile version