Site icon Vistara News

Human Animal Conflict : 15 ದಿನದಲ್ಲಿ ವನ್ಯಜೀವಿ -ಮಾನವ ಸಂಘರ್ಷಕ್ಕೆ 11 ಜನ ಸಾವು; ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ

Elephant and Eshwar Khandre

ಬೆಂಗಳೂರು: ಕಳೆದ 15 ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ (Human Animal Conflict) 11 ಜನರು ಸಾವಿಗೀಡಾಗಿದ್ದು, ಅಮೂಲ್ಯ ಜೀವ ಹಾನಿ ತಪ್ಪಿಸಲು ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ (Railway barricade) ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರಿಗೆ 500 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Minister Ishwar Khandre) ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 5) ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅರಣ್ಯ ಘಟಕದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಮಾನವ ಮತ್ತು ವನ್ಯಜೀವಿ ಸಂಘರ್ಷ ಇಂದು ನಿನ್ನೆಯದೇನಲ್ಲ. ಇದು ಹಿಂದಿನಿಂದಲೂ ನಡೆಯುತ್ತಿದೆ. ಆದರೆ, ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಈ ಬಾರಿ ವಾಡಿಕೆಗಿಂತ ಬಹಳ ಕಡಿಮೆ ಮಳೆ ಆಗಿದ್ದು, ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆಯಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರಕುವಂತೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ: Lok Sabha Election 2024 : ಲೋಕಸಭಾ ಟಿಕೆಟ್‌ಗೆ ಪ್ರಬಲ ಸಮುದಾಯಗಳ ಪಟ್ಟು; ಕಾಂಗ್ರೆಸ್‌ಗೆ ಇಕ್ಕಟ್ಟು!

ಆನೆ ಕಾರಿಡಾರ್ ರಕ್ಷಣೆ

ಆನೆ ಕಾರಿಡಾರ್‌ಗಳಲ್ಲಿ (Elephant Corridor) ರಸ್ತೆ, ರೈಲು, ವಿದ್ಯುತ್ ಕಂಬ, ನೀರಿನ ಕೊಳವೆ ಅಳವಡಿಕೆಗಾಗಿ ಕೆಲವು ಭಾಗ ಬಳಕೆಯಾಗಿದೆ. ಆದರೆ, ಖಾಸಗಿಯವರಿಂದ ಒತ್ತುವರಿ ಆಗಿದ್ದರೆ ಇದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ, ಆನೆ ಕಾರಿಡಾರ್ ಅನ್ನು ರಕ್ಷಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕಾಡಿನಂಚಿನಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯ ಶಬ್ದದಿಂದ ವನ್ಯಮೃಗಗಳು (Wild Animals) ನಾಡಿಗೆ ಬರುತ್ತಿದ್ದು, ಇದರ ಬಗ್ಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, ಅರಣ್ಯದೊಳಗೆ ಅಥವಾ ಅರಣ್ಯದ ಅಂಚಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ (Illegal quarrying) ಅವಕಾಶ ಇರುವುದಿಲ್ಲ. ಅಂತಹ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ (Criminal Case) ಹೂಡಲಾಗುವುದು. ಅರಣ್ಯಾಧಿಕಾರಿಗಳ ಲೋಪ ಕಂಡುಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಆನೆಗಳ ದಾಳಿಯಿಂದ ಅಧಿಕ ಸಾವು; ಸಂತಾಪ

ರಾಜ್ಯದಲ್ಲಿ ಆನೆಗಳ ದಾಳಿಯಿಂದಲೇ ಅಧಿಕ ಸಾವು ಸಂಭವಿಸುತ್ತಿದೆ. ಕಳೆದ ಐದೂವರೆ ವರ್ಷದಲ್ಲಿ 148 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. 2018-19ರಲ್ಲಿ 13 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದರೆ, 2019-20ರಲ್ಲಿ 30, 2020-21ರಲ್ಲಿ 26, 2021-22ರಲ್ಲಿ 28, 2022-23ರಲ್ಲಿ 30 ಹಾಗೂ 3.09.2023ರವರೆಗೆ 21 ಅಮೂಲ್ಯ ಜೀವ ಹಾನಿ ಆಗಿದೆ. ಇದು ಅತ್ಯಂತ ಆತಂಕದ ವಿಚಾರ. ಆನೆ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್ ಸೇರಿದಂತೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಮೃತಪಟ್ಟಿದ್ದಾರೆ. ವನ್ಯಜೀವಿ ದಾಳಿಯಿಂದ ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ವನ್ಯಜೀವಿಗಳ ದಾಳಿಯಿಂದ ಮೃತಪಟ್ಟರೆ 15 ಲಕ್ಷ ರೂ. ಪರಿಹಾರ

ವನ್ಯ ಮೃಗಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜತೆಗೆ 4 ವರ್ಷಗಳ ಕಾಲ 4 ಸಾವಿರ ರೂ. ಪಿಂಚಣಿಯನ್ನೂ ನೀಡಲಾಗುತ್ತಿದೆ. ನಾವು ನೀಡುವ ಪರಿಹಾರದಿಂದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಕ್ಕೆ ಆಸರೆ ಆಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಆನಗಳು ಬಂದಾಗ ಹೊರ ಬರಬೇಡಿ

ಆನೆಗಳು ನಾಡಿಗೆ ಬಂದಾಗ, ಅರಣ್ಯ ಇಲಾಖೆಯವರು ಸಾಮಾಜಿಕ ತಾಣಗಳು, ಮಾಧ್ಯಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಆದರೂ ಕೆಲವರು ಮನೆಯಿಂದ ಹೊರಬಂದು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ಇದ್ದಾಗ, ಯಾರೂ ಕಾಡಿನ ಅಂಚಿಗೆ, ತೋಟಗಳಿಗೆ ಹೋಗಬಾರದು ಎಂದು ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

ಹುಲಿ ದಾಳಿ ಬಾಲಕ ಸಾವು; ಸಚಿವರ ಸಂತಾಪ

ನಾಗರಹೊಳೆ ವಲಯದಲ್ಲಿ ಹೆಗ್ಗಡ ದೇವನ ಕೋಟೆ ಬಳಿ 7 ವರ್ಷದ ಬಾಲಕ ಚರಣ್ ನಾಯಕ್‌ನನ್ನು ಸೋಮವಾರ ಹುಲಿ ಕೊಂದಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ಹಿರಿಯ ಐಎಫ್ಎಸ್ ಅಧಿಕಾರಿ ಕುಮಾರ್ ಪುಷ್ಕರ್ ಅವರನ್ನು ಸ್ಥಳಕ್ಕೆ ಕಳಹಿಸಿದ್ದು, ಹುಲಿ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ

ಶಾಶ್ವತ ಪರಿಹಾರ

ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ 6395 ಆನೆಗಳಿವೆ. ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ ಮತ್ತು ಸೌರ ವಿದ್ಯುತ್ ಬೇಲಿಯನ್ನು ಅಲ್ಲಲ್ಲಿ ಹಾಕಲಾಗುತ್ತಿದೆ. ಜತೆಗೆ 7 ಆನೆ ಕಾರ್ಯಾಚರಣೆ ಪಡೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಇವುಗಳ ಮೂಲಕ ನಾಡಿಗೆ ಬಂದ ಆನೆಗಳನ್ನು ತಕ್ಷಣವೇ ಕಾಡಿಗೆ ಅಟ್ಟಲಾಗುತ್ತಿದೆ. ಈ ಎಲ್ಲ ಕ್ರಮಗಳ ಹಿನ್ನೆಲೆಯಲ್ಲಿ ಹಾನಿ ಪ್ರಮಾಣ ತಗ್ಗಿದೆ. ಪ್ರತಿಯೊಂದು ಜೀವವೂ ಅಮೂಲ್ಯ. ಮಾನವ- ವನ್ಯಜೀವಿ ಸಂಘರ್ಷದಿಂದ ಪ್ರಾಣಿಯೂ ಸಾಯಬಾರದು, ಮನುಷ್ಯರೂ ಸಾಯಬಾರದು. ಆದಾಗ್ಯೂ ಆನೆಗಳ ದಾಳಿಯಿಂದ ಸಾವು ಸಂಭವಿಸದಂತೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸಾವು ಕಡಿಮೆ

ಜಾರ್ಖಂಡ್‌ನಲ್ಲಿ ಕೇವಲ 700 ಆನೆಗಳಿವೆ. ಆದರೆ, ಅಲ್ಲಿ ವರ್ಷದಲ್ಲಿ ಸರಾಸರಿ 80 ಸಾವು ಸಂಭವಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ 750 ಆನೆಗಳಷ್ಟೇ ಇವೆ. ಆದರೂ ಅಲ್ಲಿ 55 ಸಾವುಗಳು ಸಂಭವಿಸುತ್ತವೆ. ತಮಿಳುನಾಡಿನಲ್ಲಿ 4 ಸಾವಿರ ಆನೆಗಳಿವೆ. ಈ ವರ್ಷದಲ್ಲಿ ಸರಾಸರಿ 60 ಸಾವು ಸಂಭವಿಸುತ್ತದೆ. ಒಡಿಸ್ಸಾದಲ್ಲಿ ಇರುವುದು 600 ಆನೆಗಳು ಮಾತ್ರ. ಆದರೆ, ಅಲ್ಲಿ ಸರಾಸರಿ 120 ಜೀವಹಾನಿ ಆಗುತ್ತಿದೆ. ಅಸ್ಸಾಂನಲ್ಲಿ 5700 ಆನೆಗಳಿದ್ದು, ಅಲ್ಲಿ ಸರಾಸರಿ 80 ಜನರು ಮೃತಪಡುತ್ತಿದ್ದಾರೆ. ನೆರೆಯ ಕೇರಳದಲ್ಲಿ 2000 ಆನೆಗಳು ಇದ್ದು, ಸರಾಸರಿ 120ಕ್ಕಿಂತ ಹೆಚ್ಚಿನ ಸಾವು ಸಂಭವಿಸುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.

ರೈಲ್ವೆ ಬ್ಯಾರಿಕೇಡ್ ಪರಿಹಾರ

ಕಂದಕ ಮತ್ತು ಸೌರ ತಂತಿ ಬೇಲಿಗೆ ಪ್ರತಿ ವರ್ಷ ನಿರ್ವಹಣಾ ವೆಚ್ಚ ಆಗುತ್ತದೆ. ಆದರೆ, ರೈಲ್ವೆ ಬ್ಯಾರಿಕೇಡ್ ಉತ್ತಮ ಪರಿಹಾರ ಎಂದು ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್.ಸಿ.) ತಜ್ಞರ ವರದಿ ಹೇಳಿದೆ. ರಾಜ್ಯದಲ್ಲಿ ಆನೆ ಹಾವಳಿ ತಪ್ಪಿಸಲು ಸುಮಾರು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ. ಈವರೆಗೆ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪ್ರತಿ ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸುಮಾರು 1.50 ಕೋಟಿ ವೆಚ್ಚ ಆಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಕ್ಯಾಂಪಾ ನಿಧಿ ಬಂದಿಲ್ಲ

ಕ್ಯಾಂಪಾ ನಿಧಿಯಲ್ಲಿ ನಮ್ಮದೇ 500 ಕೋಟಿ ರೂ. ಅನುದಾನ ಇದೆ. ನಾನು ದೆಹಲಿಗೆ ಹೋದಾಗ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡಿ ಕ್ಯಾಂಪಾ ನಿಧಿ ಅಡಿ ಇರುವ ಹಣ ಬಿಡುಗಡೆ ಮಾಡಿದರೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬಹುದು ಎಂದು ಮನವಿ ಮಾಡಿದ್ದೇನೆ. ಆದರೆ, 1.5 ಕೋಟಿ ರೂ. ವೆಚ್ಚ ಮಾಡಿ ರೈಲ್ವೆ ಬ್ಯಾರಿಕೇಡ್ ಏಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಜೀವಕ್ಕಿಂತ ಹಣ ಮುಖ್ಯ ಅಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ: Namma Metro : ಖಾಸಗಿ ವಾಹನ ಬಳಸುವ ಶೇ. 95 ಬೆಂಗಳೂರಿಗರು ಮೆಟ್ರೋಗೆ ಶಿಫ್ಟ್‌ ಆಗಲು ರೆಡಿ!

38 ಆನೆಗಳ ಸಾವು

ರಾಜ್ಯದಲ್ಲಿ ಈ ವರ್ಷ 38 ಆನೆಗಳು ಮೃತಪಟ್ಟಿವೆ. ಈ ಪೈಕಿ 1 ಆನೆ ರೈಲು ಡಿಕ್ಕಿಯಿಂದ ಸತ್ತಿದ್ದರೆ, ವಿದ್ಯುತ್ ಸ್ಪರ್ಶದಿಂದ 10 ಆನೆಗಳು ಮೃತಪಟ್ಟಿವೆ. 2 ಆನೆಗಳು ಗುಂಡಿನೇಟಿನಿಂದ ಸಾವಿಗೀಡಾಗಿದ್ದರೆ, 25 ಆನೆಗಳು ಸ್ವಾಭಾವಿಕ ಸಾವು ಕಂಡಿವೆ ಎಂದು ಸಚಿವ ಸಚಿವ ಈಶ್ವರ ಖಂಡ್ರೆ ವಿವರಿಸಿದರು.

Exit mobile version