Site icon Vistara News

Turbulence: ಟರ್ಬುಲೆನ್ಸ್‌ಗೆ ತುತ್ತಾದ ಮತ್ತೊಂದು ವಿಮಾನ; 12 ಮಂದಿಗೆ ಗಂಭೀರ ಗಾಯ

turbulence

12 injured after turbulence hits Qatar Airways flight to Dublin

ದೋಹಾ: ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಏರ್‌ಲೈನ್‌ ವಿಮಾನವು ಪ್ರಕ್ಷುಬ್ಧತೆಗೆ (Turbulence) ಒಬ್ಬ ವ್ಯಕ್ತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೊಂದು ವಿಮಾನವು ಟರ್ಬುಲೆನ್ಸ್‌ಗೆ ತುತ್ತಾಗಿದೆ. ಕತಾರ್‌ ರಾಜಧಾನಿ ದೋಹಾದಿಂದ (Doha) ಐರ್ಲೆಂಡ್‌ ರಾಜಧಾನಿ ಡಬ್ಲಿನ್‌ಗೆ (Dublin) ತೆರಳುತ್ತಿದ್ದ ವಿಮಾನವು ಪ್ರಕ್ಷುಬ್ಧತೆಗೆ ಸಿಲುಕಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ದೋಹಾದಿಂದ ಡಬ್ಲಿಂಗ್‌ಗೆ ಹೊರಟಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿತು. ವಿಮಾನದಲ್ಲಿ ಏಕಾಏಕಿ ಪ್ರಕ್ಷುಬ್ಧತೆ ಉಂಟಾದ ಕಾರಣ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ 6 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗೆ ಗಾಯಗಳಾಗಿವೆ. “ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನವು ಡಬ್ಲಿನ್‌ನಲ್ಲಿ ಲ್ಯಾಂಡ್‌ ಆಯಿತು. ಲ್ಯಾಂಡ್‌ ಆದ ಕೂಡಲೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು” ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬ್ರಿಟನ್‌ ರಾಜಧಾನಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿತ್ತು. ಬಳಿಕ ಈ ಸಿಂಗಾಪುರ ಏರ್‌ಲೈನ್ಸ್‌ ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಗಿತ್ತು. ಕೂಡಲೇ ವೈದ್ಯರು ಧಾವಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿದ್ದರು. ವಿಮಾನದೊಳಗಿನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದವು.

ಏನಿದು ಟರ್ಬುಲೆನ್ಸ್?‌

ವಿಮಾನವು ಹಾರಾಟ ನಡೆಸುವಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ದಿಢೀರನೆ ಏರುಪೇರಾಗುತ್ತದೆ. ಇದರ ತೀವ್ರತೆಗೆ ವಿಮಾನವು ಹಾರಾಟ ನಡೆಸುವಾಗಲೇ ಏಕಾಏಕಿ ಅಲುಗಾಡುತ್ತದೆ. ಹೀಗೆ ದಿಢೀರನೆ ಅಲುಗಾಡುವುದನ್ನೇ ಟರ್ಬುಲೆನ್ಸ್‌ ಅಥವಾ ಪ್ರಕ್ಷುಬ್ಧತೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ಪ್ರಕ್ಷುಬ್ಧತೆ ಉಂಟಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಪ್ರಮಾಣದಲ್ಲಿ ಉಂಟಾದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಲಗೇಜ್‌ಗಳು ಪ್ರಯಾಣಿಕರ ಮೈಮೇಲೆ ಬೀಳುತ್ತವೆ. ಇನ್ನೂ ಹಲವು ತೊಂದರೆಗಳನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಟರ್ಬುಲೆನ್ಸ್‌ ಉಂಟಾದಾಗ ದಿಢೀರನೆ ವಿಮಾನ ಹಾರುವ ಎತ್ತರವನ್ನು ಕಡಿಮೆಗೊಳಿಸುವುದು ಕೂಡ ಅಪಾಯಕಾರಿ ಎನಿಸಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

Exit mobile version